ಹುಟ್ಟಿದ ಮಗುವನ್ನು ವಿಶ್ವಮಾನವನನ್ನಾಗಿ ಮಾಡುವುದೇ ಶಿಕ್ಷಣ

KannadaprabhaNewsNetwork |  
Published : Feb 16, 2026, 01:45 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ ಅಧಿರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ ವಿಜೇತ ಡಾ.ಗಣೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಶಿಕ್ಷಣ ಎನ್ನುವುದು ತಲೆಗೆ ತುರುಕುವ ವಿಚಾರ ಅಲ್ಲ. ಅದು ಮನಸ್ಸಿಗೆ ತರಬೇತಿ ಕೊಡುವ ಕಾಯಕ ಎಂದು ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ ವಿಜೇತ ಡಾ.ಜಿ.ಎಸ್. ಗಣೇಶ್ ಹೇಳಿದರು.

ತಾಲೂಕಿನ ಬ್ಯಾಡರಹಳ್ಳಿ ಅಧಿರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವನಾಗಿ ಹುಟ್ಟುತ್ತಾನೆ. ಆದರೆ ಸಾಮಾನ್ಯ ನಾಗರಿಕರು ಆ ಮಗುವನ್ನು ಅಲ್ಪ ಮಾನವನನ್ನಾಗಿ ಮಾಡುತ್ತಾರೆ. ಮತ್ತೆ ಆ ಮಗುವನ್ನು ವಿಶ್ವಮಾನವನ್ನಾಗಿ ಮಾಡುವುದೇ ಶಿಕ್ಷಣದ ಮೂಲ ಉದ್ದೇಶ.

ಸಂಸ್ಕಾರ ಹಾಗೂ ಮೌಲ್ಯಗಳನ್ನು ಒಳಗೊಂಡ ಶಿಕ್ಷಣವನ್ನು ನೀಡುವ ಶಿಕ್ಷಣ ಸಂಸ್ಥೆಗಳನ್ನು ತೆರೆದರೆ ಹತ್ತು ಜೈಲುಗಳನ್ನು ಮುಚ್ಚಬಹುದು ಎಂಬ ಮಾತಿದೆ. ಈಗಿನ ಮಕ್ಕಳಿಗೆ ಕೇವಲ ಪಠ್ಯಕ್ರಮದ ಬಗ್ಗೆ ಹೇಳಿದರೆ ಸಾಲದು.

ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯ, ಸಂಸ್ಕಾರ, ಸಂಸ್ಕೃತಿ ಇವೆಲ್ಲದರ ಬಗ್ಗೆಯೂ ಸಹ ತಿಳಿ ಹೇಳಬೇಕಾಗುತ್ತದೆ. ಪೋಷಕರಾದ ನಾವುಗಳು ಉತ್ತಮ ಸನ್ಮಾರ್ಗದಲ್ಲಿ ಸಾಗುವುದರೊಂದಿಗೆ ಮಕ್ಕಳನ್ನು ಸಹ ಸರಿದಾರಿಗೆ ತರಲು ಪ್ರಯತ್ನಿಸಬೇಕು. ಆಗಲೇ ನಾವು ಉತ್ತಮ ಸಮಾಜಕ್ಕೆ ಮಾದರಿಯಾಗಲು ಸಾಧ್ಯವಾಗುತ್ತದೆ. ಗುರು ಹಿರಿಯರನ್ನು ಗೌರವಿಸುವುದನ್ನು ಹೇಳಿಕೊಡಬೇಕಾಗುತ್ತದೆ.

ವಿನಯ, ವಿವೇಕ, ಸಂಸ್ಕಾರ, ಮಾನವೀಯ ಮೌಲ್ಯಗಳಿಲ್ಲದ ಯಾವುದೇ ವಿದ್ಯೆ ಮತ್ತು ಹುದ್ದೆ ವ್ಯರ್ಥವಾಗುತ್ತದೆ. ಕಣ್ಣಿಗೆ ಕಾಣದ ದೇವರಿಗೆ ಚಿನ್ನ ಹಾಕುವ ಮುನ್ನ ಕಣ್ಣೆದುರಿಗೆ ಕಾಣುವ ಪ್ರತ್ಯಕ್ಷ ದೇವರಾದ ತಂದೆ ತಾಯಿಯರಿಗೆ ಅನ್ನ ಹಾಕು ಎನ್ನುವ ಮಾತಿನಂತೆ ನಾವೆಲ್ಲರೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂದರು.

