ಬಾಲಕಾರ್ಮಿಕ ವಿರೋಧಕ್ಕೆ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ನಾಗರಿಕರಾದ ನಾವು ಕೂಡ ಪಾತ್ರಧಾರಿಗಳಾಗಿದ್ದೇವೆ ಎಂದು ಮಡಿಕೇರಿಯ ವಕೀಲರಾದ ಅಂಬೆಕಲ್ಲು ಪ್ರಿಯ ನವೀನ್ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಬಾಲಕಾರ್ಮಿಕ ವಿರೋಧಕ್ಕೆ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ನಾಗರಿಕರಾದ ನಾವು ಕೂಡ ಪಾತ್ರಧಾರಿಗಳಾಗಿದ್ದೇವೆ ಎಂದು ಮಡಿಕೇರಿಯ ವಕೀಲರಾದ ಅಂಬೆಕಲ್ಲು ಪ್ರಿಯ ನವೀನ್ ಹೇಳಿದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ನೀಡಿ:
ಬಾಲಕಾರ್ಮಿಕರನ್ನು ಅಮಾನುಷವಾಗಿ ದುಡಿಸಿಕೊಳ್ಳುವುದು ಕಂಡು ಬಂದಲ್ಲಿ ಹಾಗೆಯೇ ಭಿಕ್ಷಾಟನೆ, ಚಿಂದಿ ಆಯುವ ಬಾಲಕಾರ್ಮಿಕರು ಕಂಡು ಬಂದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹೀಗೆ ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ನೀಡುವ ಮೂಲಕ ಸಾಧ್ಯವಾದಮಟ್ಟಿಗೆ ಬಾಲಕಾರ್ಮಿಕ ಪದ್ಧತಿಯನ್ನು ಕಡಿಮೆ ಮಾಡಬಹುದು ಎಂದ ಅವರು ತಿಳಿಸಿದರು. ಸರ್ಕಾರದ ಇಲಾಖೆಗಳು ನಡೆಸುವ ಇಂತಹ ಕಾರ್ಯಕ್ರಮಗಳನ್ನು ಒಂದು ಮಹಿಳಾ ಒಕ್ಕೂಟ ನಡೆಸುತ್ತಿರುವುದು ಶ್ಲಾಘನಿಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಕಾರುಗುಂದ ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಅವರು ಪ್ರಾಸ್ತಾವಿಕ ನುಡಿಯಲ್ಲಿ, 14 ವರ್ಷದೊಳಗಿನ ಮಕ್ಕಳನ್ನು ಸರ್ಕಾರ ಕಿಶೋರ ಕಾರ್ಮಿಕರೆಂದು ಗುರುತಿಸಿದ್ದು ಅವರನ್ನು ಜೀತ ಪದ್ಧತಿಗೆ ಅಳವಡಿಸುವುದು ನಿಜವಾಗಿಯೂ ಅಪರಾಧ. ಇದು ಮೊಬೈಲ್ ಕಾಲವಾಗಿದ್ದು ವಿದ್ಯಾಭ್ಯಾಸ ಇಲ್ಲದವರು ಕೂಡ ಲೆಕ್ಕಾಚಾರ ಮಾಡಬಲ್ಲರು. ಸಾಮಾಜಿಕ ಜಾಲತಾಣ ಅಷ್ಟೊಂದು ಮುಂದುವರಿದಿದೆ ಎಂದರು.
ಸಮಾಜದ ಹಕ್ಕು ಕಿತ್ತುಕೊಳ್ಳುವುದು ಅಪರಾಧ:
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ವಲಸೆ ಕಾರ್ಮಿಕರೊಂದಿಗೆ ಬಂದಿರುವ ಮಕ್ಕಳನ್ನು ಸಂಜೆ ಸಮಯದಲ್ಲಿ ನಮ್ಮ ಮಕ್ಕಳ ಜೊತೆಗೆ ಸೇರಿಸಿ ಅಕ್ಷರ ಅಭ್ಯಾಸ ಮಾಡಿಸಿದಲ್ಲಿ ಅವರಿಗೂ ಜ್ಞಾನವೃದ್ಧಿ ಯಾಗಿ ಶಾಲೆಗೆ ಹೋಗುವ ಪರಿಪಾಠವನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ ಎಂದರು.
ಕಾರುಗುಂದ ಗೌಡ ಸಮಾಜದ ಉಪಾಧ್ಯಕ್ಷರಾದ ಕೇಕಡ ದಿನೇಶ್ ಅವರು ಉದ್ಘಾಟಿಸಿ, ಮಹಿಳಾ ಒಕ್ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ , ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲಾ ಅಪ್ಪಾಜಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
ಕಾಳೇರಮ್ಮನ ರಶಿ ಅಶೋಕ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಅಣ್ಣಚಿರ ಬೋಜಮ್ಮ ಕುಶಾಲಪ್ಪ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಕಡ್ಯದ ಸ್ಮಿತಾ ಜೀವನ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.