ಪ್ರತಿಯೊಬ್ಬ ಸಾಧಕರಿಗೆ ಶಿಕ್ಷಣ ಅತೀ ಅವಶ್ಯಕ-ಮಹೇಶ ನಾಲವಾಡ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ನಾವು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಿ ಛಲದಿಂದ ಮುಂದೆ ಬರಬೇಕಾದರೆ ಶಿಕ್ಷಣವೇ ಪ್ರಮುಖವಾಗಿರುತ್ತದೆ. ಪ್ರತಿಯೊಬ್ಬ ಸಾಧಕರಿಗೆ ಶಿಕ್ಷಣ ಅತೀ ಅವಶ್ಯವಾಗಿರುತ್ತದೆ ಎಂದು ಹುಬ್ಬಳ್ಳಿ ಮಹೇಶ ನಾಲವಾಡ ಪ್ರತಿಷ್ಠಾನದ ಸಂಸ್ಥಾಪಕ ಮಹೇಶ ನಾಲವಾಡ ಹೇಳಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಕೈಪಿಡಿ ವಿತರಣೆ

ಮುಂಡರಗಿ: ನಾವು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಿ ಛಲದಿಂದ ಮುಂದೆ ಬರಬೇಕಾದರೆ ಶಿಕ್ಷಣವೇ ಪ್ರಮುಖವಾಗಿರುತ್ತದೆ. ಪ್ರತಿಯೊಬ್ಬ ಸಾಧಕರಿಗೆ ಶಿಕ್ಷಣ ಅತೀ ಅವಶ್ಯವಾಗಿರುತ್ತದೆ ಎಂದು ಹುಬ್ಬಳ್ಳಿ ಮಹೇಶ ನಾಲವಾಡ ಪ್ರತಿಷ್ಠಾನದ ಸಂಸ್ಥಾಪಕ ಮಹೇಶ ನಾಲವಾಡ ಹೇಳಿದರು.

ಅವರು ಮಂಗಳವಾರ ತಾಲೂಕಿನ ಹೆಸರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪೂರಕವಾಗುವಂತಹ ಕಾಶ್ಯಪ್ ಉಚಿತ ಕೈಪಿಡಿ ವಿತರಿಸಿ ಮಾತನಾಡಿದರು.

ಹಿಂದೆ ಓದಿ ಸಾಧನೆ ಮಾಡುವ ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ವ್ಯವಸ್ಥೆ ಇರಲಿಲ್ಲ. ಶಹರ ಪ್ರದೇಶಕ್ಕೆ ಹೋಗಿ ಅಕ್ಷರಾಭ್ಯಾಸ ಕಲಿಯಬೇಕಾಗಿತ್ತು. ಹೀಗಾಗಿ ಅದು ಅನೇಕ ಬಡವರಿಗೆ, ಹಿಂದುಳಿದವರಿಗೆ ಶಿಕ್ಷಣ ಮರಿಚೀಕೆಯಾಗಿತ್ತು. ಅಂತಹ ಸಂದರ್ಭದಲ್ಲಿ ನಮ್ಮ ನಾಡಿನ ಹೆಸರಾಂತ ಮಠಮಾನ್ಯಗಳು ಪ್ರಸಾದ ನಿಲಯಗಳನ್ನು ಮಾಡಿ ಅದರ ಜತೆಗೆ ಅಕ್ಷರ ಜ್ಞಾನವನ್ನೂ ಸಹ ನೀಡುತ್ತಿದ್ದವು. ಈ ಹಿಂದೆ ಉನ್ನತ ಹುದ್ದೆಯಲ್ಲಿದ್ದ ಅನೇಕರು ಮಠಮಾನ್ಯಗಳ ಉಚಿತ ಪ್ರಸಾದ ನಿಲಯಗಳಲ್ಲಿ ಉಂಡು ಬೆಳೆದವರೇ ಆಗಿದ್ದರು.

