ಸಮಾಜದ ಅಸಮಾನತೆ ತೊಲಗಿಸಲು ಶಿಕ್ಷಣ ಅಗತ್ಯ: ಸಿಎಂ

KannadaprabhaNewsNetwork |  
Published : Oct 26, 2025, 02:00 AM IST
25ಕೆಆರ್ ಎಂಎನ್ 2.ಜೆಪಿಜಿಬಿಡದಿ ಹೋಬಳಿ ಬನ್ನಿಕುಪ್ಪೆಯ ಜೆಯು ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆವರಣದಲ್ಲಿ ಜಾಮಿಯಾ ಮಸೀದಿ ಮತ್ತು ಮುಸ್ಲಿಂ ಚಾರಿಟಬಲ್ ಫಂಡ್ ಟ್ರಸ್ಟ್ ನಿರ್ವಹಣೆಯ ಜೆಯು ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ದಾರುಲ್ ಖುರಾನ್ ಕ್ಯಾಂಪಸ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ರಾಮನಗರ: ಸಮಾಜದ ಅಸಮಾನತೆಯನ್ನು ತೊಲಗಿಸಲು ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಮನಗರ: ಸಮಾಜದ ಅಸಮಾನತೆಯನ್ನು ತೊಲಗಿಸಲು ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿಡದಿ ಹೋಬಳಿ ಬನ್ನಿಕುಪ್ಪೆಯ ಜೆಯು ಗ್ರೂಪ್ ಆಫ್ ಇನ್‌ ಸ್ಟಿಟ್ಯೂಷನ್‌ ಆವರಣದಲ್ಲಿ ಜಾಮಿಯಾ ಮಸೀದಿ ಮತ್ತು ಮುಸ್ಲಿಂ ಚಾರಿಟಬಲ್ ಫಂಡ್ ಟ್ರಸ್ಟ್ ನಿರ್ವಹಣೆಯ ಜೆಯು ಸಮೂಹ ಸಂಸ್ಥೆಗಳು ಆಯೋಜಿಸಿದ್ದ ದಾರುಲ್ ಖುರಾನ್ ಕ್ಯಾಂಪಸ್ ಅನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರೂ, ಪ್ರತಿಯೊಬ್ಬರಿಗೂ ವಿದ್ಯೆ ಮುಖ್ಯ. ಸ್ವಾಭಿಮಾನಿ ಬದುಕಿಗೆ ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರವಷ್ಟೇ ಎಲ್ಲರಿಗೂ ಶಿಕ್ಷಣ ಪಡೆಯುವ ಸಮಾನ ಅವಕಾಶ ಸಾಧ್ಯವಾಯಿತು. ಹೀಗಾಗಿ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಇದಕ್ಕಾಗಿ ಅನುದಾನವನ್ನೂ ನೀಡಲಾಗುತ್ತಿದೆ ಎಂದರು.

ಶಿಕ್ಷಣದಿಂದ ಮಾತ್ರ ಸಮಾನತೆ ಸಾಧ್ಯ:

ಸಮಾನ ಅವಕಾಶಗಳನ್ನು ಒದಗಿಸುವ ಪ್ರಯತ್ನ ಮಾಡಬೇಕು. ಸ್ವಾತಂತ್ರ್ಯ ರಕ್ಷಣೆ ಮಾಡಲು ಅಸಮಾನತೆ ತೆಗೆದುಹಾಕಬೇಕು. ಅಸಮಾನತೆ ತೆಗೆದು ಹಾಕದಿದ್ದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ. ಶಿಕ್ಷಣದಿಂದ ಮಾತ್ರ ಸಮಾನತೆ ತರಲು, ಜ್ಞಾನ, ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಸಾಮಾಜಿಕ ಗೌರವ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಘ ಸಂಸ್ಥೆಗಳು, ಸರ್ಕಾರದ ಸಂಸ್ಥೆಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟು ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಹೆಚ್ಚಿನ ಮೊತ್ತವನ್ನು ಶಿಕ್ಷಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಪ್ರತಿಯೊಬ್ಬ ಮುಸಲ್ಮಾನನೂ ಶಿಕ್ಷಣವಂತನಾಗಬೇಕು. ವಸತಿ ಶಾಲೆಗಳನ್ನು ಸ್ಥಾಪಿಸಿದಲ್ಲಿ ಮುಸಲ್ಮಾನ ಬಂಧುಗಳಿಗೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಿಕ್ಷಣಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.

ದ್ವೇಷ ಬಿಟ್ಟು ಪರಸ್ಪರ ಪ್ರೀತಿಸೋಣ:

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಎಲ್ಲರೂ ವಿದ್ಯಾವಂತರಾದರೆ ಭವ್ಯ ಭಾರತ ಕಟ್ಟಬಹುದು, ಸಮ ಸಮಾಜ ನಿರ್ಮಿಸಬಹುದು. ನಾವೂ ನೀವೂ ಎಲ್ಲರೂ ಮೊದಲು ಭಾರತೀಯರು. ಆಮೇಲೆ ಹಿಂದೂ, ಮುಸ್ಲಿಂ, ಕ್ರೈಸ್ತರು ಎನಿಸಿಕೊಳ್ಳುತ್ತೇವೆ. ಎಲ್ಲರೂ ಭಾರತೀಯರಾಗಿ ಭಾರತವನ್ನು ಕಟ್ಟೋಣ. ದ್ವೇಷ ಬಿಟ್ಟು ಪರಸ್ಪರ ಪ್ರೀತಿ ಮಾಡೋಣ ಎಂದು ಕರೆ ನೀಡಿದರು.

