ಸಿದ್ದಾಪುರ:
ಮಾನವೀಯ ಸಂಬಂಧಗಳಿಗೆ ಶಿಕ್ಷಣ ಇಲಾಖೆ ಹೆಚ್ಚು ಗೌರವ ನೀಡಲಿದೆ. ವಿದ್ಯೆ ಮತ್ತು ಅರಿವು ವಿಸ್ತರಿಸುವ ಕಾರ್ಯ ಇಲಾಖೆಯಿಂದ ಆಗುತ್ತಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಪಿ. ಬಸವರಾಜ ಹೇಳಿದರು.ಅವರು ತಾಲೂಕಿನ ಶಿಕ್ಷಕರ ವೇದಿಕೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಮಾಧ್ಯಮಿಕ ಶಾಲಾ ನೌಕರರ ಸಂಘದ ಸಹಯೋಗದಲ್ಲಿ ಪಟ್ಟಣದ ಬಾಲಭವನದಲ್ಲಿ ಹಮ್ಮಿಕೊಂಡ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ ಅವರ ಬೀಳ್ಕೊಡುಗೆ ಮತ್ತು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅವರ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಇಲಾಖೆಯ ಬೇರೆ ಬೇರೆ ಹಂತಗಳಲ್ಲಿ ಕಾರ್ಯನಿರ್ವಹಿಸಿದ ಜಿ.ಐ. ನಾಯ್ಕ, ವ್ಯಕ್ತಿಯೊರ್ವನಲ್ಲಿ ಬದ್ಧತೆ ಇದ್ದಾಗ ಅತ್ಯುತ್ತಮ ಸಾಧನೆ ಮಾಡಬಹುದು ಎನ್ನುವುದಕ್ಕೆ ನಿದರ್ಶನವಾಗಿದ್ದಾರೆ. ವೃತ್ತಿಯಲ್ಲಿ ಎದುರಾಗುವ ಅಡೆ-ತಡೆಗಳನ್ನು ಸಮಾಧಾನ ಚಿತ್ತದಿಂದ ಗ್ರಹಿಸಿ, ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸುವ ಮನಸ್ಥಿತಿ ಅವರದ್ದು. ಅವರಿಂದ ಶಿಕ್ಷಣ ಇಲಾಖೆಗೆ ಅಮೂಲ್ಯವಾದ ಕೊಡುಗೆಗಳು ದೊರೆಕಿವೆ ಎಂದರು.ಸನ್ಮಾನ ಸ್ವೀಕರಿಸಿದ ಜಿ.ಐ. ನಾಯ್ಕ, ನನ್ನ ಸೇವಾವಧಿಯಲ್ಲಿ ಕಾರ್ಯನಿರ್ವಹಿಸಿದ ಸಂತೃಪ್ತಿ ಇದೆ. ಇದು ಮರೆಯಲಾಗದ್ದು. ಬುದ್ಧಿಶಾಲಿ ಮಕ್ಕಳ ಜತೆಗೆ ಕೆಳಹಂತದಲ್ಲಿರುವ ಮಕ್ಕಳನ್ನೂ ಶೈಕ್ಷಣಿಕವಾಗಿ ಉತ್ತಮಗೊಳಿಸುವ ಜವಾಬ್ದಾರಿ ಇರುವ ಶಿಕ್ಷಕರು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.ಸನ್ಮಾನ ಸ್ವೀಕರಿಸಿದ ನೂತನ ಬಿಇಒ ಎಂ.ಎಚ್. ನಾಯ್ಕ, ಜಿ.ಐ. ನಾಯ್ಕ ಓರ್ವ ಸಜ್ಜನ, ಮಾನವೀಯ ಮೌಲ್ಯದ ವ್ಯಕ್ತಿ. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದವರು. ನಾವೆಲ್ಲರೂ ಇನ್ನಷ್ಟು ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿಸೋಣ ಎಂದರು.ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ರವಿ ನಾಯ್ಕ, ಪ್ರೌ.ಶಾ.ಸಹ ಶಿ. ಸಂಘದ ಅಧ್ಯಕ್ಷ ಟಿ.ಕೆ. ನಾಯ್ಕ, ಮಾ.ಶಾ.ನೌ. ಸಂಘದ ಕಾರ್ಯದರ್ಶಿ ಲೋಕೇಶ ನಾಯ್ಕ, ಪ್ರೌ.ಸ.ಶಿ. ಸಂಘದ ಕಾರ್ಯದರ್ಶಿ ಚಂದ್ರಶೇಖರ ನಾಯ್ಕ, ಶಿಕ್ಷಕರ ವೇದಿಕೆ ಕಾರ್ಯದರ್ಶಿ ಮಹೇಶ ಶೇಟ್, ಎಂ.ಎಂ. ಅಂಬಿಗಾರ್, ಎಚ್. ಪಾಲೇಕರ, ರೀಟಾ, ಪ್ರೌ.ಶಾ. ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ಪಮ್ಮಾರ ಇದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಕೆ. ನಾಯ್ಕ ಕಡಕೇರಿ ಸ್ವಾಗತಿಸಿದರು. ಗಣೇಶ ಪೂಜಾರಿ, ಸಂತೋಷ ಅಳ್ವೆಕೋಡಿ ನಿರೂಪಿಸಿದರು. ಶ್ರೀಕಾಂತ ನಾಯ್ಕ ವಂದಿಸಿದರು.