ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ
ಶಿಕ್ಷಣ ಇಲಾಖೆಯಲ್ಲಿ 6 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಯಿದ್ದು, ಒಬ್ಬೊಬ್ಬರು ಒಂದು ಮಗುವನ್ನು ಸರ್ಕಾರಿ ಶಾಲೆಗೆ ದಾಖಲಿಸಿದರೆ, ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಳವಾಗುತ್ತದೆ. ಈ ಕುರಿತು ಅಧಿಕಾರಿಗಳು ಒಮ್ಮೆ ಯೋಚಿಸಿ ನೋಡಿ. ಮಕ್ಕಳ ದಾಖಲಾತಿ ಕಡೆ ಗಮನ ನೀಡಿ, ಮುತುವರ್ಜಿ ವಹಿಸಿ ಕೆಲಸ ಮಾಡಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶವು ನಿಗದಿತ ಗುರಿ ತಲುಪಬೇಕೆನ್ನುವುದು ಮುಖ್ಯಮಂತ್ರಿಯವರ ಆಶಯವಾಗಿದೆ.
ಅಧಿಕಾರಿಗಳು ಉತ್ತಮ ಫಲಿತಾಂಶಕ್ಕೆ ಈಗಿನಿಂದಲೇ ಕಾರ್ಯಯೋಜನೆ ರೂಪಿಸಬೇಕು. ಹಂತ-ಹಂತವಾಗಿ ಅದನ್ನು ಕಾರ್ಯರೂಪಕ್ಕೆ ತರಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅಡಿಪಾಯ ಹಾಕಿದಂತಾಗುತ್ತದೆ. ಕೊನೆಯ ಸಮಯದಲ್ಲಿ ಗೊಂದಲದಲ್ಲಿ ಅನುಷ್ಠಾನಗೊಳಿಸುವುದಲ್ಲ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮನೆಗೆ ಹೋಗಿ ಕರೆತರುವ ಕೆಲಸ ಮಾಡಬೇಕು. ಮುಖ್ಯವಾಗಿ ಉನ್ನತ ಅಧಿಕಾರಿಗಳು ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ ನೀಡಿ, ಅವರನ್ನು ತಮ್ಮ ಸರ್ಕಾರಿ ವಾಹನ(ಕಾರ್) ಮೂಲಕ ಕರೆತಂದರೆ ಆ ಮಗುವಿಗೆ ನಾನು ವಿದ್ಯಾಭ್ಯಾಸ ಪಡೆಯಬೇಕೆಂಬ ಹಂಬಲ ಹುಟ್ಟಿಕೊಳ್ಳುತ್ತದೆ. ನಂತರ ಕರೆತಂದ ಅಧಿಕಾರಿಯೂ ಸಹ ಆ ಮಗುವಿನ ಮೇಲೆ ಹೆಚ್ವಿನ ಕಾಳಜಿ ಕುರಿತು ವಿಚಾರಿಸ ತೊಡಗುತ್ತಾನೆ. ಇದರಿಂದ ಸುತ್ತ-ಮುತ್ತಲಿನ ಪೋಷಕರು ಸಹ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಮುಂದೆ ಬರುತ್ತಾರೆ ಎಂದು ಸಚಿವರು ತಿಳಿಸಿದರು.
ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಶೇ.94ರಷ್ಟು ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ. ಜಿಲ್ಲೆಯಲ್ಲಿ 8 ಸಾವಿರ (9 ಮತ್ತು 10 ನೇ ತರಗತಿ) ವಿದ್ಯಾರ್ಥಿಗಳು ಎನ್.ಎಸ್.ಕ್ಯೂ.ಎಫ್ ಐಟಿ ವಿಷಯ ಓದುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.
ಮುಖ್ಯಮಂತ್ರಿಯವರ ನಿರ್ದೇಶನದಂತೆ, ಶಿಕ್ಷಣ ಇಲಾಖೆಯನ್ನು ಕೆಡಿಪಿ ಸಭೆಯಲ್ಲಿ ಮುಖ್ಯ ವಿಷಯವಾಗಿ ಚರ್ಚಿಸಬೇಕು. ಎಲ್ಲಾ ಮೂಲಭೂತ ಸೌಕರ್ಯಗಳಿಗೆ ಈ ಇಲಾಖೆಗೆ ಸಾಕಷ್ಟು ಅನುದಾನ ಸರ್ಕಾರ ನೀಡುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆ ವಲಯಗಳಿದ್ದು, ಅವುಗಳಿಂದ ಬರುವ ಸಿಎಸ್‌ಆರ್ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಬಳಸಬೇಕು. ಅವರಿಂದ ಯಾವುದೇ ರೀತಿಯಲ್ಲಾದರೂ ದಾನ ಪಡೆಯಬೇಕು ಎಂದು ಹೇಳಿದರು.
ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಈ ಹಿಂದೆ ಅದೇ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಶಾಲೆಗಳ ಅಭಿವೃದ್ಧಿಗೆ ದೇಣಿಗೆ ಹಾಗೂ ಕೊಡುಗೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಎಡಿಸಿ ಮಹಮ್ಮದ್ ಝುಬೇರ್, ಡಿಡಿಪಿಐ ಬಿ.ಉಮಾದೇವಿ, ಡಿಡಿಪಿಯು ಟಿ.ಪಾಲಾಕ್ಷಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಕಿ ಲಕ್ಷ್ಮಿಕಿರಣ್ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಇಓ ಅಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿ ಅಧಿಕಾರಿಗಳು ಉಪಸ್ಥಿತರಿದ್ದರು.