ಪರೀಕ್ಷೆಗೆ ಸೀಮಿತವಾದ ವಿದ್ಯಾಭ್ಯಾಸ ಸಲ್ಲದು

KannadaprabhaNewsNetwork | Published : Jul 31, 2024 1:11 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜ್ಞಾನ ಅಸೀಮವಾದದ್ದು. ಜ್ಞಾನವೇ ನಿಜವಾದ ಪ್ರಕಾಶ, ಜೀವನ ಪೂರ್ತಿ ವಿದ್ಯೆ ಸಂಗ್ರಹಿಸಿ ಸಮಾಜದ ಒಳಿತಿಗೆ ಬಳಸಬೇಕು. ನಿಜವಾದ ವಿದ್ಯೆಯಿಂದ ಬದುಕು ಪರಿವರ್ತನೆ ಆಗಲು ಸಾಧ್ಯ ಎಂದು ಕಾತ್ರಾಳ-ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು. ನಗರದ ಇಟ್ಟಂಗಿಹಾಳ ರಸ್ತೆಯ ಎಕ್ಸಲೆಂಟ್ ಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿದ್ಯಾಲಯ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಗತಿವಿಧಿ, ಪ್ರಾಂತಮಟ್ಟದ ಶಿಕ್ಷಕ ಸ್ವಾಧ್ಯಾಯ ಸಮಾರೋಪ ಸಮಾರಂಭದದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜ್ಞಾನ ಅಸೀಮವಾದದ್ದು. ಜ್ಞಾನವೇ ನಿಜವಾದ ಪ್ರಕಾಶ, ಜೀವನ ಪೂರ್ತಿ ವಿದ್ಯೆ ಸಂಗ್ರಹಿಸಿ ಸಮಾಜದ ಒಳಿತಿಗೆ ಬಳಸಬೇಕು. ನಿಜವಾದ ವಿದ್ಯೆಯಿಂದ ಬದುಕು ಪರಿವರ್ತನೆ ಆಗಲು ಸಾಧ್ಯ ಎಂದು ಕಾತ್ರಾಳ-ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.

