ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕಾಮೃತಕ್ಕೆ ಚಾಲನೆ

KannadaprabhaNewsNetwork | Published : Feb 20, 2024 1:49 AM

ಸಾರಾಂಶ

ಪ್ರತಿ ಕೇಂದ್ರದಲ್ಲಿ ಐದು ಕೊಠಡಿಗಳಂತೆ ಪ್ರತಿ ತರಗತಿ ಕೊಠಡಿಯಲ್ಲಿ 40 ವಿದ್ಯಾರ್ಥಿಗಳಂತೆ ತಂಡಗಳನ್ನು ಮಾಡಿ ಜಿಲ್ಲೆಯ ನುರಿತ ಸಂಪನ್ಮೂಲ ಶಿಕ್ಷಕರಿಂದ ಈಗಾಗಲೇ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪ್ರತಿದಿನ ಬೆಳಗ್ಗೆ 9.30 ರಿಂದ 5.30ರವರೆಗೆ ಕಲಿಕಾಮೃತ ಕಾರ್ಯಕ್ರಮವನ್ನು ವಿಶೇಷವಾಗಿ ಮಕ್ಕಳ ಕಲಿಕಾ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕಲಿಕೆಯಲ್ಲಿ ಹಿಂದುಳಿದ ಹಾಗೂ ಕಲಿಕಾ ಮಟ್ಟದಲ್ಲಿ ನಿರೀಕ್ಷೆಗಿಂತ ಕಡಿಮೆ ಇರುವ ಎಸ್ಸೆಸ್ಸೆಲ್ಸಿಯ 600 ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಕಲಿಕಾಮೃತ ಕಾರ್ಯಕ್ರಮವನ್ನು ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಸೋಮವಾರ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ಫೆ. 19 ರಿಂದ 24ರವರೆಗೆ ಮೂರು ಕೇಂದ್ರಗಳಾದ ಕುವೆಂಪುನಗರದ ಜ್ಞಾನಗಂಗಾ ಪ್ರೌಢಶಾಲೆ, ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪ್ರೌಢಶಾಲೆ, ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಲ್ಲಿ 200 ವಿದ್ಯಾರ್ಥಿಗಳಂತೆ ವಲಯದ 78 ಪ್ರೌಢಶಾಲೆಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅವರ ಶಾಲೆಯ ಸಮೀಪದ ಕೇಂದ್ರಗಳಿಗೆ ಹೊಂದಿಸಿಕೊಂಡಂತೆ ವಿಂಗಡಿಸಲಾಗುವುದು.

ಪ್ರತಿ ಕೇಂದ್ರದಲ್ಲಿ ಐದು ಕೊಠಡಿಗಳಂತೆ ಪ್ರತಿ ತರಗತಿ ಕೊಠಡಿಯಲ್ಲಿ 40 ವಿದ್ಯಾರ್ಥಿಗಳಂತೆ ತಂಡಗಳನ್ನು ಮಾಡಿ ಜಿಲ್ಲೆಯ ನುರಿತ ಸಂಪನ್ಮೂಲ ಶಿಕ್ಷಕರಿಂದ ಈಗಾಗಲೇ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪ್ರತಿದಿನ ಬೆಳಗ್ಗೆ 9.30 ರಿಂದ 5.30ರವರೆಗೆ ಕಲಿಕಾಮೃತ ಕಾರ್ಯಕ್ರಮವನ್ನು ವಿಶೇಷವಾಗಿ ಮಕ್ಕಳ ಕಲಿಕಾ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ದಕ್ಷಿಣ ವಲಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 4,367 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಈ ಸಾಲಿನ ಶೈಕ್ಷಣಿಕ ಪ್ರಗತಿಯ ಅನುಸಾರ ಅನೇಕ ಘಟಕ ಪರೀಕ್ಷೆಗಳು ಕಿರು ಪರೀಕ್ಷೆಗಳು, ಮಧ್ಯವಾರ್ಷಿಕ ಪರೀಕ್ಷೆಗಳು ಜಿಲ್ಲಾ ಮಟ್ಟ, ಶಾಲಾ ಮಟ್ಟ ಮತ್ತು ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಹಾಗೂ ವಿಶೇಷವಾಗಿ ನಮ್ಮ ಬ್ಲಾಕಿನಲ್ಲಿ ನಡೆಸಿದ ಆಗಸ್ಟ್ ಮತ್ತು ನವೆಂಬರ್ ಮಾಹೆಗಳಲ್ಲಿ ಕಲಿಕಾಖಾತ್ರಿ ಪರೀಕ್ಷೆಯ ಫಲಿತಾಂಶ ಮತ್ತು ವಿಶ್ಲೇಷಣೆಯ ಆಧಾರದ ಮೇರೆಗೆ ಸುಮಾರು 600 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ನಿರೀಕ್ಷಿತ ಕಲಿಕಾ ಮಟ್ಟವನ್ನು ಸಾಧಿಸದೆ ಇರುವುದು ಕಂಡು ಬಂದಿದೆ. ಹಾಗೂ ಈ ವಿದ್ಯಾರ್ಥಿಗಳು ಎರಡು ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಿರುವುದು ವಿಶ್ಲೇಷಣೆಯಲ್ಲಿ ಕಂಡು ಬಂದಿದೆ.

