ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಿಕ್ಷಣ ವ್ಯಕ್ತಿಯ ಭವಿಷ್ಯ, ಸಮಾಜದ ಅಭಿವೃದ್ಧಿ, ಮಾನವೀಯ ಮೌಲ್ಯಗಳ ನಿರ್ಮಾಣಕ್ಕೆ ಅಡಿಪಾಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಹೇಳಿದರು. ತಾಲೂಕಿನ ಅರಕಲವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಷ್ಠಿ ಕಾನೂನು ನೆರವು ಮಂಡಳಿ ವತಿಯಿಂದ ನಡೆದ ಶಾಶ್ವತ ಲೋಕ ಅದಾಲತ್ ಹಾಗೂ ಬಾಲ್ಯ ವಿವಾಹ, ಪೋಕ್ಸೊ, ಮಕ್ಕಳಿಗೆ ಸಂಬಂಧಿಸಿದ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಕಲಿಕೆ ಕೇವಲ ಅಕ್ಷರ ಮತ್ತು ಸಂಖ್ಯಾ ಜ್ಞಾನಕ್ಕೆ ಸೀಮಿತವಾಗುವುದಿಲ್ಲ. ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಮೌಲ್ಯಗಳಾದ ಸಹಿಷ್ಣುತೆ, ಸೌಹಾರ್ದತೆಯನ್ನು ಬೆಳೆಸುವ ಬುನಾದಿಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸಬಾರದು ಎಂದು ಸಲಹೆ ನೀಡಿದರು.ಹದಿಹರೆಯದ ಮಕ್ಕಳ ಮನಸ್ಸು ಚಂಚಲ. ಹದಿನೆಂಟರೊಳಗಿನ ವಯಸ್ಸು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ತರುವ ಒಂದು ಅವಧಿ. ಇದು ಆತಂಕ, ಖಿನ್ನತೆ, ತಿನ್ನುವ ಅಸ್ವಸ್ಥತೆಗಳು, ಮಾದಕ ದ್ರವ್ಯಗಳ ಸೇವನೆಗೆ ಪ್ರೇರೇಪಿಸಲು ಕಾರಣವಾಗಬಹುದು. ಈ ಸಮಸ್ಯೆಗಳನ್ನು ಎದುರಿಸಲು ಪೋಷಕರು ಹಾಗೂ ಸಮಾಜ ಮಕ್ಕಳೊಂದಿಗೆ ಬೆರೆತು ನಂಬಿಕೆಯನ್ನು ಬೆಳೆಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಬೇಕು ಎಂದರು.ಬಾಲ ನ್ಯಾಯಮಂಡಲಿ ಸದಸ್ಯ ಗಂಗಾಧರಸ್ವಾಮಿ ಮಾತನಾಡಿ, ಬಾಲ ನ್ಯಾಯ ಮಂಡಳಿಯು ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳ ಮೇಲೆ ಕೇಂದ್ರೀಕರಿಸಿದೆ. ವಿಶ್ವಸಂಸ್ಥೆಯು 1989ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ ಅಂಗೀಕರಿಸಿ ಅನುಷ್ಠಾನಕ್ಕೆ ತಂದಿತು. ಇದೊಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದವಾಗಿದ್ದು, ಮಕ್ಕಳಿಗೆ ರಾಜಕೀಯ, ನಾಗರಿಕ, ಆರ್ಥಿಕ, ಸಾಮಾಜಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಒದಗಿಸುತ್ತದೆ. ಇದು ಮಕ್ಕಳ ಮೂಲಭೂತ ಅಗತ್ಯಗಳನ್ನು ಪೂರೈಸಲು ಮತ್ತು ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಸರ್ಕಾರಗಳು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ಸಂಯೋಜಕ ನಾಗರಾಜು, ಪ್ರಾಂಶುಪಾಲ ನಾಗರಾಜ್, ನಿವೃತ್ತ ಪ್ರಾಂಶುಪಾಲ ಎ.ಎಂ. ನಾಗಮಲ್ಲಪ್ಪ, ಉಪನ್ಯಾಸಕರಾದ ರಾಮಕೃಷ್ಣ, ಸೌಂದರ್ಯ, ಸಂತೋಷ್, ರಂಗಸ್ವಾಮಿ ಇದ್ದರು.