ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಸಂಸ್ಥೆಗಳು ಶ್ರಮಿಸಲಿ

KannadaprabhaNewsNetwork |  
Published : Mar 16, 2025, 01:48 AM IST
ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ನ ನೂತನ ಶಾಖೆ ಉದ್ಘಾಟನೆ | Kannada Prabha

ಸಾರಾಂಶ

ಪ್ರತಿಯೊಬ್ಬ ಮಗುವಿನ ಶೈಕ್ಷಣಿಕ ಪ್ರಗತಿಗಾಗಿ ಹಗಲಿರುಳು ಪ್ರಾಮಾಣಿಕತೆಯಿಂದ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ದಿನಕ್ಕೊಂದು ಆವಿಷ್ಕಾರಗಳ ಮೂಲಕ ಸಾಧನೆಯ ಶಿಖರದತ್ತ ಇಂದಿನ ಜಗತ್ತು ಸಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಪಠ್ಯಕ್ರಮದ ಜೊತೆಗೆ ಶಿಕ್ಷಕರು ಮೌಲ್ಯ ಶಿಕ್ಷಣದ ಅರಿವು ನೀಡುತ್ತ ಸಮಾಜದಲ್ಲಿ ಉತ್ತಮ ವಿನಯಶೀಲ ಯಶಸ್ವಿ ವ್ಯಕ್ತಿಯಾಗಲು ಪ್ರೇರೇಪಿಸುವುದು ಪ್ರತಿಯೊಬ್ಬ ಶಿಕ್ಷಕರ ಆದ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಹತ್ತಿರದ ಕಿತ್ತೂರು ರಾಣಿ ಚನ್ನಮ್ಮ ನಗರದಲ್ಲಿ ಹಮ್ಮಿಕೊಂಡ ಸುರೇಶ ಜತ್ತಿ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ನೂತನ ಶಾಖೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತರಗತಿಯಲ್ಲಿ ಮಗುವಿಗೆ ಪ್ರೀತಿ ಸಹಾನುಭೂತಿ ವಾತಾವರಣ ನಿರ್ಮಿಸಬೇಕು. ಆ ಮಗುವಿನ ವಿಷಯ ಜ್ಞಾನ ತಿಳಿದುಕೊಂಡು ಪ್ರತಿಯೊಬ್ಬ ಮಗುವಿನ ಶೈಕ್ಷಣಿಕ ಪ್ರಗತಿಗಾಗಿ ಹಗಲಿರುಳು ಪ್ರಾಮಾಣಿಕತೆಯಿಂದ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಶ್ರಮಿಸಬೇಕು. ಅಂದಾಗ ಮಾತ್ರ ಮಗು ಉನ್ನತ ಹಂತ ತಲುಪಲು ಸಾಧ್ಯ. ಮಕ್ಕಳ ಜೊತೆಗೆ ಮಗುವಾಗಿ ಬೆರೆತು ಬೋಧಿಸಬೇಕು. ಮಗುವಿನ ಕಷ್ಟ ಸುಖದಲ್ಲಿ ಭಾಗಿಯಾಗಲು ಪ್ರಯತ್ನಿಸಬೇಕು ಎಂದರು.

ಮುಖ್ಯ ಅತಿಥಿ ಸಾಹಿತಿ ರೇವಣಸಿದ್ದಪ್ಪ ಪಟ್ಟಣಶೆಟ್ಟಿ ಮಾತನಾಡಿ, ಕೇವಲ ಸರಕಾರಿ ನೌಕರಿ ಆಸೆಗಾಗಿ ಮಕ್ಕಳಿಗೆ ಶಿಕ್ಷಣ ಕೊಡಬಾರದು. ಮಗುವಿನ ಮುಂದಿನ ಬಾಳಿಗೆ ಗುರುಗಳು ಹಾಗೂ ತಂದೆ ತಾಯಿಗಳು ದಾರಿದೀಪವಾಗಬೇಕು. ಶಿಕ್ಷಣದ ಜೊತೆಗೆ ಮುಂದಿನ ದಿನಮಾನಗಳಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ನಿಭಾಯಿಸಿ ಜನಮೆಚ್ಚುವಂತೆ ಬದುಕುವಂತೆ ಮಾಡಬೇಕು. ಏನಾದರೂ ಮಾಡಿ ಲಕ್ಷ ತರುವ ಮಕ್ಕಳಾಗದೇ ತಂದೆ ತಾಯಿಗಳ ಕಡೆಗೆ ಲಕ್ಷ್ಯ ಕೊಡುವ ಮಕ್ಕಳನ್ನಾಗಿ ಮಾಡಬೇಕು ಎಂದು ಹೇಳಿದರು.

ಅತಿಥಿ ಅಹಿಂದ ನಾಯಕ ಅಭಿಷೇಕ ಚಕ್ರವರ್ತಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಹಣ ಗಳಿಸುವ ಕಡೆಗೆ ಗಮನ ಹರಿಸದೆ ಮಗುವಿನ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಬೇಕು. ಶಿಕ್ಷಣ ಎಂಬುವುದು ವ್ಯಾಪಾರೀಕರಣವಾಗುತ್ತಿರುವ ಇಂದಿನ ಜಗತ್ತಿನಲ್ಲಿ ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ದೊರಕುವಂತೆ ಮಾಡುವುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಗುವಿಗೆ ಶಾಲೆಯ ಜೊತೆಗೆ ಕೋಚಿಂಗ್ ಕ್ಲಾಸುಗಳ ಅವಶ್ಯಕತೆ ಇದೆ ಎಂದರು.

ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಪ್ರಾಸ್ತಾವಿಕ ಮಾತನಾಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಅಪ್ಪು ಒಡೆಯರ ಮಾತನಾಡಿದರು. ಮಹಾನಗರ ಪಾಲಿಕೆಯ ಸದಸ್ಯ ಮಳುಗೌಡ ಪಾಟೀಲ, ರಾಜೇಸಾಬ ಶಿವನಗುತ್ತಿ, ರವಿ ಖಾನಾಪುರ, ಸೋಮನಗೌಡ ಮಾಲಿಪಾಟೀಲ, ಶಿವನಗೌಡ ಪಾಟೀಲ, ಚಂದ್ರಶೇಖರ ಮೊಗೇರ, ಕಲ್ಪನಾ ಶಾಬಾದಿ, ಪ್ರಕಾಶ ಹಳಕಟ್ಟಿ, ರವಿ ಕಿತ್ತೂರ, ರಾಘವೇಂದ್ರ ನೆಬಗೇರಿ, ಸಂತೋಷ ಯಾದವಾಡ, ನೀಲಾ ಜತ್ತಿ, ಮಧು ಬಿರಾದಾರ, ಸೌಮ್ಯ ಗಲಗಲಿ, ಸುಚಿತ್ರ ಹೊಸಮನಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಆನಂದ ಕಂಬಾರ ನಿರೂಪಿಸಿದರು. ಪರಶುರಾಮ ಬಗಲಿ ವಂದಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