ತ್ರಿಭಾಷಾ ಸೂತ್ರದಿಂದ ಕನ್ನಡ ಭಾಷೆ ಮೇಲೆ ಪರಿಣಾಮ: ಕೆ.ಪಿ.ಮೃತ್ಯುಂಜಯ

KannadaprabhaNewsNetwork |  
Published : Jan 20, 2025, 01:30 AM IST
೧೯ಕೆಎಂಎನ್‌ಡಿ-೫ಮಂಡ್ಯದ ಡಿ.ದೇವರಾಜ ಅರಸು ಭವನದಲ್ಲಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ಇಂದು ಪಿಯು ಮಟ್ಟದಲ್ಲೂ ಕನ್ನಡ ವರ್ಣಮಾಲೆಯನ್ನು ಗುರುತಿಸದ ಮಕ್ಕಳಿದ್ದಾರೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಇದಕ್ಕೆ ಪೋಷಕರೇ ಕಾರಣ ಎಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ನನ್ನ ಮಗುವಿಗೆ ಹಿಂದಿ, ಇಂಗ್ಲಿಷ್ ಚೆನ್ನಾಗಿ ಬರುತ್ತದೆ, ಆದರೆ, ಕನ್ನಡ ಸರಿಯಾಗಿ ಬರೋಲ್ಲ ಎಂದು ದೊಡ್ಡಸ್ಥಿಕೆ ಎಂಬಂತೆ ಹೇಳಿಕೊಳ್ಳುವಂತಹ ವಾತಾವರಣ ಕಂಡುಬರುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರಕವಿ ಕುವೆಂಪು ಅವರು ತ್ರಿಭಾಷಾ ಸೂತ್ರದ ವಿರುದ್ಧ ಎಚ್ಚರಿಕೆ ನೀಡಿದ್ದನ್ನು ನಿರ್ಲಕ್ಷಿಸಿದ ಸರ್ಕಾರಗಳ ನಡೆಯಿಂದ ಇಂದು ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ ಎಂದು ಕನ್ನಡ ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಕಳವಳ ವ್ಯಕ್ತಪಡಿಸಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಹಿಂದಿ, ಇಂಗ್ಲಿಷ್ ಪ್ರವಾಹ ಹೀಗೆ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಅಪ್ಪಟ ಕನ್ನಡ ನೆಲದ ಮಂಡ್ಯದಲ್ಲೂ ಕೂಡ ಕನ್ನಡದ ಶಾಲೆಗಳನ್ನು ದೀಪ ಹಿಡಿದು ಹುಡುಕಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಂದು ಪಿಯು ಮಟ್ಟದಲ್ಲೂ ಕನ್ನಡ ವರ್ಣಮಾಲೆಯನ್ನು ಗುರುತಿಸದ ಮಕ್ಕಳಿದ್ದಾರೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಇದಕ್ಕೆ ಪೋಷಕರೇ ಕಾರಣ ಎಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ನನ್ನ ಮಗುವಿಗೆ ಹಿಂದಿ, ಇಂಗ್ಲಿಷ್ ಚೆನ್ನಾಗಿ ಬರುತ್ತದೆ, ಆದರೆ, ಕನ್ನಡ ಸರಿಯಾಗಿ ಬರೋಲ್ಲ ಎಂದು ದೊಡ್ಡಸ್ಥಿಕೆ ಎಂಬಂತೆ ಹೇಳಿಕೊಳ್ಳುವಂತಹ ವಾತಾವರಣ ಕಂಡುಬರುತ್ತಿದೆ. ಇದರ ಪರಿಣಾಮ ಇಡೀ ಸಮಾಜ ನಾಶದತ್ತ ಸಾಗುತ್ತದೆ ಎಂಬುದನ್ನು ಕವಿ ಕುವೆಂಪು ಅವರು ಹಿಂದೆಯೇ ಎಚ್ಚರಿಸಿದ್ದಾಗಿ ತಿಳಿಸಿದರು.

ಒಂದು ಸಮಾಜವನ್ನು ನಾಶಪಡಿಸಬೇಕಾದರೆ ಅವರ ಮಾತೃಭಾಷೆಯನ್ನು ನಿರ್ನಾಮ ಮಾಡಿದರೆ ಸಾಕು, ಆ ಇಡೀ ಸಮಾಜವೇ ನಶಿಸಿ ಹೋಗುತ್ತದೆ ಎಂಬುದನ್ನು ತಮ್ಮ ವಿಚಾರಧಾರೆಯಲ್ಲಿ ಸೂಕ್ಷ್ಮವಾಗಿ ಕುವೆಂಪು ಎಚ್ಚರಿಸಿದ್ದಾರೆ. ಅಂತಹ ಕುವೆಂಪು ಅವರ ೧೨೧ನೇ ಜಯಂತಿಯನ್ನು ಆಚರಿಸುವ ಈ ಸಂದರ್ಭದಲ್ಲಿ ಆಳುವ ಸರ್ಕಾರಗಳು ಎಚ್ಚೆತ್ತುಕೊಂಡು ಮಾತೃ ಭಾಷೆಗೆ ಪ್ರಾಧಾನ್ಯತೆ ನೀಡಿ, ಹಿಂದಿ ಏರಿಕೆಗೆ ತಡೆಯೊಡ್ಡದಿದ್ದರೆ ಸದ್ಯದಲ್ಲೇ ನಮ್ಮ ಮಕ್ಕಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.

ಅಚಲ ಯೋಗಿ ವೇಮನ ಭೋಗದ ಜೀವನದಿಂದ ವೈರಾಗ್ಯ ಜೀವನದ ಕಡೆಗೆ ಹೊರಳಿ ಜನತೆಗೆ ಮೌಲ್ಯಯುತ ಸಂದೇಶಗಳನ್ನು ನೀಡಿದ್ದಾರೆ. ಅಂತಹ ಮಹಾನ್ ಯೋಗಿ ಸಂತರು ನೀಡಿದ ಸಂದೇಶಗಳು ಮರೆಯಾಗಬಾರದು. ಅವುಗಳು ನಮಗೆ ಮಾರ್ಗದರ್ಶಕವಾಗಿರುವುದು ಸೂಕ್ತ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು, ಸ್ಕಂದ ಪುರಾಣದಲ್ಲಿಯೇ ಕರ್ನಾಟಕ ಎಂಬುದು ಉಲ್ಲೇಖವಾಗಿದೆ ಎಂದು ಪ್ರತಿ ಪ್ರತಿಪಾದಿಸಿದ್ದ ಕುವೆಂಪು ಅವರು ಕನ್ನಡವನ್ನು ಎತ್ತಿ ಹಿಡಿದಷ್ಟು ಬೇರಾರೂ ಎತ್ತಿ ಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಅಭಿಪ್ರಾಯಪಟ್ಟರು.

ತಡವಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ಕುವೆಂಪು ಹಾಗೂ ವೇಮನ ಯೋಗಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅಧ್ಯಕ್ಷೀಯ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಬಿ.ವಿ. ನಂದೀಶ್, ಡಿ.ದೇವರಾಜ ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಜೈಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್, ಕನ್ನಡ ಸೇನೆಯ ಮಂಜುನಾಥ್, ಕಸಾಪದ ಚಂದ್ರಲಿಂಗು, ಪಣ್ಣೆದೊಡ್ಡಿ ಹರ್ಷ, ಪ್ರತಿಭಾಂಜಲಿ ಡೇವಿಡ್ ಉಪಸ್ಥಿತರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