ಉಮ್ಮತ್‌ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ನಿಂದ ಶಿಕ್ಷಣ ಮೇಳ

KannadaprabhaNewsNetwork |  
Published : May 13, 2026, 01:45 AM IST
ಚಿತ್ರ : 12ಎಂಡಿಕೆ2 : ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಶ್ರೇಷ್ಠ ಅಂಕಗಳಿಂದ ಮಾತ್ರವೇ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ, ಇದರ ಹೊರತಾಗಿಯೂ ಒಂದು ಬದುಕಿದೆ ಎಂಬುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅರಿತುಕೊಳ್ಳಬೇಕು. ಜೀವನ ಕೇವಲ ಅಂಕಗಳಿಗೆ ಸೀಮಿತವಾಗಬಾರದು ಎಂದು ಲೇಖಕ ಹಾಗೂ ಪ್ರಾಧ್ಯಾಪಕ ಅರ್ಜುನ್ ಮೌರ್ಯ ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶ್ರೇಷ್ಠ ಅಂಕಗಳಿಂದ ಮಾತ್ರವೇ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ, ಇದರ ಹೊರತಾಗಿಯೂ ಒಂದು ಬದುಕಿದೆ ಎಂಬುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅರಿತುಕೊಳ್ಳಬೇಕು. ಜೀವನ ಕೇವಲ ಅಂಕಗಳಿಗೆ ಸೀಮಿತವಾಗಬಾರದು ಎಂದು ಲೇಖಕ ಹಾಗೂ ಪ್ರಾಧ್ಯಾಪಕ ಅರ್ಜುನ್ ಮೌರ್ಯ ಸಲಹೆ ನೀಡಿದ್ದಾರೆ. ಉಮ್ಮತ್‌ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಶಿಕ್ಷಣ ಮೇಳ, ಪ್ರತಿಭಾ ಪುರಸ್ಕಾರ, 10ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.100ರಷ್ಟು ಸಾಧನೆ ಮಾಡಿದ ಶಾಲಾ ಕಾಲೇಜುಗಳ ಪ್ರಾಂಶುಪಾಲರನ್ನು, ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳ ಜೊತೆಯಲ್ಲಿಯೇ ಸವಾಲುಗಳಿವೆ. ಅವುಗಳ ಬಗ್ಗೆಯೂ ಜವಾಬ್ದಾರಿ ವಹಿಸಬೇಕು. ಶಿಕ್ಷಣ ಮಾತ್ರವೇ ವ್ಯಕ್ತಿಯ ಧರ್ಮವನ್ನು ನಿರ್ಧರಿಸುತ್ತದೆಯೇ ಹೊರತು, ಚೌಕಟ್ಟಿನ ಧರ್ಮ ಶಿಕ್ಷಣವನ್ನು ನಿರ್ಧರಿಸುವುದಿಲ್ಲ ಎಂದರು.ಕೊಡ್ಲಿಪೇಟೆಯ ಎಪಿಜೆ ಅಬ್ದುಲ್ ಕಲಾಂ ಶಾಲೆಯ ಪ್ರಾಂಶುಪಾಲ ಡಾ.ಗುರುಸ್ವಾಮಿ ಅವರು ಮಾತನಾಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಹಲವು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಹೇಳಿದರು. ನ್ಯಾಯಾಧೀಶೆ ಸಯಿದಾ ಕಶ್ಮೀರ ಸಿಮ್ರಾನ್ ಮಾತನಾಡಿ, ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಬದುಕು ಕಟ್ಟಿಕೊಳ್ಳಲು ಶಿಕ್ಷಣದಿಂದ ಮಾತ್ರವೇ ಸಾಧ್ಯ. ಅದರಲ್ಲೂ ಹೆಣ್ಣಿಗೆ ಶಿಕ್ಷಣವೇ ಅತೀ ಮುಖ್ಯವಾಗಿದ್ದು, ಈ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉಮ್ಮತ್ ಒನ್ ಕೊಡಗು ಸಂಸ್ಥೆ ಮೂಲಕ ನ್ಯಾಯಾಧೀಶೆ ಸಯಿದಾ ಕಶ್ಮೀರ ಸಿಮ್ರಾನ್, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಮೈಸೂರಿನ ಉದ್ಯಮಿ ಸಿದ್ದಿಕ್ ಹಂಸ ಹಾಗೂ ಸಿವಿಲ್ ಇಂಜಿನಿಯರ್ ಅಲ್ಫೀಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶೈಕ್ಷಣಿಕ ಸಾಧನೆಗೆ ಸನ್ಮಾನ: 10ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ತೋರಿದ ಜಿಲ್ಲೆಯ ಐವರು ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ಧನ ವಿತರಿಸಿದರು. ಇದೇ ವೇಳೆ ಜಿಲ್ಲೆಯ 200 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿಗೆ ಪ್ರೋತ್ಸಾಗ ಧನ ವಿತರಿಸಲಾಯಿತು. 10ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದ ಜಿಲ್ಲೆಯ ಒಟ್ಟು 47 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಪ್ರಾಂಶುಪಾಲರನ್ನು ಸನ್ಮಾನಿಸಿ, ಗೌರವಿಸಲಾಯಿತು.ಇದೇ ಸಂದರ್ಭ ಪುಣೆಯ ಅನೀಸ್ ಡಿಫೆನ್ಸ್ ಕೆರಿಯರ್ ಇನ್ಸಿಟ್ಯೂಟ್ ಸಂಸ್ಥಾಪಕ ಅನೀಸ್ ಕುಟ್ಟಿ ಹಾಗೂ ವೃತ್ತಿ ಮಾರ್ಗದರ್ಶಕರು ಮತ್ತು ಪ್ರೇರಕ ಭಾಷಣಕಾರ ರಫೀಕ್ ಮಾಸ್ಟರ್ ಅವರು ಶೈಕ್ಷಣಿಕ ವಲಯದಲ್ಲಿರುವ ಅವಕಾಶ, ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಯಾಗುವ ಬಗೆ, ವೃತ್ತಿ ಶಿಕ್ಷಣ, ಸರಕಾರದ ಸೌಲಭ್ಯಗಳು, ಉದ್ಯೋಗಾವಕಾಶ ಮತ್ತಿತ್ತರ ವಿಚಾರಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಿದರು. ಉಮ್ಮತ್ ಒನ್ ಸಂಸ್ಥೆಯ ಪ್ರಮುಖರಾದ ಎಂ.ಎಂ.ಹಾರೂನ್, ಸಿಇಓ ತನ್ವೀರ್, ಅಬ್ದುಲ್ ಮಜೀದ್, ಖಾಲಿದ್ ಹಾಕತ್ತೂರು, ಅಬ್ದುಲ್ ಲತೀಫ್, ನಿಸಾರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಕ್ಕೇರ ತಂಡಕ್ಕೆಕೊಡವ ಮುಸ್ಲಿಂ ಜಮ್ಮ ಕಪ್
ಕಾರ್ಕಳ-ಹೆಬ್ರಿ ಭಾಗದಲ್ಲಿ ಸುಂಟರಗಾಳಿ ಸಹಿತ ಮಳೆ