ಶಿಕ್ಷಣದಿಂದ ಕೈದಿಗಳ ಮನಃ ಪರಿವರ್ತನೆ ಸಾಧ್ಯ: ರಮ್ಯಾ

KannadaprabhaNewsNetwork | Published : Nov 3, 2023 12:31 AM

ಸಾರಾಂಶ

ರಾಮನಗರ: ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂವಿಧಾನದ ಆಶಯದಂತೆ ಕಾರಾಗೃಹ ವಾಸಿಗಳಿಗೆ ಕಲಿಕಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಎಸ್.ರಮ್ಯಾ ಹೇಳಿದರು.
ರಾಮನಗರ: ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂವಿಧಾನದ ಆಶಯದಂತೆ ಕಾರಾಗೃಹ ವಾಸಿಗಳಿಗೆ ಕಲಿಕಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಎಸ್.ರಮ್ಯಾ ಹೇಳಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ 2023-24ನೇ ಸಾಲಿನ ಲಿಂಕ್ ಅನುದಾನದ ಮೂಲ ಸಾಕ್ಷರತಾ ಕಾರ್ಯಕ್ರಮದಡಿ ನಗರದ ಜಿಲ್ಲಾ‌ ಕಾರಾಗೃಹದಲ್ಲಿ "ಕಲಿಕೆಯಿಂದ ಬದಲಾವಣೆ-ಬಂಧನದಿಂದ ಬೆಳಕಿನೆಡೆಗೆ " ಶೀರ್ಷಿಕೆ ಅಡಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಯಾವುದೋ ಒಂದು ಆಕಸ್ಮಿಕ ಘಟನೆಯ ನಿಮಿತ್ತ ಕಾರಾಗೃಹಕ್ಕೆ ಬಂದಿರುವಿರಿ. ಆದ್ದರಿಂದ ಇಲ್ಲಿರುವ ಸಮಯ ತಮಗೆಲ್ಲ ಅತಿ ಮಹತ್ವದ್ದು ಆಗಿದೆ. ಆದ್ದರಿಂದ ತಾವು ಇಂತಹ ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸಿ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅಕ್ಷರಭ್ಯಾಸದ ಜೊತೆಗೆ ಕಾರಾಗೃಹದಲ್ಲಿ ಏರ್ಪಡಿಸಿರುವ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಲೋಕ ಶಿಕ್ಷಣ ಇಲಾಖೆ ಸಹಾಯಕಿ ಪವಿತ್ರ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ದಿನದಿಂದ ಈ ಅಕ್ಷರ ಕಲಿಸುವ ಕಾರ್ಯ ಆರಂಭಗೊಂಡಿದೆ. ಬಾಳಿಗೆ ಬೆಳಕು ಪುಸ್ತಕದಲ್ಲಿ ಬರವಣಿಗೆ, ಓದು, ಸಾಮಾನ್ಯ ಲೆಕ್ಕಾಚಾರ ಹಾಗೂ ಸಾಮಾನ್ಯ ಜ್ಞಾನ ಕಲಿಸುವ ಪುಸ್ತಕದೊಂದಿಗೆ ಶಿಕ್ಷಣದ ಮೂಲಕ ಕೈದಿಗಳ ಮನಃಪರಿವರ್ತನೆಗೆ ಸಹಾಯಕವಾಗುತ್ತದೆ ಎಂದು ಹೇಳಿದರು. ಯಾವುದೋ ಕೆಟ್ಟ ಪರಿಸ್ಥಿತಿ ಸನ್ನಿವೇಶಕ್ಕೆ ಕಟ್ಟುಬಿದ್ದು ಅಪರಾಧ ಕೃತ್ಯಗಳನ್ನು ಎಸಗಿ ಇದೀಗ ಕಾರಾಗೃಹ ವಾಸ ಅನುಭವಿಸುವ ಪರಿಸ್ಥಿತಿಯಲ್ಲಿ ಇರುವ ನೀವು ವಿದ್ಯೆ ಜ್ಞಾನ ಸಂಪಾದಿಸಿದಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ತಪ್ಪು ಮಾಡದೆ ಉತ್ತಮ‌ ಜೀವನ ರೂಪಿಸಿಕೊಳ್ಳಲು ಸಹಕಾರಿ ಎಂದು ತಿಳಿಸಿದರು. ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ಮಾತನಾಡಿ, ವ್ಯಕ್ತಿ ಎಲ್ಲೇ ಇರಲಿ ವಿದ್ಯೆ ಕಲಿಯುವುದು ಸಂವಿಧಾನ ಬದ್ಧ ಹಕ್ಕು, ಪ್ರಾಥಮಿಕ ಶಿಕ್ಷಣದಿಂದ ಶಿಕ್ಷಣ ಕೊಡಿಸುವ ವ್ಯವಸ್ಥೆ ಇದಾಗಿದ್ದು ಅನಕ್ಷರಸ್ಥರನ್ನು ಶಿಕ್ಷಿತರನ್ನಾಗಿ ಮಾಡಲು ಪೂರಕವಾಗಿ ಬಂಧಿ ನಿವಾಸಿಗಳು ಸಹಕರಿಸಬೇಕು ಹಾಗೂ ಇದರ ಸದುಪಯೋಗ ಪಡೆದುಕೊಂಡು ಅಕ್ಷರಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು. ಡಯಟ್ ಉಪನ್ಯಾಸಕರಾದ ರೇವಣ ಸಿದ್ದಯ್ಯ ಪ್ರಧಾನ ಭಾಷಣ ಮಾಡಿದರು. ರಾಮನಗರ ಸಿಲ್ಕ್ ಸಿಟಿ ಲಯನ್ಸ್ ಅಧ್ಯಕ್ಷೆ ಸುಧಾರಾಣಿ ಕಲಾಪ್ರಿಯ, ಕಾರಾಗೃಹ ಸಿಬ್ಬಂದಿ ಸೇರಿದಂತೆ ಹಲವರು ಹಾಜರಿದ್ದರು. 2ಕೆಆರ್ ಎಂಎನ್ 1.ಜೆಪಿಜಿ ರಾಮನಗರ ಕಾರಾಗೃಹದಲ್ಲಿ ಕಲಿಕಾ ಕೇಂದ್ರ ಪ್ರಾರಂಭೋತ್ಸವ ನಡೆಯಿತು.

Share this article