ನಾನು ಎಸ್.ಎಸ್.ಎಲ್.ಸಿ. ಓದುತ್ತಿರುವಾಗ ನಮಗಿದ್ದ ಕಷ್ಟವನ್ನು ನೆನಪಿಸಿಕೊಂಡು ಈಗಿನ ವಿದ್ಯಾರ್ಥಿಗಳಿಗೆ ಹಾಗಾಗಬಾರದೆನ್ನುವ ಉದ್ದೇಶದಿಂದ ಅವರು ಚೆನ್ನಾಗಿ ಓದಿ ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಬೇಕೆನ್ನುವ ಉದ್ದೇಶದಿಂದಲೇ ಎಸ್.ಎಸ್.ಎಲ್.ಸಿ. ಓದುವ ವಿದ್ಯಾರ್ಥಿಗಳ ಪರೀಕ್ಷೆಗೆ ಪೂರಕವಾಗಿರುವ ಈ ಕಾಶ್ಯಪ್ ಕೈಪಿಡಿ ವಿತರಿಸಲಾಗುತ್ತಿದೆ. ಅಷ್ಟೇ ಅಲ್ಲದೇ ನಮ್ಮ ಪ್ರತಿಷ್ಠಾನದ ಮೂಲಕ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಕಣ್ಣು, ಕಿವಿ ತಪಾಸಣೆ ನಡೆಸಲಾಗುತ್ತಿದೆ. ನಮ್ಮಹ‍ಳೆಯ ಅಖಂಡ ಧಾರವಾಡ ಜಿಲ್ಲೆಯ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಎಲ್ಲ ಪ್ರೌಢಶಾಲೆಗ‍ಳ ವಿದ್ಯಾರ್ಥಿಗಳಿಗೆ ಸುಮಾರು 45 ಸಾವಿರ ಕಾಶ್ಯಪ ಕೈಪಿಡಿ ವಿತರಿಸಲಾಗುತ್ತಿದ್ದು, ಮಕ್ಕಳು ಅವುಗಳ ಸದುಪಯೋಗ ಪಡೆದುಕೊಳ್ಳುವುದು ಅವಶ್ಯವಾಗಿದೆ ಎಂದರು.

ಇದರಲ್ಲಿ ಕೇವಲ ಪರೀಕ್ಷೆಗೆ ಬೇಕಾದ ಮಾಹಿತಿಯನ್ನು ಮಾತ್ರ ಹಾಕದೆ ಮಕ್ಕಳು ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎನ್ನುವ ಕುರಿತು, ಸಮತೋಲನ ಆಹಾರದ ಕುರಿತು, ಆಯಾ ಸೀಜನ್‌ಗಳಲ್ಲಿ ದೊರೆಯುವ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನುವ ಕುರಿತು, ಮಾನಸಿಕ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳುವದು, ವಿದ್ಯಾರ್ಥಿ ಅಭ್ಯಾಸ ಮಾಡುವುದು ಹೇಗೆ? ಎಸ್..ಎಸ್.ಎಲ್.ಸಿ.ನಂತರ ಮುಂದೇನು ಎನ್ನುವ ಅನೇಕ ವಿಷಯಗಳ ಕುರಿತು ಮಾಹಿತಿ ಹಾಕಲಾಗಿದೆ. ಮಕ್ಕಳು ಈ ಎಲ್ಲ ಮಾಹಿತಿಯನ್ನು ಓದಬೇಕು ಎಂದರು.

ಶಿಕ್ಷಕ ನಾಗರಾಜ ಹಳ್ಳಿಕೇರಿ ಮಾತನಾಡಿ, ಮಹೇಶ ನಾಲವಾಡ ಪ್ರತಿಷ್ಠಾನವು ಉಚಿತವಾಗಿ ಕೊಡ ಮಾಡುತ್ತಿರುವ ಕಾಶ್ಯಪ್ ಕೈಪಿಡಿಯು ಎಸ್.ಎಸ್.ಎಲ್.ಸಿ.ಯಲ್ಲಿ ಓದುತ್ತಿರುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತ್ಯಂತ ಪೂರಕವಾಗಿದೆ. ಇದರಲ್ಲಿ ಮಕ್ಕಳು ಪರೀಕ್ಷಗೆ ತಯಾರಾಗಲು ಬೇಕಾದ ಎಲ್ಲ ಉಪಯುಕ್ತ ವಿಷಯಗಳಿದ್ದು, ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಪರೀಕ್ಷಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು ಎಂದರು. ಗ್ರಾಮಸ್ಥ ಶ್ರೀಕಾಂತ ಕಮ್ಮಾರ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ರಾಜಶೇಖರ ಹುಲ್ಲೋಳ, ಮಹೇಶ ಎಸ್.ಎಚ್, ಮಲ್ಲಪ್ಪ ನಾಟೀಕರ್, ಆರ್.ಎಸ್.ಗಾವರಾಳ, ಎಚ್.ಎನ್.ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ರವಿ ದೇವರಡ್ಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Share this article