ರಾಣಿಬೆನ್ನೂರು: ಬಿಜೆಪಿಯವರು ಇತಿಹಾಸದಿಂದ ಮಹಾತ್ಮರ ಹೆಸರನ್ನ ಅಳಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ‍್ಯ ವೇಳೆ ಮಹಾತ್ಮ ಗಾಂಧಿಯವರ ಪಾತ್ರ ಏನಿಲ್ಲ ಅಂತಿದ್ದಾರೆ. ಮನರೇಗಾದಲ್ಲಿ ಗಾಂಧೀಜಿಯವರ ಹೆಸರು ತೆಗೆದಿದ್ದಾರೆ. ನಾವು ಗಟ್ಟಿಯಾಗಿ ನಿಲ್ಲದೇ ಇದ್ದರೆ ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಅಂತ ಹೇಳಿ ಅಂಬೇಡ್ಕರ್ ಅವರ ಹೆಸರನ್ನು ಇತಿಹಾಸದಿಂದ ಅಳಿಸೋ ಪ್ರಯತ್ನ ಆಗುತ್ತೆ. ಇತಿಹಾಸದಿಂದ ಮಹಾತ್ಮರ ಹೆಸರು ಅಳಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಅಧಿಕಾರಿಗಳ ಲೋಪದೋಷವಿದೆ, ಅನ್ನೋದಕ್ಕೆ ಸಸ್ಪೆಂಡ್ ಅಗಿದೆ. ಮೇಲ್ನೋಟಕ್ಕೆ ಎಸ್ಪಿಯವರ ಲೋಪದೋಷ ಕಂಡುಬಂದಿದೆ. ಸಂಪೂರ್ಣವಾಗಿ ತನಿಖೆ ಬಳಿಕ ಸತ್ಯಾಂಶ ಹೊರಬರುತ್ತದೆ. ಅದರಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾತ್ರ ಏನಿದೆ ಎಂಬುದು ಗೊತ್ತಾಗುತ್ತದೆ. ಗಲಾಟೆ ಆಗದಂತೆ ತಡೆಯುವ ಅವಕಾಶಗಳಿದ್ದರೂ ಕೆಲವು ಅಧಿಕಾರಿಗಳ ಲೋಪದೋಷದಿಂದ ಗಲಾಟೆ ಆಗಿದೆ. ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಆಗ್ತಿರಲಿಲ್ಲ. ಅದು ವೈಯಕ್ತಿಕ ಜಗಳ. ಅದೇನೂ ಪೂರ್ವನಿಯೋಜಿತವಾಗಿ ನಡೆದ ಜಗಳವಲ್ಲ. ರಾಜ್ಯದಲ್ಲಿ ಇಂತಹ ಘಟನೆಗಳು ಆಗಬಾರದು. ಕಠಿಣ ಕ್ರಮ ಕೈಗೊಳ್ಳೋದು ನಮ್ಮ ಕರ್ತವ್ಯವಾಗಿದೆ. ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಏನೂ ಗೊತ್ತಿಲ್ಲ. ಸಂಕ್ರಾಂತಿ ಬಳಿಕ ಏನಾಗುತ್ತೋ ಕಾದು ನೋಡೋಣ ಎಂದರು.