ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಎಲ್ಲವೂ ಇದ್ದೂ ನಮಗೇನು ಇಲ್ಲ ಎಂದು ಚಿಂತಿಸುವವರ ಮಧ್ಯೆ ಎರಡು ಕಣ್ಣುಗಳು ಇಲ್ಲದಿದ್ದರೂ ಈಜಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬಾಲಕನೊಬ್ಬ ಎರಡು ಚಿನ್ನದ ಪದಕಗಳನ್ನು ಗೆದ್ದು ಅಚ್ಚರಿಯಾಗುವಂತೆ ಮಾಡಿದ್ದಾನೆ. ಹುಟ್ಟಿನಿಂದಲೇ ದೃಷ್ಟಿಹೀನನಾಗಿರುವ ಬಸವನಾಡಿನ ಬಾಲಕ ಈಗ ಕಣ್ಣಿದ್ದವರೂ ನಾಚುವಂತಹ ಸಾಧನೆ ಮಾಡಿದ್ದಾನೆ. ಚಿನ್ನ ಗೆದ್ದ ಛಲದಂಕ ಮಲ್ಲನ ಸಾಹಸಗಾಥೆ ಇದು.
ದೃಷ್ಟಿ ಇಲ್ಲದಿದ್ದರೂ ಈತನ ಬಗ್ಗೆ ಕೇಳಿದವರೆಲ್ಲ ಹುಬ್ಬೇರಿಸುವಂತ ಸಾಧನೆ ಮಾಡಿದ್ದಾನೆ. ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಅಮೋಘ ತಂಗಡಿ ಎಂಬ 14ವರ್ಷದ ಬಾಲಕ ಈ ಸಾಧನೆ ಮಾಡಿದ ಬಾಲಕ. 2024 ಅಕ್ಟೋಬರ್ 19ರಿಂದ 22ರವರೆಗೆ ಗೋವಾದಲ್ಲಿ ನಡೆದ ಅಂಧ ಮಕ್ಕಳ ನ್ಯಾಷನಲ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಫ್ರೀ ಸ್ಟೈಲ್ ಹಾಗೂ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ವಿಮ್ಮಿಂಗ್ ಕಾಂಪಿಟೇಷನ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದಾನೆ. ಇದೇ ಇವೆಂಟ್‌ನಲ್ಲಿ ನಡೆದ 50ಮೀಟರ್ ಫ್ರೀ ಸ್ಟೈಲ್ ಕಾಂಪಿಟೇಷನ್‌ನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾನೆ.ರಾಜ್ಯಮಟ್ಟದಲ್ಲೂ ಸಾಧನೆ:
ಕರ್ನಾಟಕ ಪ್ಯಾರಾ ಸ್ವಿಮ್ಮಿಂಗ್ ಅಸೋಸಿಯೇಷನ್ ವತಿಯಿಂದ 2024 ಮಾರ್ಚ್ 2ರಂದು ಬೆಂಗಳೂರಿನಲ್ಲಿ ನಡೆದ ಅಂಧ ಮಕ್ಕಳ ಕರ್ನಾಟಕ ಸ್ಟೇಟ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಫ್ರೀ ಸ್ಟೈಲ್, 50ಮೀಟರ್ ಫ್ರೀ ಸ್ಟೈಲ್ ಹಾಗೂ 50 ಮೀಟರ್ ಬ್ಯಾಕ್ ಸ್ಟ್ರೋಕ್ ಈ ಮೂರು ಸ್ಪರ್ಧೆಗಳಲ್ಲಿಯೂ ಅಮೋಘ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಮೂರು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ.ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸುರೇಖಾ ಹಾಗೂ ಸಂಜೀವ ತಂಗಡಿ ದಂಪತಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಅದರಲ್ಲಿ ಮೊದಲನೇ ಮಗ ಬಾಬು ಎಲ್ಲರಂತಿದ್ದರೆ, ಎರಡನೇ ಮಗ ಅಮೋಘ ಹಾಗೂ ಮೂರನೇ ಮಗ ಆನಂದ ಇಬ್ಬರು ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದಾರೆ. ಇಬ್ಬರನ್ನು ನಗರದ ಶಿವಶರಣ ಹರಳಯ್ಯ ಅಂಧ ಮಕ್ಕಳ ಶಾಲೆಯಲ್ಲಿ 1ರಿಂದ 4ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿಸಿದ್ದಾರೆ. ಬಳಿಕ 5ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ಸೇರಿಸಿದ್ದಾರೆ.
