ಬೆಳಗಾವಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಜಗದೀಶ ಶೆಟ್ಟರ್

KannadaprabhaNewsNetwork |  
Published : Apr 20, 2024, 01:07 AM IST
ಬೆಳಗಾವಿ ನ್ಯಾಯಾಲಯದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಚುನಾವಣಾ ಪ್ರಚಾರ ಮಾಡಿದರು | Kannada Prabha

ಸಾರಾಂಶ

ಬೆಳಗಾವಿ ಕೋರ್ಟ್ ಆವರಣದಲ್ಲಿ ಶುಕ್ರವಾರ ವಕೀಲರ ಸಂಘದ ಸಭಾಭವನದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಮೋದಿಯವರು ಮತ್ತೊಮ್ಮೆ ಪ್ರಧಾನಿ ಆದರೆ ಕಾಮನ್ ಸಿವಿಲ್ ಕೋಡ್‌ ದೇಶಾದ್ಯಂತ ಜಾರಿಗೆ ತರುತ್ತೇವೆ. ಅಧಿಕಾರಕ್ಕೆ ಬಂದ ಮೇಲೆ ಮುಂದಿನ ಐದು ವರ್ಷ ಕೆಲಸಗಳು ಮೊದಲೇ ಜಾರಿಗೆ ತಂದು, ಭ್ರಷ್ಟಾಚಾರರಹಿತ ಆಡಳಿತ ಮಾಡುತ್ತೇವೆ. ನಾನು ಲೋಕಸಭೆಗೆ ಆಯ್ಕೆ ಆದರೆ ಬೆಳಗಾವಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಬೆಳಗಾವಿ ಕೋರ್ಟ್ ಆವರಣದಲ್ಲಿ ಶುಕ್ರವಾರ ವಕೀಲರ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಯಾವುದಾದರೂ ಯೋಜನೆ ಹಾಕಿಕೊಂಡರೆ ಅದನ್ನು ಕಾರ್ಯರೂಪಕ್ಕೆ ತಂದೇ ತರುತ್ತೇನೆ. ಹುಬ್ಬಳ್ಳಿ ಮಾದರಿಯಲ್ಲಿ ಬೆಳಗಾವಿಯಲ್ಲೂ ಕೋರ್ಟ್ ಆವರಣ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ನಾನು ರಾಜಕಾರಣಿ ಎನ್ನುವುದಕ್ಕಿಂತ ನಾನೊಬ್ಬ ವಕೀಲ.‌ ಇಡೀ ರಾಜ್ಯದಲ್ಲಿ ಬೆಳಗಾವಿ ಬಾರ್ ಅಸೋಸಿಯೇಶನ್ ಅತ್ಯಂತ ದೊಡ್ಡದು. ನ್ಯಾಯಾಲಯ ಆವರಣ ಎಂದರೆ ಎಲ್ಲ ವರ್ಗದ ಜನರು ಬರುತ್ತಾರೆ.‌ ವಕೀಲ ವೃತ್ತಿ ಮಾಡಿದ ಸಾಕಷ್ಟು ಜನ ಸಚಿವರು, ಮುಖ್ಯಮಂತ್ರಿಗಳು ಆಗಿದ್ದಾರೆ.‌ ಈ ಹಿಂದೆ ವಕೀಲರು ಎಲ್ಲರೂ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದಂತೆ ನನಗೂ ಬೆಂಬಲ ನೀಡಬೇಕು. ವಕೀಲರ ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಸಾಕಷ್ಟು ಸಲ ಧ್ವನಿ ಎತ್ತಿದ್ದೇನೆ. 1994ರಲ್ಲಿ ಮೊದಲ ಬಾರಿ ಶಾಸಕನಾದಾಗ ವಕೀಲರೇ ನಿಂತು, ಕಾರ್ಯಕರ್ತರಾಗಿ ಕೆಲಸ ಮಾಡಿದ್ದರಿಂದ ನಾನು ಜಯಗಳಿಸಿದೆ ಎಂದು ಹೇಳಿದರು.‌

ದೂರ ದೃಷ್ಟಿ ಇಟ್ಟುಕೊಂಡು ದೇಶದಲ್ಲಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ.‌ ಸ್ವದೇಶಿ ಉತ್ಪನ್ನಗಳಿಂದ ದೇಶದ ಹಲವಾರು ಜನರಲ್ಲಿ ಸ್ವಾಭಿಮಾನ ಮೂಡಿದೆ. ಆರ್ಟಿಕಲ್ 370 ತೆಗೆದು ಹಾಕಿದ್ದರಿಂದ ಬೆಳಗಾವಿ ಜನರು ಕೂಡ ಕಾಶ್ಮೀರದಲ್ಲಿ ಆಸ್ತಿ ಖರೀದಿ ಮಾಡಬಹುದು, ಕಾಶ್ಮೀರ್‌ ಅಭಿವೃದ್ಧಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸ್ವಿಡ್ಜರ್‌ ಲ್ಯಾಂಡ್‌ ಗೆ ಹೋಗುವ ಬದಲು ಕಾಶ್ಮೀರಕ್ಕೆ ಪ್ರವಾಸ ಮಾಡಬಹುದು. ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲಾ ಕೆಲಸಗಳು ಆಗುತ್ತಿವೆ. ಅದಕ್ಕೆ ಉತ್ತಮ ಉದಾಹರಣೆ ರಾಮಮಂದಿರ ನಿರ್ಮಾಣ ಮಾಡಿದ್ದು ಎಂದು ತಿಳಿಸಿದರು.

ಉಡಾನ್‌ ಯೋಜಯಡಿ ಮಂಗಲ ಅಂಗಡಿಯವರು ಎರಡನೇ ಟರ್ಮಿನಲ್ ಗಾಗಿ ₹ 310 ಕೊಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಬೆಂಗಳೂರನ್ನು ಬಿಟ್ಟರೆ ಬೆಳಗಾವಿ ವಿಮಾನ ನಿಲ್ದಾಣ ಅತ್ಯಂತ ಬ್ಯೂಜಿ ನಿಲ್ದಾಣ ಆಗಿದೆ.‌ ಮುಂದಿನ ದಿನದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ಈ ವೇಳೆ ಬಿಜೆಪಿ ರಾಜ್ಯ ಉಪಾದ್ಯಕ್ಷ ಅನಿಲ ಬೆನಕೆ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಜಿರಲಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮುರುಗೇಂದ್ರಗೌಡ ಪಾಟೀಲ, ಬೆಳಗಾವಿ ವಕೀಲ ಸಂಘದ ಉಪಾಧ್ಯಕ್ಷ ವಿಜಯ ಪಾಟೀಲ , ಬಸವರಾಜ ಮುಗಳಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ದೇವಟೆ, ಹನುಮಂತ ಕೊಂಗಾಲಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಗಾಳಕ್ಕೆ ದೀದಿ, ತಮಿಳ್ನಾಡಿಗೆ ಅಣ್ಣಾ, ಅಸ್ಸಾಂಗೆ ಮಾಮಾ, ಕೇರಳಕ್ಕೆ ದಾದಾ!
ಬಾಗಲಕೋಟೆ: ಮತ್ತೆ ಚರಂತಿಮಠ, ಮೇಟಿ ಕುಟುಂಬ ಮಧ್ಯೆ ಫೈಟ್‌