ಶಿಕ್ಷಣ, ಆರೋಗ್ಯ ಮಕ್ಕಳ ಮೂಲಭೂತ ಹಕ್ಕು: ನ್ಯಾ. ಬಸವರಾಜ್‌

KannadaprabhaNewsNetwork |  
Published : Jun 14, 2026, 03:00 AM IST
ಚಿತ್ರ :  12ಎಂಡಿಕೆ1 : ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಉದ್ಘಾಟನೆ.  | Kannada Prabha

ಸಾರಾಂಶ

ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಆಟ-ಪಾಠ ಮತ್ತು ಸುರಕ್ಷಿತಾ ಬಾಲ್ಯ ದೊರೆಯುವುದು ಮೂಲಭೂತ ಹಕ್ಕಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಗಮನಹರಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಕೆ. ಬಸವರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಆಟ-ಪಾಠ ಮತ್ತು ಸುರಕ್ಷಿತಾ ಬಾಲ್ಯ ದೊರೆಯುವುದು ಮೂಲಭೂತ ಹಕ್ಕಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಗಮನಹರಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಕೆ. ಬಸವರಾಜ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ವಕೀಲರ ಸಂಘ ಆಶ್ರಯದಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಡತನ, ಅಜ್ಞಾನ, ನಿರುದ್ಯೋಗ ಮತ್ತು ಸಾಮಾಜಿಕ ಸಮಸ್ಯೆಗಳ ಕಾರಣದಿಂದ ಅನೇಕ ಮಕ್ಕಳು ಕಾರ್ಖಾನೆ, ಹೋಟೆಲ್, ಅಂಗಡಿಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸಿ 14 ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದರು.ಮಕ್ಕಳು ರಾಷ್ಟ್ರದ ಅಮೂಲ್ಯ ಆಸ್ತಿ ಹಾಗೂ ಭವಿಷ್ಯದ ನಿರ್ಮಾತೃಗಳಾಗಿದ್ದು, ಶಾಲೆಯಲ್ಲಿ ಕಲಿಯಬೇಕಾದ, ಆಟವಾಡಬೇಕಾದ ಮತ್ತು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕಾದ ವಯಸ್ಸಿನಲ್ಲಿ ದುಡಿಮೆಗೆ ತಳ್ಳಲ್ಪಡುವುದು ಅತ್ಯಂತ ವಿಷಾದನೀಯ. ಬಡತನ, ಅನಕ್ಷರತೆ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಬಾಲ ಕಾರ್ಮಿಕ ಪದ್ಧತಿಗೆ ಪ್ರಮುಖ ಕಾರಣವಾಗಿದೆ. ಆದರೆ ಈ ನೆಪದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ತಪ್ಪಿಸಬಾರದು ಎಂದು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯ ಒಂದು ಉತ್ತಮ ಘಟ್ಟವಾಗಿದೆ. ಬಾಲ್ಯದಲ್ಲಿ ಸದಾ ಚಟುವಟಿಕೆಯಿಂದ ಇರಬೇಕು. ಅದನ್ನು ಬಿಟ್ಟು ಬಾಲ್ಯವನ್ನು ಕಸಿದುಕೊಳ್ಳಬಾರದು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಶಿಕ್ಷಣ, ಆರೋಗ್ಯ ಮತ್ತು ಶಿಸ್ತುಬದ್ಧ ಜೀವನಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಒಳ್ಳೆಯ ನೀತಿ ಮತ್ತು ಮೌಲ್ಯವನ್ನು ಕಲಿಸಬೇಕು. ಇದರಿಂದ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಘೋಷ ವಾಕ್ಯ ಪ್ರಕಟಿಸಿದೆ. ಆ ನಿಟ್ಟಿನಲ್ಲಿ ಕಲಿಕೆಗೆ ಒತ್ತು ನೀಡಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆ ಕುರಿತು ವಕೀಲರಾದ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಕಾನೂನು, ನಿಯಮಗಳು ಏನೇ ಇದ್ದರೂ ಸಹ ಸ್ವಯಂ ನಿರ್ವಹಣೆ ಮತ್ತು ಪಾಲನೆ ಅತಿ ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಕಾರ್ಮಿಕ ಇಲಾಖೆಯ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ. ಯತ್ನಟ್ಟಿ ಮಾತನಾಡಿ, ಕೊಡಗು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಜಿಲ್ಲೆಯಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸ್ಥಾಪಿಸಲಾಗಿದೆ. ಅದರಂತೆ 2017ರಿಂದ ಇಲ್ಲಿಯವರಗೆ ಸುಮಾರು 3,455 ತಪಾಸಣೆ ಕೈಗೊಂಡು, 30 ಬಾಲ ಕಾರ್ಮಿಕರು ಹಾಗೂ 64 ಕಿಶೋರ ಕಾರ್ಮಿಕರು ಕಂಡುಬಂದಿದ್ದು, ಇವರುಗಳ ಪೈಕಿ 37 ಮಕ್ಕಳನ್ನು ಪುನರ್ವಸತಿಗೊಳಿಸಲಾಗಿದ್ದು, ಇನ್ನುಳಿದ 57 ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್. ಸಿರಾಝ್ ಅಹ್ಮದ್ ಅವರನ್ನು ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸುವಲ್ಲಿ ಉತ್ತಮ ಕೆಲಸ ಮಾಡಿರುವುದಕ್ಕಾಗಿ ಸನ್ಮಾನಿಸಲಾಯಿತು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ವಿ. ಅಂಬಿಕಾ ಇದ್ದರು. ಹಿರಿಯ ಕಾರ್ಮಿಕ ನಿರೀಕ್ಷಕ ಎಸ್. ಶಶಿಧರ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ ನಿರೂಪಿಸಿದರು. ಕಾರ್ಮಿಕ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಯಶೋಧ ಪ್ರಾರ್ಥಿಸಿದರು. ಕೊಡಗು ವಿದ್ಯಾಲಯದ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ವಂದೇಮಾತರ ಗೀತೆ ಹಾಡಿದರು. ಗಿರೀಶ್ ಮತ್ತು ತಂಡದವರು ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವ ಕುರಿತು ಹಾಡು ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಗಿರಿ ಬೆಟ್ಟದಲ್ಲಿ ಧರ್ಮಭೂಷಣ ಜಿನೈಕ್ಯ
ವಿದ್ಯುತ್ ಖಾಸಗೀಕರಣ: ತೀವ್ರಗೊಂಡ ವಿರೋಧ