ಬೆಳಗಾವಿಯ ಅಂಧ ಮಕ್ಕಳ ಶಾಲೆಯ ಶಿಕ್ಷಕ ಸುರೇಶ ಹಾಗೂ ಮಲ್ಲಪ್ಪ ಎಂಬುವವರು ಅಮೋಘನಿಗೂ ಈಜು ಕಲಿಸಿದ್ದಾರೆ. ಈ ವೇಳೆ ಆತನ ಶ್ರದ್ಧೆ ಹಾಗೂ ಈಜಿನ ವೇಗವನ್ನು ಗಮನಿಸಿ ಕ್ರೀಡಾಕೂಟದಲ್ಲಿ ಅವಕಾಶ ನೀಡಿದ್ದಾರೆ. ಬಳಿಕ ಜಿಲ್ಲಾ ಮಟ್ಟದ ಅಂಧರ ಈಜು ಸ್ಪರ್ಧೆಯಲ್ಲಿ ಅಮೋಘ ಉತ್ತಮ ಸಾಧನೆ ಮಾಡಿದ್ದಾನೆ. ಇದರಿಂದ ರಾಜ್ಯ ಮಟ್ಟದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ಆ ಬಳಿಕ ರಾಷ್ಟ್ರಮಟ್ಟದಲ್ಲೂ ಗೆದ್ದು ಜಿಲ್ಲೆಯ ಹೆಸರನ್ನು ಉತ್ತುಂಗಕ್ಕೇರಿಸಿದ್ದಾನೆ.------------ಕೋಟ್ಅಂಧತ್ವ ಶಾಪವಲ್ಲ, ಅದನ್ನೂ ಮೀರಿ ನಾವು ಸಾಧನೆ ಮಾಡಬೇಕು. ಅಂಧರಷ್ಟೇಯಲ್ಲ ಇತರೇ ವಿಶೇಷಚೇತನರಿಗೆ ಅನುಕಂಪದ ಬದಲಾಗಿ, ಬೆಂಬಲ ನೀಡಿದರೆ ಅವರಿಂದಲೂ ಸಾಧನೆ ಆಗುತ್ತದೆ. ಕಣ್ಣು ಕಾಣಿಸಲ್ಲ ಎಂದು ಸುಮ್ಮನೇ ಕೂಡದೇ ಸಾಧಕರಾಗಬೇಕು. ಅಂಧತ್ವ ಎಂಬುದು ಕುರುಡಲ್ಲ ಅದು ಸಾಧನೆಗೆ ಪ್ರೇರಣೆ.
-ಅಮೋಘ ತಂಗಡಿ, ಸ್ವಿಮ್ಮಿಂಗ್ ಸಾಧಕ.ಕುರುಡುತನ ಆಗಿದೆ ಎಂದು ಅಮೋಘ ಮನೆ ಹಿಡಿದು ಕೂಡಲಿಲ್ಲ. ಪೋಷಕರು ಸಹ ಆತನ ಬೆನ್ನುಲುವಾಗಿ ನಿಂತು ಆತನಿಗೆ ಶಿಕ್ಷಣ ಕೊಡಿಸಿದ್ದಾರೆ. ಅಂಧತ್ವ ಮನೆಯಲ್ಲಿನ ಬಡತನ ಬಾಲಕನ ಸಾಧನೆಗೆ ಪ್ರೇರಣೆಯಾಗಿದೆ. ಈ ಬಾಲಕನಿಗೆ ಉತ್ತಮ ತರಬೇತಿ ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ದಿಸೆಯಲ್ಲಿ ಅಂಧ ಬಾಲಕ ಅಮೋಘನ ಸಹಾಯಕ್ಕೆ ಸಂಘ ಸಂಸ್ಥೆಗಳು, ಸ್ಥಿತಿವಂತರು ಕ್ರೀಡಾ ಪ್ರೇಮಿಗಳು ಮುಂದಾಗಬೇಕು.-ಮಹಾಂತೇಶ ಗುಲಗಂಜಿ, ಸ್ಥಳೀಯರು.