ಸಮಸ್ಯೆಗಳ ನಿವಾರಣೆಗೆ ವಿವಿಧ ಹಂತಗಳಲ್ಲಿ ಶ್ರಮ: ಶಾಸಕ ಭರವಸೆ

KannadaprabhaNewsNetwork | Published : Jul 13, 2024 1:37 AM

ಸಾರಾಂಶ

ಶುಕ್ರವಾರ ಸೋಮವಾರಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕಳೆದ 25 ವರ್ಷಗಳಿಂದ ಮಡಿಕೇರಿ ಕ್ಷೇತ್ರದಲ್ಲಿ ತಾಂಡವವಾಡುತ್ತಿದ್ದ ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ಹಂತ ಹಂತವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕಳೆದ 25 ವರ್ಷಗಳಿಂದ ಮಡಿಕೇರಿ ಕ್ಷೇತ್ರದಲ್ಲಿ ತಾಂಡವವಾಡುತ್ತಿದ್ದ ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ಹಂತ ಹಂತವಾಗಿ ಶ್ರಮಿಸುವುದಾಗಿ ಶಾಸಕ ಡಾ. ಮಂತರ್‌ ಗೌಡ ಭರವಸೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಾಗಲೇ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದಲ್ಲಿ ಹಣ ಇಲ್ಲ, ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂಬ ವಿರೋಧ ಪಕ್ಷದವರ ಹೇಳಿಕೆಗೆ ಕೆಲಸ ಮಾಡುವ ಮೂಲಕ ಸರ್ಕಾರ ಕ್ಷೇತ್ರಕ್ಕೆ ಹಣ ಬರುತ್ತಿರುವುದನ್ನು ತೋರಿಸಬೇಕಿದೆ. ಯಾರೂ ಧೃತಿಗೆಡುವುದು ಬೇಡ ಎಂದು ಪದಾಧಿಕಾರಿಗಳಿಗೆ ತಿಳಿಸಿದರು.

ಕ್ಷೇತ್ರದಲ್ಲಿ ಎಂಎಲ್‍ಎ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡುವ ಮೂಲಕ ನನ್ನ ಗೆಲವಿಗೆ ಕಾರಣಕರ್ತರಾಗಿದ್ದೀರಿ. ಅದೇ ರೀತಿಯಲ್ಲಿ ಮುಂದಿನ ಒಂದೆರಡು ತಿಂಗಳಿನಲ್ಲಿ ನಡೆಯುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ. ಇಂದಿನಿಂದಲೇ ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಪಕ್ಷ ಸಂಘಟಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿ 25 ಕ್ಷೇತ್ರಗಳಿಗೆ ಸೀಮಿತ ಮಾಡಿದ್ದ ಕ್ಷೇತ್ರಗಳನ್ನು ಮತ್ತೊಮೆ 29 ಕ್ಷೇತ್ರಗಳನ್ನಾಗಿ ಮಾಡುವ ಮೂಲಕ ಹಿಂದಿನಂತೆಯೇ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ ಎಂದರು.

ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕೀಯ ಬಿಟ್ಟು, ಮತದಾರರ ವಿಶ್ವಾಸವನ್ನು ಗಳಿಸುವ ಮೂಲಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರರಿಗೆ ತಿಳಿ ಹೇಳಬೇಕೆಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಇಬ್ಬರೂ ಶಾಸಕರು ಅಭಿವೃದ್ಧಿಗಾಗಿ ರು.150 -200 ಕೋಟಿ ಅನುದಾನ ತರುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಸರ್ಕಾರ ವಿವಿಧ ಸಂಸ್ಥೆಗಳಲ್ಲಿ ನಾಮ ನಿರ್ದೇಶನ ಮಾಡಿದ್ದು, ಅವರು ಸಾರ್ವಜನಿಕರ ಕೆಲಸವನ್ನು ಮುಂದೆ ನಿಂತು ಮಾಡಬೇಕು. ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕೆಲಸ ಮಾಡಿದಲ್ಲಿ ಮಾತ್ರ ಮುಂದೆ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಗಳಿಸಲು ಸಾಧ್ಯ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್. ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಈ. ಜಯೇಂದ್ರ, ಡಿಸಿಸಿ ಸದಸ್ಯ ಜನಾರ್ದನ್, ಆರೋಗ್ಯ ಸಮಿತಿ ಸದಸ್ಯ ಡಾ. ಉದಯಕುಮಾರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕಾಂತರಾಜ್, ಕೆಡಿಪಿ ಸದಸ್ಯ ಎಚ್.ಆರ್. ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಇದ್ದರು.

Share this article