ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಕೃಷಿಕ ಸಮಾಜದ ಸಭೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೃಷಿಕ ಸಮಾಜ ಎಂದಾಕ್ಷಣ ರಸಗೊಬ್ಬರ, ಬಿತ್ತನೆ ಬೀಜದ ಬಗ್ಗೆ ಚರ್ಚೆ ಮಾಡಬೇಕೆಂದೇನೂ ಇಲ್ಲ. ಶಾಲೆಗಳಲ್ಲಿ ಓದುವ ಗ್ರಾಮೀಣ ಮಕ್ಕಳು ಕೃಷಿಕ ಸಮಾಜಕ್ಕೆ ಸೇರಿಲ್ಲವಾ. ಶೈಕ್ಷಣಿಕ ಸಮಸ್ಯೆ ಮುಂದಿಟ್ಟುಕೊಂಡು ಗಂಭೀರ ಚರ್ಚೆಗೆ ಬುಧವಾರ ನಡೆದ ಜಿಲ್ಲಾ ಕೃಷಿಕ ಸಮಾಜದ ಸಭೆ ಸಾಕ್ಷಿಯಾಗಿತ್ತು.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ, ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಅನೇಕ ಶಾಲೆಗಳು ರಾಜ್ಯ ಪಠ್ಯಕ್ರಮದ ಅನುಮತಿ ಪಡೆದು, ಸಿಬಿಎಸ್‍ಇ ಅಥವಾ ಐಸಿಎಸ್‍ಇ ಎಂದು ಪ್ರಚಾರ ಮಾಡುತ್ತಿವೆ. ಇದು ಫೋಷಕರಿಗೆ ಮಾಡುವ ವಂಚನೆಯಾಗಿದೆ. ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂದರು.
ಶಾಲೆ ನಡೆಸಲು ಇರಬೇಕಾದ ಕನಿಷ್ಟ ಜಮೀನು, ಕಟ್ಟಡದ ಸುರಕ್ಷತೆ ಮತ್ತು ಇತರೆ ನಿಯಮಗಳ ಪಾಲಿಸದ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕೆಲವು ಶಾಲೆಗಳು ಒಂದೇ ಆವರಣದಲ್ಲಿ ವಿವಿಧ ಪಠ್ಯಕ್ರಮಗಳನ್ನು ನಡೆಸುತ್ತ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಇಂತಹ ಶಾಲೆಗಳ ಪಟ್ಟಿಯನ್ನು ಪತ್ರಿಕೆಗಳ ಮೂಲಕ ಪ್ರಕಟಿಸಬೇಕು ಎಂದು ತಿಳಿಸಿದರು.
ಶಾಲಾ ಜಾಗವನ್ನು ಒತ್ತುವರಿ ಮಾಡಿಕೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗಾಗಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಖಜಾಂಚಿ ಭಕ್ತ ಪ್ರಹ್ಲಾದ್ ಸಲಹೆ ನೀಡಿದರು.
ಸರ್ಕಾರಿ ಶಾಲೆಗಳಿಗೆ ಈ ಹಿಂದೆ ಅನೇಕರು ಭೂದಾನ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ಶಾಲೆಯ ದಾಖಲೆಗಳನ್ನು ಕ್ರಮಬದ್ಧಗೊಳಿಸಿ ನೋಂದಣಿ ಮಾಡಿಸಬೇಕು. ಈ ಕುರಿತು ಶಿಕ್ಷಣ ಇಲಾಖೆ ಸಮಗ್ರ ಸುತ್ತೋಲೆ ತಂದು ದಾಖಲಾತಿ ಸಂರಕ್ಷಣೆಗೆ ಮಾಡುವುದು ಒಳಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಎ.27ರಿಂದ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಆರಂಭವಾಗಿದ್ದು, ಈಗಾಗಲೇ 90,000 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕುಮಾರ್ ಸಭೆಗೆ ಮಾಹಿತಿ ನೀಡಿದರು.ಈ ಬಾರಿ ಲಸಿಕೆ ನೀಡಿದ ತಕ್ಷಣವೇ ಜಾನುವಾರುಗಳಿಗೆ ‘ಇನಾಫ್’ ತಂತ್ರಾಂಶದಡಿ 12 ಅಂಕಿಯ ಆಧಾರ್ ಸಂಖ್ಯೆಯ ಟ್ಯಾಗ್ ಅಳವಡಿಸಿ ನೋಂದಾಯಿಸಲಾಗುತ್ತಿದೆ. ಇದರಿಂದ ಲಸಿಕೆ ಪಡೆದ ಜಾನುವಾರುಗಳ ನಿಖರ ಮಾಹಿತಿ ಲಭ್ಯವಾಗಲಿದ್ದು, ನಕಲಿ ದಾಖಲಾತಿಗೆ ಅವಕಾಶವಿರುವುದಿಲ್ಲ ಎಂದರು.