ಶಾಲೆಯ ಅಧ್ಯಕ್ಷ ಬೋರೇಗೌಡ ಮಾತನಾಡಿ, ಬಯಲು ಸೀಮೆಯ ಈ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ತೆರೆದ ಈ ಶಾಲೆ ಸಮಾಜಕ್ಕೆ ಸುಸಂಸ್ಕೃತ, ಸಜ್ಜನ ಪ್ರಜೆಗಳನ್ನು ರೂಪಿಸಿಕೊಡಲಿದೆ. ಇಂದು ಎಲ್ಲರೂ ಅಂಕಗಳಿಕೆಯ ವಿದ್ಯೆ ಕಲಿಸಲು ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಅಂಕ ಗಳಿಕೆಯ ಜೊತೆಗೆ ಸಂಸ್ಕೃತಿ, ಸಂಸ್ಕಾರ, ಸಜ್ಜನಿಕೆಯನ್ನು ಕಲಿಸಿಕೊಡಬೇಕಿದೆ. ಮಕ್ಕಳ ಬಗ್ಗೆ ಶಾಲೆಯ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರು ಮೇಲೂ ಇದೆ. ಮಕ್ಕಳಿಗೆ ಮನೆಯಲ್ಲಿಯೂ ಓದುವ ವಾತಾವರಣವನ್ನು ನಿರ್ಮಾಣ ಮಾಡಿಕೊಡಿ. ಇಂದಿನ ಪೋಷಕರು ಮನೆಯೇ ಮೊದಲ ಪಾಠಶಾಲೆ ಎಂಬ ಮಾತನ್ನು ಮರೆತು ಬಿಟ್ಟಿದ್ದಾರೆ. ಪೋಷಕರು ಮತ್ತು ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಈ ಸಮಾಜಕ್ಕೆ ಪ್ರತಿಭಾವಂತ, ಸಜ್ಜನ ಮಕ್ಕಳನ್ನು ಕೊಡಲು ಸಾಧ್ಯವಾಗುತ್ತದೆ.ಹಾಗಾಗಿ ಗುಣಮಟ್ಟದ ವಿದ್ಯೆಯನ್ನು ಮಕ್ಕಳಿಗೆ ಪ್ರೀತಿಯಿಂದ ಧಾರೆ ಎರೆಯೋಣ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ರೀತಿಯ ಆಕರ್ಷಕ ನೃತ್ಯಗಳಿಂದ ನೆರೆದ ಜನರ ಮನ ಸೆಳೆದರು.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಜಂಟಿ ಕಾರ್ಯದರ್ಶಿ ನಾಗರಾಜ್ ಯಲಚವಾಡಿ, ಹಿರಿಯ ವೈದ್ಯ ಡಾ.ವಿಷ್ಣು, ಸಂಸ್ಥೆಯ ಕಾರ್ಯದರ್ಶಿ ಕೆ.ಶೃತಿ, ನಿರ್ದೇಶಕ ಎಚ್.ಬಿ.ಮಿಥುನ್, ಮುಖ್ಯ ಶಿಕ್ಷಕಿ ಶಶಿಕಲಾ ಡಿ, ಶಿಕ್ಷಕಿಯರಾದ ಸಾಧಿಯಾ ಬಾನು, ಶ್ವೇತಾ, ಕಾವೇರಿ, ನೃತ್ಯ ಸಂಯೋಜಕ ಪ್ರದೀಪ್ ಹೆಲ್ವಾರ್ ಸೇರಿದಂತೆ ಶಾಲಾ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡಸಿಯಲ್ಲಿ ಶಾಸಕ ಶಿವಲಿಂಗೇಗೌಡರ ಹುಟ್ಟುಹಬ್ಬ ಆಚರಣೆ
ರಾಜ್ಯ ಸರ್ಕಾರದ ಲಂಚಗುಳಿತನದಿಂದ ರೈತರ ಬದುಕು ಶೋಷಣೆ: ಗುರುಪ್ರಸಾದ್‌