ಕನ್ನಡಪ್ರಭ ವಾರ್ತೆ ಚಾಮರಾಜನಗರ
೧೨ನೇ ಶತಮಾನದ ಶಿವಶರಣರು, ಮಹಾಪುರುಷರು ಕಂಡಂತಹ ಸಮಾನತೆಯ ಸಮಾಜ ಕನಸು ನನಸಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ನಗರದ ಸಮೀಪದ ಕರಿನಂಜನಪುರ ಬಳಿ ವಿಜಯಾಂಬ ಎಚ್.ಜಿ.ಕುಮಾರಸ್ವಾಮಿ ಹಾಗೂ ರೂಪ ಎಚ್.ಜಿ.ಮಹದೇವಪ್ರಸಾದ್ ದಾನವಾಗಿ ನೀಡಿರುವ ೧೭ ಗುಂಟೆ ಜಾಗದಲ್ಲಿ ಸುಮಾರು ೩ ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಾವ್‌ಬಹುದ್ದೂರ್ ಧರ್ಮ ಪ್ರವರ್ತಕ ಶ್ರೀ ಗುಬ್ಬಿ ತೋಟದಪ್ಪನವರ ವೀರಶೈವ ಲಿಂಗಾಯತ ಮಹಿಳಾ ಉಚಿತ ವಿದ್ಯಾರ್ಥಿನಿಲಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಸಮಾನತೆಯ ಕನಸು ನನಸಾಗಬೇಕಾದರೆ ಶಿಕ್ಷಣದ ಜೊತೆ ಎಲ್ಲರ ಸಹಕಾರವು ಮುಖ್ಯ, ಶಿವಶರಣದ ಹಾದಿಯಲ್ಲಿ ನಡೆದ ಗುಬ್ಬಿ ತೋಟದಪ್ಪನವರು ಸಮಾಜದ ಬಡಮಕ್ಕಳ ಶಿಕ್ಷಣಕ್ಕಾಗಿ ತಮ್ಮ ತನು ಮನ ಧನವನ್ನು ಆರ್ಪಿಸಿ ರಾಜ್ಯದಾದ್ಯಂತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ದಾರಿದೀಪವಾಗಿದ್ದಾರೆ ಎಂದರು. ಪ್ರಕೃತಿಯ ಮಡಿಲಿನಲ್ಲಿರುವ ಸುಂದರ ಈ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಮಹಿಳಾ ಉಚಿತ ವಿದ್ಯಾರ್ಥಿನಿಲಯ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ, ಇದಕ್ಕಾಗಿ ದಾನಿಗಳು ಸಹ ಮುಂದೆ ಬಂದಿರುವುದು ಶ್ರೇಷ್ಠ ಕೆಲಸ ಎಂದರು.ಡಾ.ಅಂಬೇಡ್ಕರ್, ಅಬ್ದುಲ್ ಕಲಾಂ ಹೇಳಿದಂತೆ, ಸಮಾಜದಲ್ಲಿ ಬದಲಾವಣೆ ಮತ್ತು ಕ್ರಾಂತಿಯಾಗಬೇಕಾದರೆ ಶಿಕ್ಷಣವೇ ಆಸ್ತ್ರ ಇದನ್ನೇ ಶಿವಶರಣರು ೧೨ನೇ ಶತಮಾನದಲ್ಲಿ ಎಲ್ಲರನ್ನು ಒಳಗೊಂಡು ಸಮಾಜದಲ್ಲಿ ಕ್ರಾಂತಿ ಮಾಡಿ ಮಹಿಳೆಯರಿಗೂ ಆದ್ಯತೆ ನೀಡಿದರು, ಮಹಿಳೆಯರು ಉನ್ನತ ಶಿಕ್ಷಣ ಕಲಿತರೆ ಸಮಾಜ ಸುಧಾರಣೆ ಆಗುತ್ತದ ಎಂದರು. ನಮ್ಮ ಭಾಗದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ದಾನಿಗಳನ್ನು ಒಗ್ಗೂಡಿಸಿ ಅವರಿಗೆ ಐಎಎಸ್, ಕೆಎಸ್‌ಎಸ್, ನೀಟ್‌ನಂತಹ ಪರೀಕ್ಷೆಗಳನ್ನು ಎದುರಿಸಲು ಉಚಿತ ತರಬೇತಿ, ಊಟ, ವಸತಿ ಕೊಡಲಾಗುತ್ತಿದೆ, ಇದರಿಂದ ಈ ಬಾರಿ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದರು.