ಜಾನುವಾರುಗಳು ಮೃತಪಟ್ಟರೆ ನೀಡಲಾಗುತ್ತಿದ್ದ ವಿಮಾ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದ್ದು, ದನ ಅಥವಾ ಎತ್ತುಗಳಿಗೆ 15,000 ರು. ಹಾಗೂ ಕುರಿ-ಮೇಕೆಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ 5,000 ದಿಂದ 7,000 ರು. ವರೆಗೆ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ 3,238 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, ಒಟ್ಟು 3,830 ರೇಷ್ಮೆ ಬೆಳೆಗಾರರು ಜಿಲ್ಲೆಯಲ್ಲಿದ್ದಾರೆ. ಕಳೆದ ಮಾರ್ಚ್‌ನಲ್ಲಿ 18 ಲಕ್ಷ ಚಾಕಿ ವಿತರಿಸಲಾಗಿದ್ದು, 1,500 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯ ಗುರಿ ತಲುಪಲಾಗಿದೆ. ರೈತರಿಗೆ ರೇಷ್ಮೆ ಕೃಷಿ ಸುಲಭಗೊಳಿಸಲು ಇಲಾಖೆ ಕಳೆದ ವರ್ಷದಿಂದ ಹಲವಾರು ನೆರವು ನೀಡಿದೆ. ಜಿಲ್ಲೆಯಾದ್ಯಂತ 35 ರೇಷ್ಮೆ ಹುಳು ಸಾಕಾಣಿಕೆ ಮನೆಗಳಿಗೆ ಸಹಾಯಧನ ನೀಡಲಾಗಿದ್ದು, ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಲು ಬಯಸುವವರಿಗಾಗಿ 10 ಗರಿ ಶೆಡ್‍ಗಳನ್ನು ನಿರ್ಮಿಸಿಕೊಡಲಾಗಿದೆ. 150 ಹೆಕ್ಟೇರ್ ರೇಷ್ಮೆ ಪ್ರದೇಶಕ್ಕೆ ಹನಿ ನೀರಾವರಿ ಅಳವಡಿಸಲು ಆರ್ಥಿಕ ನೆರವು ಒದಗಿಸಲಾಗಿದೆ. ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಸೌರ ದೀಪ ವಿತರಿಸಲಾಗುತ್ತಿದೆ. ಹಿರಿಯೂರು ತಾಲೂಕಿನಲ್ಲಿ 600 ಹೆಕ್ಟೇರ್, ಚಳ್ಳಕೆರೆ 400 ಹೆಕ್ಟೇರ್, ಚಿತ್ರದುರ್ಗ 350 ಹೆಕ್ಟೇರ್, ಹೊಸದುರ್ಗ 320 ಹೆಕ್ಟೇರ್, ಮೊಳಕಾಲ್ಮೂರು 300 ಹೆಕ್ಟೇರ್ ಹಾಗೂ ಹೊಳಲ್ಕೆರೆ 120 ಹೆಕ್ಟೇರ್ ಪ್ರದೇಶವನ್ನು ರೇಷ್ಮೆ ಕೃಷಿ ಹೊಂದಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಿಥುನ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಸದಸ್ಯರಾದ ಭಕ್ತ ಪ್ರಹ್ಲಾದ್, ಚಂದ್ರಶೇಖರಪ್ಪ, ಶಿವಲಿಂಗಪ್ಪ, ಪರಮೇಶ್ವರಪ್ಪ, ಧರಣೇಶ್, ಕಾಂತರಾಜು, ರಮೇಶಪ್ಪ, ರಾಗಿ ಶಿವಮೂರ್ತಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.