ನಗರದ ಇಟ್ಟಂಗಿಹಾಳ ರಸ್ತೆಯ ಎಕ್ಸಲೆಂಟ್ ಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿದ್ಯಾಲಯ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಗತಿವಿಧಿ, ಪ್ರಾಂತಮಟ್ಟದ ಶಿಕ್ಷಕ ಸ್ವಾಧ್ಯಾಯ ಸಮಾರೋಪ ಸಮಾರಂಭದದಲ್ಲಿ ಅವರು ಮಾತನಾಡಿದರು. ಕೇವಲ ಪರೀಕ್ಷೆಗಾಗಿ ವಿದ್ಯಾಭ್ಯಾಸ ಮಾಡುವುದು ಬದುಕಿಗೆ ನಾವೇ ಅನ್ಯಾಯ ಮಾಡಿಕೊಂಡಂತೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೇವಲ ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳದೆ ಭವಿಷ್ಯತ್ತಿಗೆ ದಾರಿಯಾಗಿಬೇಕು, ಜ್ಞಾನಾರ್ಜನೆ ಆಗುವಂತಿರಬೇಕು. ಶಿಕ್ಷಕರು ಪ್ರಸನ್ನತೆಯಿಂದ ಮಕ್ಕಳಲ್ಲಿ ಹೃದಯವೈಶ್ಯಾಲ್ಯತೆ ಬೆಳೆಸಿ, ಅವರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ನಾಗಪುರದ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಬಿ.ಆರ್.ಶಂಕರಾನಂದ ಮಾತನಾಡಿ, ದೇಶದ ಪ್ರಗತಿಯ ಗುಣಮಟ್ಟ ನಿರ್ಧರಿಸಲು ಶಿಕ್ಷಣ ಅವಶ್ಯ. ಶಿಕ್ಷಕ ಆಚಾರ್ಯರಾಗಿ, ಋಷಿಯಾಗಿ ಮಕ್ಕಳ ಬದುಕನ್ನು ಕಟ್ಟಲು ಸಜ್ಜಾಗಬೇಕು. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡುವುದರ ಮೂಲಕ ಶಿಕ್ಷಕರು ದೇಶದ ಭವಿಷ್ಯವನ್ನೇ ಬರೆಯಬಲ್ಲರು. ಹಾಗಾಗಿ ಗುರುವಿಗೆ ಮಹತ್ತರ ಸ್ಥಾನವಿದೆ ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲ ಮಾತನಾಡಿ, ಮಗುವಿನ ವ್ಯಕ್ತಿತ್ವ ಹಾಗೂ ದೇಶದ ನಿರ್ಮಾಣ ಮಾಡುವುದೇ ಶಿಕ್ಷಣದ ಪ್ರಮುಖ ಉದ್ದೇಶ. ದೇಶದ ಸುಸ್ಥಿರ ಅಭಿವೃದ್ಧಿಗೆ ಮೌಲ್ಯಯುತ ಶಿಕ್ಷಣ ಅಗತ್ಯ. ಮೊದಲೆಲ್ಲ ಶಿಕ್ಷಣ ಕೊಡಿಸಲು ಪಾಲಕರು ಪರದಾಡುವ ಸ್ಥಿತಿ ಇತ್ತು, ಆದರೆ ಇದೀಗ ಕಾಲ ಬದಲಾಗಿದ್ದು, ಸರ್ಕಾರದ ಸಹಾಯದೊಂದಿಗೆ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬಹುದು. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿಯೇ ಹೆಚ್ಚಿನ ಒತ್ತು ನೀಡಿ ಕಲಿತರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕಲಿತ ಜ್ಞಾನವನ್ನು ವಿವೇಕವಾಗಿ ಬಳಸಿದಾಗ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಪ್ರಾಂತ ಅಧ್ಯಕ್ಷ ಡಾ.ಬಸವರಾಜ ಅನಾಮಿ ಅಧ್ಯಕ್ಷತೆ ವಹಿಸಿದ್ದರು. ಡಾ.ಮೀನಾ ಚಂದಾವರ್ಕರ್, ಪ್ರೊ.ರಾಜಕುಮಾರ ಮಾಲಿಪಾಟೀಲ, ವಿನಾಯಕ ಗ್ರಾಮಪುರೋಹಿತ, ಪ್ರೊ.ಉದಯಕುಮಾರ ಕುಲಕರ್ಣಿ, ಪ್ರೊ.ಅಶೋಕ ಸುರಪುರ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಡ್ಡದ, ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ ಬಂಡೆ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಬಿ.ಎಸ್.ಬಾಪಗೊಂಡ ಸ್ವಾಗತಿಸಿ, ಪರಿಚಯಿಸಿದರು. ಡಾ.ಎಸ್.ಟಿ.ಬೋಳರೆಡ್ಡಿ ನಿರೂಪಿಸಿದರು. ಪ್ರಾಂತ ಸಹ ಕಾರ್ಯದರ್ಶಿ ಸಿದ್ದು ಮದರಖಂಡಿ ವಂದಿಸಿದರು. 3 ದಿನದ ಶಿಕ್ಷಕ ಸ್ವಾಧ್ಯಾಯದಲ್ಲಿ ಭಾಗವಹಿಸಿದ 200 ಶಿಕ್ಷಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

---------------------------------------------

ಕೋಟ್

ದೇಶದ ಅಭಿವೃದ್ಧಿಗೆ, ಸುರಕ್ಷತೆಗೆ ಯುವ ಸಮೂಹದ ಕೊಡುಗೆ ಬಹಳಷ್ಟಿರುವುದರಿಂದ ವಿದ್ಯಾರ್ಥಿಗಳು ತಮ್ಮ ಗೋಲ್ಡನ್ ಲೈಫ್‌ನಲ್ಲಿ ಏಕಚಿತ್ತದಿಂದ ಅಭ್ಯಸಿಸಿ ಜ್ಞಾನವನ್ನು ಪಡೆದುಕೊಳ್ಳಬೇಕು. ನಮ್ಮಲ್ಲಿನ ಶಿಕ್ಷಕರು ಕೇವಲ ಸಂಬಳಕ್ಕಾಗಿ ಮಾತ್ರವಲ್ಲದೆ ಮಕ್ಕಳ ಭವಿಷ್ಯ ರೂಪಿಸಲು ಕಂಕಣಬದ್ಧರಾಗಿದ್ದಾರೆ. ಭವ್ಯ ಭಾರತದ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಲ್ಲಿರುವುದರಿಂದ ಇದನ್ನು ಸೇವೆ ಎಂದು ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು.

ಬಸವರಾಜ ಕೌಲಗಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ

Share this article