ವಸತಿ ನಿಲಯಗಳಲ್ಲಿ ಶಿಕ್ಷಣದ ಜೊತೆಗೆ, ಗ್ರಂಥಾಲಯಗಳನ್ನು ಸ್ಥಾಪಿಸಿ, ಮೌಲ್ಯಗಳನ್ನು ಕಲಿಸುವತ್ತ ಗಮನಹರಿಸಿ ಮಹಿಳೆಯರ ಶಿಕ್ಷಣಕ್ಕೆ ನಮ್ಮ ಕುಟುಂಬದ ಬೆಂಬಲ ಸದಾ ಇದೆ ಎಂದರು.ಆಶೀರ್ವಚನ ನೀಡಿದ ಸುತ್ತೂರು ಶಿವರಾತ್ರಿದೇಶಿಕೇಂದ್ರಸ್ವಾಮೀಜಿ, ಗುಬ್ಬಿ ತೋಟದಪ್ಪನವರು ತಮ್ಮ ದಾನ ಧರ್ಮದಿಂದ ಮಹಾರಾಜರಿಂದ ರಾವ್ ಬಹದ್ದೂರ್ ಎಂದು ಗೌರವಿಸಲ್ಟಟ್ಟವರು, ಸಿದ್ದಗಂಗೆ ಡಾ.ಶಿವಕುಮಾರಸ್ವಾಮಿಗಳು, ಪ್ರಾಮಾಣಿಕ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಸಹ ಗುಬ್ಬಿ ತೋಟದಪ್ಪನವರ ವಿದ್ಯಾರ್ಥಿ ನಿಲಯದಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿದವರು ಎಂದರು.ಗುಬ್ಬಿ ತೋಟದಪ್ಪನವರು ಶಾಶ್ವತ ಸಂತಾನ ಪ್ರಾಪ್ತಿಯುಳ್ಳವರು, ವಿದ್ಯಾರ್ಥಿ ನಿಲಯ ತೆರೆಯುವುದರ ಮೂಲಕ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದಾರಿದೀಪವಾಗಿದ್ದಾರೆ, ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸಂಸ್ಕಾರ ಪಡೆಯುತ್ತದೆ ಎಂದರು. ವೈರಾಗ್ಯಮೂರ್ತಿಯಾಗಿರುವ ಅಕ್ಕಮಹಾದೇವಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ತೋಟದಪ್ಪನವರ ವೀರಶೈವ ಲಿಂಗಾಯತ ಮಹಿಳಾ ಉಚಿತ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಕಟ್ಟಲು ಹೊರಟ್ಟಿದ್ದೀರಿ, ದಾನಿಗಳು ಸಹ ಮುಂದೆ ಬಂದಿದ್ದಾರೆ ಎಲ್ಲವು ಒಳ್ಳೆಯದಾಗಲಿ ಎಂದು ಹಾರೈಸಿದರು.ಮರಿಯಾಲದ ಇಮ್ಮಡಿ ಮುರುಘರಾಜೇಂದ್ರಸಾಮೀಜಿ, ನಗರದ ಚನ್ನಬಸವಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಗಣೇಶ್‌ಪ್ರಸಾದ್, ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಇಂತಹ ಒಳ್ಳೆಯ ಕಾರ್ಯಕ್ಕೆ ನಮ್ಮ ಸಹಕಾರ ಸದಾ ಇದ್ದೇ ಇದೆ ಎಂದರು. ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಲಯದ ರಾಜ್ಯಾಧ್ಯಕ್ಷ ರೇವಣ್ಣ ಸಿದ್ದಯ್ಯ ಮಾತನಾಡಿ, ಮಠ ಮಾನ್ಯಗಳು ಮಾದರಿ ಕಾರ್ಯಗಾರಗಳು ಇದ್ದ ರೀತಿ ಎಂದರು.ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ನಗರದಲ್ಲಿ ಗುಬ್ಬಿ ತೋಟದಪ್ಪ ವಸತಿ ನಿಲಯ ನಡೆದು ಬಂದ ದಾರಿ ವಿವರಿಸಿ ಶರಣೆ ಅಕ್ಕಮಹದೇವಿ ೧೨ನೇ ಶತಮಾನದಲ್ಲಿಯೇ ವಿದ್ಯೆ ಕಲಿತು ವಚನಗಳನ್ನು ರಚನೆ ಮಾಡಿ, ಮೊದಲ ಮಹಿಳಾ ವಚನಾಕಾರ್ತಿಯಾಗಿದ್ದಾರೆ. ನಮ್ಮ ಸಮಾಜದ ಹೆಣ್ಣು ಮಕ್ಕಳು ಸಹ ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂಬ ಸದುದ್ದೇಶದಿಂದ ದಾನಿಗಳ ಸಹಕಾರದಿಂದ ಸುಸಜ್ಜಿತ ಹಾಸ್ಟೆಲ್ ಕಟ್ಟಡದ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಅಧ್ಯಕ್ಷ ನಿಜಗುಣರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ನಿವೇಶನ ದಾನಿಗಳಾದ ಪಿ. ವಿಜಯಾಂಬ ಎಚ್.ಜಿ. ಕುಮಾರಸ್ವಾಮಿ ಹಾಗೂ ರೂಪ ಎಚ್.ಜಿ. ಮಹದೇವಪ್ರಸಾದ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಪೌರಾಯುಕ್ತ ರಾಮದಾಸ್, ನಗರಸಭಾ ಸದಸ್ಯ ಮನೋಜ್ ಪಟೇಲ್, ಟ್ರಸ್ಟಿನ ಪದಾಧಿಕಾರಿಗಳು, ಸಮಾಜದ ಮುಖಂಡರು, ದಾನಿಗಳು ಉಪಸ್ಥಿತರಿದ್ದರು.