ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಭಿವೃದ್ಧಿಗೆ ಹಲವು ಅಂಶಗಳು, ಸೂಚ್ಯಂಕಗಳು, ಸಾಧನಗಳು ಅಗತ್ಯವಾದರೂ ಸಹ ಎಲ್ಲ ರೀತಿಯ ಅಭಿವೃದ್ಧಿಗೆ ಶಿಕ್ಷಣ ತಾಯಿಬೇರಾಗಿ ವಿಕಸನವನ್ನು ಉತ್ತೇಜಿಸುತ್ತದೆ ಎಂದು ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಪೆರೇಸಂದ್ರದ ಗ್ರಾಮದ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ 13ನೇ ಶಾಲಾವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಶಿಕ್ಷಣದಲ್ಲಿ ಅಸಮಾನತೆ ಬೇಡ
ಪ್ರಾಚೀನ ಕಾಲದಿಂದ ಭಾರತದಲ್ಲಿ ಉತ್ತಮ ಗುರುಕುಲಗಳು ಹಾಗೂ ವಿದ್ಯಾಕೇಂದ್ರಗಳಿದ್ದರೂ ಎಲ್ಲರಿಗೂ ಶಿಕ್ಷಣ ಲಭ್ಯವಾಗುತ್ತಿರಲಿಲ್ಲ. ಸ್ವಾತಂತ್ರ್ಯಾನಂತರ ವರ್ಷಗಳಲ್ಲಿ ಸರ್ಕಾರದ ಜೊತೆ ಮಠಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡಲು ಆರಂಭಿಸಿದವು. ಯಾವುದೇ ಅಸಮಾನತೆ, ತಾರತಮ್ಯ ಎಣಿಸದೆ ಎಲ್ಲ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಕಲ್ಪಿಸಬೇಕು ಎಂದರು.ಡಾ.ಕೆ.ಸುಧಾಕರ್ ಸೇವೆ ಸಾರ್ಥಕ
ಮಾಜಿ ಸಚಿವ ಡಾ.ಕೆ.ಸುಧಾಕರ್ ತಮ್ಮ ತಾಯಿಯವರ ಸ್ಮರಣೆಗಾಗಿ ಗ್ರಾಮೀಣ ಭಾಗದಲ್ಲಿ ಶಾಂತ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ. ಈ ಜಿಲ್ಲೆಗೆ ನೀರಾವರಿ ಯೋಜನೆ, ಮೆಡಿಕಲ್ ಕಾಲೇಜು, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮೌಲಿಕ ಕಾರ್ಯವಾಗಿದೆ ಎಂದು ಪ್ರಶಂಶಿಸಿದರು.ತಾಯಿ ತಂದೆಯರು ಮಕ್ಕಳ ಉನ್ನತಿಗಾಗಿ ಮಾಡುವ ತ್ಯಾಗಕ್ಕೆ ಮಕ್ಕಳು ಅವರ ಋಣ ತೀರಿಸಲೇ ಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಮಾತಾ ಪಿತೃಗಳ ಋಣ, ಗುರು ಹಾಗೂ ಸಮಾಜದ ಋಣ ತೀರಿಸಬೇಕು. ಎಲ್ಲರಲ್ಲೂ ಜ್ಞಾನವಿದೆ, ಶ್ರದ್ಧೆ ಮತ್ತು ರಚನಾತ್ಮಕ ಅಧ್ಯಯನದಿಂದ ನೀವು ದೊಡ್ಡ ವ್ಯಕ್ತಿಗಳಾದರೆ ಅದೇ ನೀವು ಹೆತ್ತವರಿಗೆ ಮತ್ತು ಗುರುಗಳಿಗೆ ನೀಡಬೇಕಾದ ಕಾಣಿಕೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಉದಾತ್ತ ವ್ಯಕ್ತಿಗಳಾಗಿ ಪಾಲಕರು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಧನ್ಯತೆ ಹೊಂದಬೇಕು ಎಂದು ಕರೆ ನೀಡಿದರು.
ಆತ್ಮವಿಶ್ವಾಸ ಹುಟ್ಟಿಸುವ ಶಿಕ್ಷಣಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪ್ರೀತಿ ಸುಧಾಕರ್ ಮಾತನಾಡಿ, ಹತ್ತನೇ ತರಗತಿ ಮುಗಿಸಿ ಮುಂದಿನ ಶಿಕ್ಷಣಕ್ಕೆ ಹೋಗಲಿರುವ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಕ್ಕಳನ್ನು ಕುರಿತು ನಿಮ್ಮ ಕಲಿಕೆ ತರಗತಿಯಲ್ಲಿ ಆರಂಭವಾಗಬಹುದು, ಆದರೆ ಅದು ಪಠ್ಯಪುಸ್ತಕಗಳು, ಪರೀಕ್ಷೆಗಳು ಹಾಗೂ ತರಗತಿಯನ್ನು ಮೀರಿ ವಿಶಾಲ ದೃಷ್ಠಿಕೋನವನ್ನು ನಿಮ್ಮಲ್ಲಿ ಬೆಳೆಸಬೇಕು. ಶಾಲೆ ಎಂದರೆ ಕೇವಲ ಬೃಹತ್ ಕಟ್ಟಡವಲ್ಲ, ಸಮುದಾಯದ ಕಲಿಕಾ ಕೇಂದ್ರ, ಅಕ್ಷರ, ಆಲೋಚನೆ, ಅಭಿವ್ಯಕ್ತಿ, ಅಭಿಪ್ರೇರಣೆ ಮತ್ತು ಆತ್ಮವಿಶ್ವಾಸ ಕಟ್ಟಿಕೊಡುವ ಸ್ಥಳವನ್ನಾಗಿ ಶಾಲೆಯನ್ನು ರೂಪಿಸಬೇಕು ಎಂದು ಹೇಳಿದರುವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ, ಸ್ಮರಣಿಕೆಗಳನ್ನು ಪ್ರಧಾನ ಮಾಡಿ ಮಾತನಾಡಿದ ಇಸ್ರೋ ಸಂಸ್ಥೆಯ ಚಂದ್ರಯಾನ-2 ಮತ್ತು 3 ಹಾಗೂ ಆದಿತ್ಯ ಎಲ್-1 ಕ್ಷಿಪಣಿಗಳ ರೂಪಿಸುವಿಕೆ ಹಾಗೂ ಉಡಾವಣೆ ತಂಡದ ಹಿರಿಯ ವಿಜ್ಞಾನಿ ನಮ್ಮ ಭಾಗದ ಜಂಗಾಲಪಲ್ಲಿಯಲ್ಲಿ ಹುಟ್ಟಿಬೆಳೆದ ಜೆ.ಸಿ.ಗುರಪ್ಪ ನವರು ತಮ್ಮ ಜೀವನದ ಅನುಭವಗಳನ್ನು ವಿಸ್ತರಿಸುತ್ತಾ ಮಕ್ಕಳನ್ನು ಬಾಹ್ಯಾಕಾಶಕ್ಕೆ ಕರೆದುಕೊಂಡು ಹೋದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿನಿರ್ದೇಶಕ ಎಚ್.ವಿ.ವೆಂಕಟೇಶಪ್ಪ, ಶಾಲೆಯ ನಿರ್ಧೇಶಕ ಡಾ.ಕೋಡಿರಂಗಪ್ಪ, ಆಡಳಿತ ಮಂಡಳಿಯ ಮನೋಹರ್, ಆಡಳಿತಾಧಿಕಾರಿ ಕೆನಿತ್, ಮತ್ತಿತರರು ಇದ್ದರು.