ಅಜೀಂ ಪ್ರೇಂಜಿ ಅವರ ವಿಪ್ರೋ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಆರು ದಿನಗಳ ಕಾಲ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಇದಲ್ಲದೇ ರಾಗಿ ಮಾಲ್ಟ್ , ಹಾಲು, ಬಿಸಿಯೂಟ ಒದಗಿಸಲಾಗುತ್ತಿದೆ. ಕಾಲೇಜಿನಲ್ಲಿ ಓದುವ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅಜೀಂ ಪ್ರೇಂ ಜಿ ಅವರೂ ಇದಕ್ಕೆ ಕೈಜೋಡಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.

ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಸೀಮಿತವಾಗಿದೆ. ಇತ್ತೀಚೆಗೆ ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳು ವಿದ್ಯಾವಂತರಾಗುತ್ತಿರುವುದು ಉತ್ತಮ ಬೆಳವಣಿಗೆ. ಹಿಂದೆ ಶೂದ್ರ ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಈಗ ಸಮಾನ ಅವಕಾಶಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಸರ್ಕಾರ ದಿವಾಳಿಯಾಗುತ್ತದೆ ಎಂದವರು ಈಗ ಇದನ್ನೇ ನಕಲು ಮಾಡುತ್ತಿದ್ದಾರೆ ಎಂದು ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದರು.

ಅಸಮಾನತೆ ಹೋಗಬೇಕೆನ್ನುವ ಕಾರಣದಿಂದ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಸಂವಿಧಾನ ಇದನ್ನೇ ಹೇಳುತ್ತದೆ. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸಂವಿಧಾನ ತಿಳಿದವರಿಗೆ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ , ಪೌರಾಡಳಿತ ಖಾತೆ ಸಚಿವ ರಹೀಂಖಾನ್ , ರಾಜ್ಯಸಭೆ ಮಾಜಿ ಸಚಿವ ಕೆ.ರೆಹಮಾನ್ ಖಾನ್ , ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ್ , ಮಾಜಿ ಶಾಸಕ ಭೀಮಾ ನಾಯಕ್ , ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಆಲಿ ಖಾನ್ ,ಡಾ.ಮಹಮ್ಮದ್ ಮಕ್ಸೂದ್ ಇಮ್ರಾನ್ , ಬಿ.ಕೆ.ಅಲ್ತಾಫ್ ಖಾನ್ , ಜುಲ್ಫಿಕರ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ...............

ಯಾವುದೇ ಧರ್ಮ ದ್ವೇಷವನ್ನು ಪ್ರಚೋದಿಸುವುದಿಲ್ಲ

ತಮ್ಮ ಧರ್ಮವನ್ನು ಪಾಲಿಸುತ್ತಾ ಪರ ಧರ್ಮವನ್ನು ಗೌರವಿಸಬೇಕು. ಸಹಬಾಳ್ವೆ, ಸೌಹಾರ್ದತೆಯನ್ನು ಪಾಲಿಸಬೇಕು ಎಂದು ನಮ್ಮ ಸಂವಿಧಾನ ತಿಳಿಸುತ್ತದೆ. ಯಾವುದೇ ಧರ್ಮ ದ್ವೇಷವನ್ನು ಪ್ರಚೋದಿಸುವುದಿಲ್ಲ. ದ್ವೇಷರಾಜಕಾರಣ ಮಾಡಬಾರದು. ದ್ವೇಷದಿಂದ ಯಾರ ಮನಸ್ಸನ್ನೂ ಗೆಲ್ಲಲು ಸಾಧ್ಯವಿಲ್ಲ.ಈ ಅರಿವಿಗೆ ಶಿಕ್ಷಣ ಮುಖ್ಯ. ಅಂಬೇಡ್ಕರ್ ಅವರು ತಿಳಿಸಿದಂತೆ, ಸಾಮಾಜಿಕ ಅಸಮಾನತೆ ಹೋಗಲಾಡಿಸಬೇಕು.

-ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

25ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ಹೋಬಳಿ ಬನ್ನಿಕುಪ್ಪೆಯ ಜೆಯು ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆವರಣದಲ್ಲಿ ಜಾಮಿಯಾ ಮಸೀದಿ ಮತ್ತು ಮುಸ್ಲಿಂ ಚಾರಿಟಬಲ್ ಫಂಡ್ ಟ್ರಸ್ಟ್ ನಿರ್ವಹಣೆಯ ಜೆಯು ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ದಾರುಲ್ ಖುರಾನ್ ಕ್ಯಾಂಪಸ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