ಹಾವೇರಿ:ಬ್ಯಾಂಕುಗಳು ಬಡವರು, ಮಹಿಳೆಯರು, ಜನಸಾಮಾನ್ಯರಿಗೆ ಆದ್ಯತೆ ನೀಡಬೇಕು. ಮೂರ್ನಾಲ್ಕು ತಿಂಗಳಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯನ್ನು ಮಾದರಿ ಬ್ಯಾಂಕಿಂಗ್ ಜಿಲ್ಲೆಯನ್ನಾಗಿ ಮಾಡಬೇಕೆನ್ನುವುದು ನನ್ನ ಆಸೆ. ಅದಕ್ಕಾಗಿ ಅಧಿಕಾರಿಗಳು ಸಂತೋಷದಿಂದ ಸಕ್ರಿಯರಾಗಿ ಕೆಲಸ ಮಾಡಬೇಕು. ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡಬೇಕೆಂದು ಏಳೆಂಟು ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ಕೇಂದ್ರ ಸಹಕಾರ ಇಲಾಖೆ ಒಂದು ಜಿಲ್ಲೆಗೆ ಒಂದು ಡಿಸಿಸಿ ಬ್ಯಾಂಕ್ ಅಂತ ಒಪ್ಪಿಗೆ ನೀಡಿದೆ. ಕೆಲವು ಕಾನೂನಾತ್ಮಕ ವಿಷಯಗಳಿವೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಾನು ಎರಡು ಬಾರಿ ಸಭೆ ಮಾಡಿದ್ದೇನೆ. ಮೂರು ನಾಲ್ಕು ತಿಂಗಳಲ್ಲಿ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತರಬೇಕು ಎನ್ನುವುದು ನನ್ನ ಪ್ರಯತ್ನವಾಗಿದೆ. ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್‌ಗೆ ಅನುಮತಿಸಲು ಧಾರವಾಡ ಡಿಸಿಸಿ ಬ್ಯಾಂಕ್‌ನಿಂದ ಒಪ್ಪಿಗೆ ಪಡೆಯಬೇಕು. ನಬಾರ್ಡ್ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೈತರಿಗೆ ಆದ್ಯತೆ ನೀಡಿ: ರಾಜ್ಯ ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ನೀಡುತ್ತಿವೆ. ಆದರೆ, ಎಲ್ಲ ರೈತರೂ ಅಲ್ಲಿ ಬೆಳೆಸಾಲ ಪಡೆಯಲು ಆಗದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿ, ಅವರಿಗೆ ಪೋತ್ಸಾಹ ನೀಡಬೇಕು. ಕೃಷಿ ವಲಯದಲ್ಲಿ ಶೇ.1ರಷ್ಟು ಅಭಿವೃದ್ಧಿಯಾದರೆ, ಉತ್ಪಾದನಾ ವಲಯದಲ್ಲಿ ಶೇ.4ರಷ್ಟು ಅಭಿವೃದ್ಧಿಯಾಗುತ್ತದೆ. ಸೇವಾ ವಲಯದಲ್ಲಿ ಶೇ.10 ರಷ್ಟು ಅಭಿವೃದ್ಧಿಯಾಗುತ್ತದೆ. ಕೃಷಿ ವಲಯ ಅತ್ಯಂತ ಮಹತ್ವದ್ದಾಗಿದೆ. ರೈತ ಕೇವಲ ಉತ್ಪಾದಕ ಅಷ್ಟೇ ಅಲ್ಲ ಆತ ಗ್ರಾಹಕನೂ ಆಗಿದ್ದಾನೆ. ರೈತನ ಕೊಳ್ಳುವ ಶಕ್ತಿ ಹೆಚ್ಚಬೇಕು. ಸರ್ಕಾರದ ದೃಷ್ಟಿಯಿಂದ ರೈತರು, ದಲಿತರು, ಹಿಂದುಳಿದವರು ಆದ್ಯತೆಯ ವಲಯವಾಗಿದ್ದಾರೆ. ಅವರಿಗೆ ಬ್ಯಾಂಕ್‌ಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.ಕೇಂದ್ರದ ಯೋಜನೆಗಳನ್ನು ಹೆಚ್ಚಿಗೆ ಜನರಿಗೆ ತಲುಪಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಬ್ಯಾಂಕ್‌ಗಳು ಎಷ್ಟು ಸ್ವಸಹಾಯ ಗುಂಪುಗಳನ್ನು ಗುರುತಿಸಿ ಸಾಲ ನೀಡಿವೆ. ಸಣ್ಣ ಕೈಗಾರಿಕೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕುವಾರು ಸಾಧನೆಯಲ್ಲಿ ರಟ್ಟಿಹಳ್ಳಿ ಪ್ರಥಮ ಸ್ಥಾನದಲ್ಲಿದ್ದರೆ, ಹಿರೇಕೆರೂರು ದ್ವಿತೀಯ ಸ್ಥಾನದಲ್ಲಿದೆ. ಹಾಗೆ ಇನ್ನುಳಿದ ತಾಲ್ಲೂಕುಗಳು ಹಾನಗಲ್, ಬ್ಯಾಡಗಿ, ಹಾವೇರಿ, ಸವಣೂರು, ರಾಣಿಬೆನ್ನೂರು ಹಾಗೂ ಶಿಗ್ಗಾಂವ ಕ್ರಮವಾಗಿ ನಂತರದ ಸ್ಥಾನಗಳಲ್ಲಿರುತ್ತವೆ ಎಂದು ಹೇಳಿದರು.