ಹರಿಹರ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅರ್ಜಿ ಸಲ್ಲಿಸಿದಲ್ಲಿ, ಪ್ರಧಾನಿ ಮೋದಿ ಅವರಿಂದ ಮಂಜೂರು ಮಾಡಿಸಿ ಕೊಡುವುದಾಗಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಈ ಹಿಂದೆ ಮೆಡಿಕಲ್ ಕಾಲೇಜು ಸ್ಥಾಪನೆಗೆ 20 ಎಕರೆ ಜಮೀನು ಕಡ್ಡಾಯವಾಗಿತ್ತು. ಆದರೆ, ಈಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಗರ ಪ್ರದೇಶದಲ್ಲಿ 5 ಎಕರೆ, ಗ್ರಾಮೀಣ ಪ್ರದೇಶದಲ್ಲಿ 10 ಎಕರೆ ಜಾಗವಿದ್ದರೆ ಸಾಕು, ಕಾಲೇಜು ಮಂಜೂರು ಮಾಡುತ್ತಿದೆ. ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಮೀಸಲಾತಿ ಅಡಿ ವೈದ್ಯಕೀಯ ವೃತ್ತಿಗೆ ಬರುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರವಿ ಡಿ.ಚನ್ನಣ್ಣವರ್ ಅವರ ಮಾತಿಗೂ ಪ್ರತಿಕ್ರಿಯೆ ನೀಡಿದ ಸೋಮಣ್ಣ ಅವರು, ನಮ್ಮ ಸರ್ಕಾರ ಇದ್ದಾಗ ರವಿ ಡಿ. ಚೆನ್ನಣ್ಣನವರ್ ಅವರನ್ನು ಚೆನ್ನಾಗಿಯೇ ನೋಡಿಕೊಳ್ಳಲಾಗಿತ್ತು. ಈಗಿನ ಸರ್ಕಾರ ಅವರ ಸೇವೆ ಬಳಸಿಕೊಳ್ಳುತ್ತಿಲ್ಲ. ಅರ್ಹತೆ ಇದ್ದವರಿಗೆ ಆದ್ಯತೆ ನೀಡಬೇಕು. ಒಂದುವೇಳೆ ರವಿ ಡಿ. ಚೆನ್ನಣ್ಣನವರ್ ಭಾರತ ಸರ್ಕಾರದ ಸೇವೆಗೆ ಬರುವುದಾದರೆ ಅವರಿಗೆ ಕೈ ತುಂಬಾ ಕೆಲಸ ಕೊಡ್ತೀನಿ ಎಂದರು. ಈ ಸಂದರ್ಭ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮತ್ತಿತರಿದ್ದರು.- - - (ವಿ.ಸೋಮಣ್ಣ)