ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಹಾದಿಯಲ್ಲಿ ದೃಢವಾದ ಹೆಜ್ಜೆ ಇಟ್ಟಿದೆ. ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರೋತ್ಸವ ದಿನದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರವು ಒಟ್ಟು ₹215 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, ಶೀಘ್ರ ಕಾರ್ಯಾದೇಶ ನೀಡಲಾಗುವುದು ಎಂದರು.ಪ್ರಸಕ್ತ ಹಂಗಾಮಿನಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿರುವುದರಿಂದ ಮುಂಗಾರು ಬಿತ್ತನೆ ಪ್ರಾರಂಭವಾಗಲು ಅನುಕೂಲವಾಯಿತು. ಜಿಲ್ಲೆಗೆ ಒಟ್ಟು 7.32 ಲಕ್ಷ ಹೆಕ್ಟೇರ್ ಬಿತ್ತನೆಗುರಿ ಹೊಂದಲಾಗಿದ್ದು, ಎಲ್ಲಾ ಬೆಳೆಗಳು ಸೇರಿದಂತೆ ಇಲ್ಲಿಯವರೆಗೆ ಸುಮಾರು 7.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ. 99 ರಷ್ಟು ಬಿತ್ತನೆಯಾಗಿದೆ ಎಂದು ತಿಳಿಸಿದರು.ಹುಕ್ಕೇರಿ ತಾಲೂಕಿನ ಗುಡಗುದ್ದಿ, ಸವದತ್ತಿ ತಾಲೂಕಿನ ಹಿರೇಬೂದನೂರ, ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಅಥಣಿ ತಾಲೂಕಿನ ಕೊಟ್ಟಲಗಿ ಒಟ್ಟು ೪ ಹೊಸ ಪಶುವೈದ್ಯಕೀಯ ಸಂಸ್ಥೆಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ವಿಭಾಗದಿಂದ ₹33,323 ಲಕ್ಷ ವೆಚ್ಚದಲ್ಲಿ 44 ಆರೋಗ್ಯ ಇಲಾಖೆಯ ವಿವಿಧ ಹಂತದ ಆಸ್ಪತ್ರೆಗಳ ಕಟ್ಟಡ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಂಡಿದ್ದು, 13 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ 4 ಬಹುಗ್ರಾಮ ಯೋಜನೆಗಳನ್ನು ಯೋಜಿಸಲಾಗಿದೆ. ಒಟ್ಟಾರೆ ನಾಲ್ಕು ಬಹುಗ್ರಾಮ ಯೋಜನೆಗಳ ಅನುಷ್ಠಾನಕ್ಕೆ ₹1444 ಕೋಟಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ನಾಲ್ಕು ಬಹುಗ್ರಾಮ ಯೋಜನೆಗಳ ಅನುಷ್ಠಾನದಿಂದ ಬೆಳಗಾವಿ ವಿಭಾಗ ವ್ಯಾಪ್ತಿಯ ತಾಲೂಕಿನ ಗ್ರಾಮಗಳು ಸಮಗ್ರವಾಗಿ ಕುಡಿಯುವ ನೀರಿನ ಸೌಲಭ್ಯ ಪಡೆಯುತ್ತವೆ ಎಂದ ಅವರು, ಚಿಕ್ಕೋಡಿ ವಿಭಾಗಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 38 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು 717 ಜನವಸತಿಗಳಿಗೆ ನದಿ ಜಲ-ಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.ಬೆಳಗಾವಿ ಜಿಲ್ಲಾ ನೂತನ ಜಿಲ್ಲಾಡಳಿತ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ ₹100 ಕೋಟಿ ಅನುದಾನ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಸವದತ್ತಿ, ಬೆಳಗಾವಿ, ಗೋಕಾಕ ಹಾಗೂ ಬೈಲಹೊಂಗಲಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ₹13 ಕೋಟಿಗಳನ್ನು ಮತ್ತು ಬೈಲಹೊಂಗಲದಲ್ಲಿ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಈಜುಗೋಳ ನಿರ್ಮಾಣಕ್ಕಾಗಿ ₹ 5.50 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಜಿಲ್ಲೆಯಾದ್ಯಂತ ನ್ಯಾಯಾಲಯ ಕಟ್ಟಡ ಮತ್ತು ಬಾರ್ ಅಸೋಸಿಯೇಷನ್ ಕಟ್ಟಡ ನಿರ್ಮಾಣಕ್ಕಾಗಿ ₹30 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 16 ಪ್ಯಾಕೇಜ್ ಕಾಮಗಾರಿಗಳು ₹536 ಕೋಟಿ ಅನುದಾನದಡಿ ಅನುಮೋದನೆಯಾಗಿದ್ದು, ಅವುಗಳ ಒಟ್ಟು ಉದ್ದ 186.76 ಕಿಮೀಯಾಗಿದೆ. ಎಲ್ಲ ಪ್ಯಾಕೇಜ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಳಗಾವಿ ತಾಲೂಕಿನ ಎನ್.ಎಚ್-೪ಎ (ದೇಸೂರ) ದಿಂದ ಹುದಲಿವರೆಗಿನ ಕೂಡು ರಸ್ತೆಯಲ್ಲಿ ಹುದಲಿ ಗ್ರಾಮದ ಹತ್ತಿರ ₹ 35 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯು ಮಂಜೂರಾಗಿದೆ ಎಂದರು.ಪಥ ಸಂಚಲನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ೭೯ನೇ ಸ್ವಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪೊಲಿಸ್, ಅಗ್ನಿಶಾಮಕ ಸೇರಿದಂತೆ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿಶೇಷ ಸನ್ಮಾನ:
79ನೇ ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಕಾರ್ಯಕ್ರಮಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ತುಕಾರಾಮ ಮಾರುತಿ ನಾಯಿಕ, ಲಕ್ಷ್ಮೀ ಲೋಕೂರ, ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ಸುಶಿಲಾದೇವಿ ರಾಮನ್ನವರ, ಫಜಲ್, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ವಿ ಹೇಮಂತ ಪಾಟೀಲ, ರೂಪಾ ಚನ್ನಗೌಡ ಪಾಟೀಲ, ಕ್ರೀಡಾ ಕ್ಷೇತ್ರದಲ್ಲಿ ಸಾಕ್ಷಿ ಮಲ್ಲು ಪಾಟೀಲ, ಚಿನ್ಮಯ ಕ್ಯಾಮಣ್ಣವರ, ಸೊನಮ ಮಲ್ಲು ಪಾಟೀಲ, ಅಮೋಘ ತಂಗಡಿ, ರಮ್ಯಾ ಲಮಾಣಿ, ಪ್ರಜ್ವಲ ಹನುಮನಟ್ಟಿ, ಸೌಂದರ್ಯ ದಂಡಿನವರ, ಸುಕೃತ ಯಳಹಟ್ಟಿ, ಸುದರ್ಶನ ಗುರವ, ವಿನೋದ ಮೇತ್ರಿ, ತನಿಷ್ಕಾ ಕಾಲಬೈರವ, ಬಿ.ವಿ.ಕಿರಣ, ಸರಣ್ಯಾ ಕುಂಬಾರ, ಸ್ವಾತಿ ಪಾಟೀಲ, ಸಂಜನಾ ಶೇಟ್, ತೀರ್ಥ ಪಾಚ್ಚಾಪೂರ, ಸಾಯಿಶ್ವರಿ ಜೆ.ಕೆ, ಗಂಗಯ್ಯ ಚಿಕ್ಕಮಠ, ಮಲ್ಲಿಕಾರ್ಜುನ ಬಬಲಿ, ಸುಧಾಕರ ಚಳಕೆ, ತನೋಜ ಸಿಂಗ್, ಗಾಯತ್ರಿ ಬೆಳಗಾವಿ, ಸುರೇಶ ಲಂಗೋಟಿ, ಯುವರಾಜ ಮೋಹನೆಕರ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಶಾಸಕ ಆಸೀಫ್(ರಾಜು) ಸೇಠ, ಮಹಾಪೌರ ಮಂಗೇಶ ಪವಾರ, ಉಪ ಮಹಾಪೌರೆ ವಾಣಿ ಜೋಶಿ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ನಗರ ಸೇವಕರು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಭೋರಸೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾನರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ್, ತಹಶೀಲ್ದಾರ ಬಸವರಾಜ ನಾಗರಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮ ದಿನಾಚರಣೆ ಅಂಗವಾಗಿ ನ್ಯಾಯಾಲಯ ಆವರಣದ ಸಂಗೊಳ್ಳಿ ರಾಯಣ್ಣ ಹಾಗೂ ಚನ್ನಮ್ಮ ವೃತ್ತದ ಕಿತೂರು ರಾಣಿ ಚನ್ನಮ್ಮ ಅವರುಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.