ಶಿಕ್ಷಣದಿಂದ ಸಮಾಜ ಪರಿವರ್ತನೆ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork |  
Published : Sep 08, 2025, 01:01 AM IST
7ಎಸ್.ಆರ್.ಎಸ್‌4ಪೊಟೋ1 (ಡಾ.ಬಿ.ಆರ್‌.ಅಂಬೇಡ್ಕರ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.)7ಎಸ್.ಆರ್.ಎಸ್‌4ಪೊಟೋ2 (ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅಂಗವಾಗಿ ನಗರದ ಮಾರಿಕಾಂಬಾ ದೇವಾಲಯದ ಎದುರಿನಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಯಿತು.) | Kannada Prabha

ಸಾರಾಂಶ

ಪ್ರತಿಯೊಬ್ಬರು ಶಿಕ್ಷಣವಂತರಾದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ

ಶಿರಸಿ: ಪ್ರತಿಯೊಬ್ಬರು ಶಿಕ್ಷಣವಂತರಾದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಭಾನುವಾರ ನಗರದ ಡಾ.ಬಿ.ಆರ್‌. ಅಂಬೇಡ್ಕರ ಸಭಾಭವನದಲ್ಲಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆರ್ಯ, ಈಡಿಗ, ನಾಮಧಾರಿ, ಬಿಲ್ಲವ, ಅಭಿವೃದ್ಧಿ ಸಂಘಗಳ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣಗುರು ಅವರ ತತ್ವ ಅರ್ಥೈಸಿಕೊಂಡು ಯುವಪೀಳಿಗೆಗೆ ಸಂದೇಶ ಕೊಡಬೇಕು. ಸಮಾಜದಲ್ಲಿ ದಬ್ಬಾಳಿಕೆ, ಅನಿಷ್ಟ ಪದ್ಧತಿ, ಅನಾಚಾರ, ಅಧರ್ಮ ಖಂಡಿಸಿ ಅದರ ವಿರುದ್ಧ ಹೋರಾಡಿದ ಗುರುಗಳು ತುಳಿತಕ್ಕೊಳಗಾದವರ ಪರ ನಿಂತರು. ತುಳಿತಕ್ಕೊಳಗಾದವರಿಗೆ ಸ್ಫೂರ್ತಿ ತುಂಬಿ ತಮ್ಮ ಚಿಂತನೆ ಪರಿಪೂರ್ಣವಾಗಿಸಿದರು. ನೊಂದ, ಅಸ್ಪೃಶ್ಯತೆಗೆ ಒಳಗಾದ ಸಮೂಹಕ್ಕೆ ಶಕ್ತಿ ನೀಡಿದರು. ಎಂದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಸಮಾಜದಲ್ಲಿ ಸಮಾನತೆ ಸಂದೇಶ ಸಾರಿದ ನಾರಾಯಣ ಗುರುಗಳು ಬದುಕಿಗೆ ದಾರಿದೀಪವಾದವರು ಎಂದರು.

ನಾರಾಯಣ ಗುರುಗಳ ಜೀವನದ ತತ್ವಾದರ್ಶಗಳ ಕುರಿತು ಸತೀಶಕುಮಾರ ಉಪನ್ಯಾಸ ನೀಡಿ, ಸಮಾಜ ಸುಧಾರಕರಾದ ನಾರಾಯಣ ಗುರುಗಳ ತತ್ವಗಳು ಸಂಪೂರ್ಣ ಆಚರಣೆಗೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗುರುಗಳ ಜಯಂತಿ ಆಚರಿಸುತ್ತಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸತೀಶ ನಾಯ್ಕ, ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್, ಗಣಪತಿ ನಾಯ್ಕ, ಆರ್.ಜೆ.ನಾಯ್ಕ, ಸಿ.ಎಫ್.ನಾಯ್ಕ, ಗೀತಾ ಶೆಟ್ಟಿ, ಆರ್.ಜಿ.ನಾಯ್ಕ, ಬಿಇಒ ನಾಗರಾಜ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಗ್ರೇಡ್ ೨ ತಹಸೀಲ್ದಾರ ರಮೇಶ ಹೆಗಡೆ ಸ್ವಾಗತಿಸಿದರು. ಈಶ್ವರ ನಾಯ್ಕ ನಿರೂಪಿಸಿದರು.

ಡೊಳ್ಳು ವಾದ್ಯಕ್ಕೆ ಹೆಜ್ಜೆ ಹಾಕಿದ ಶಾಸಕ:

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅಂಗವಾಗಿ ನಗರದ ಮಾರಿಕಾಂಬಾ ದೇವಾಲಯದ ಎದುರಿನಿಂದ ಎರಡ್ಮೂರು ಕಿಮೀ ದೂರದ ಅಂಬೇಡ್ಕರ್ ಭವನವರೆಗೆ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಪಾಲ್ಗೊಂಡಿದ್ದರು. ಈ ವೇಳೆ ಡೊಳ್ಳು ವಾದ್ಯಗಳ ಮೆರಗು ನೀಡಿದವು. ಡೊಳ್ಳು ವಾದನಕ್ಕೆ ಶಾಸಕ ಭೀಮಣ್ಣ ನಾಯ್ಕ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