ಮೂರು ಕೇಂದ್ರಗಳಲ್ಲಿ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಶಿಸ್ತು ಸಮಯ ನಿರ್ವಹಿಸಲು ಪ್ರತಿ ಕೇಂದ್ರಕ್ಕೆ ಮೂರು ಜನ ದೈಹಿಕ ಶಿಕ್ಷಕರು. ನೋಡಲ್ ಅಧಿಕಾರಿಗಳು. ಹಾಜರಾತಿ ಅಧಿಕಾರಿಗಳು ಎಲ್ಲ ಸುರಕ್ಷತೆಯೊಂದಿಗೆ ನಿರ್ವಹಿಸಲು ಕ್ರಮ ವಹಿಸಲಾಗಿದೆ.

ಈ ಕಲಿಕಾಮೃತ ಕಾರ್ಯಾಗಾರದಲ್ಲಿ ಮಕ್ಕಳಿಗೆ ಈಗಾಗಲೇ ತಾವು ಗುರುತಿಸಿಕೊಂಡಿರುವ ಕ್ಲಿಷ್ಟವೆನಿಸಿರುವ ವಿಷಯ ಮತ್ತು ಟಾಪಿಕ್ ಆಧಾರದ ಮೇಲೆ ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಗಮನಹರಿಸಿ ಏಳು ದಿನಗಳ ಸತತ ಕಾರ್ಯಕ್ರಮವನ್ನು ಆಯೋಜಿಸಿದೆ ಹಾಗೂ 7ನೇ ದಿನ ವಿದ್ಯಾರ್ಥಿಗಳಿಗೆ ಕಲಿಕಾಮೃತ ಎನ್ನುವ ಪಾಸಿಂಗ್ ಪ್ಯಾಕೇಜ್ ಅನ್ನು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರ ಮೂಲಕ ನೀಡಲಾಗುವುದು

ಈಗಾಗಲೇ ಈ ಪಾಸಿಂಗ್ ಪ್ಯಾಕೇಜ್ ನುರಿತ ಸಂಪನ್ಮೂಲ ಶಿಕ್ಷಕರಿಂದ ತಯಾರಿಸಲಾಗಿದ್ದು, ಕಡೆ ದಿನ ವಿತರಿಸಲಾಗುವುದು. ವಿಶೇಷವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಪ್ರತಿದಿನ ಮಧ್ಯಾಹ್ನ ಇಸ್ಕಾನ್ ವತಿಯಿಂದ ಉಪಹಾರ ನೀಡಲಾಗುವುದು.

Share this article