ಭೂಮಿ ಫಲವತ್ತತೆ ಕಾಪಾಡಿಕೊಳ್ಳುವ ಪ್ರಯತ್ನಗಳಾಗಬೇಕು

KannadaprabhaNewsNetwork | Published : Mar 6, 2025 12:33 AM

ಸಾರಾಂಶ

ಮುಂಗಾರು ಮತ್ತು ಹಿಂಗಾರು ಮಳೆಗಳು ಕಾಲಕ್ಕೆ ತಕ್ಕನಾಗಿ ಆಗಮಿಸಿದಿದ್ದರೆ, ನರ್ಸರಿಗಳ ಮೂಲಕ ಪೋಷಿಸಲಾದ ಗಿಡಗಳು ಇನ್ನಿತರೇ ಉಪ ಕೃಷಿ ಬೆಳೆಗಳಿಗೆ ಸಹಾಯವಾಗಲಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ವಿವಿಧ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸುವ ಜೋತೆಯಲ್ಲಿ ಆರೋಗ್ಯಕರ ಪ್ರಕೃತ್ತಿದತ್ತವಾದ ಕೀಟನಾಶಕಗಳನ್ನು ಬಳಸಲು ಮುಂದಾಗಬೇಕು. ಹುಳುಹುಪ್ಪಟೆ, ಕೀಟಗಳನ್ನು ನಾಶಪಡಿಸಲು ಕೀಟನಾಶಕಗಳನ್ನು ಉಪಯೋಗಿಸುವ ಜೊತೆಯಲ್ಲಿ ಭೂಮಿ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆಯೂ ಕೃಷಿಕರು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮುಂಗಾರು ಮತ್ತು ಹಿಂಗಾರು ಮಳೆಗಳು ಕಾಲಕ್ಕೆ ತಕ್ಕನಾಗಿ ಆಗಮಿಸಿದಿದ್ದರೆ, ನರ್ಸರಿಗಳ ಮೂಲಕ ಪೋಷಿಸಲಾದ ಗಿಡಗಳು ಇನ್ನಿತರೇ ಉಪ ಕೃಷಿ ಬೆಳೆಗಳಿಗೆ ಸಹಾಯವಾಗಲಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಮುದ್ದನಹಳ್ಳಿ ಗ್ರಾಮದ ಕೃಷಿ ಸಾಧಕರಾದ ಉಮೇಶ್ ನಾಯ್ಕ್ ಅವರು ಹಾಸನ ರಸ್ತೆಯ ಬೋರನ ಕೊಪ್ಪಲು ಗೇಟ್ ಹತ್ತಿರ ಅಭಿವೃದ್ಧಿಪಡಿಸಿರುವ ಶ್ರೀ ಸಿದ್ದೇಶ್ವರ ಹೈಟೆಕ್ ನರ್ಸರಿ ಘಟಕ ಉದ್ಘಾಟಿಸಿ ಮಾತನಾಡಿದರು. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಪ್ರಸ್ತುತ ದಿನಗಳಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಅಂತಹ ಅವಿಷ್ಕಾರಗಳಲ್ಲಿ ಗಿಡಗಳನ್ನು ಪೋಷಿಸಿ ಬೆಳೆಸುವ ನರ್ಸರಿ ಘಟಕಗಳು ಕೂಡ ಒಂದಾಗಿದೆ. ವಿವಿಧ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸುವ ಜೊತೆಯಲ್ಲಿ ಆರೋಗ್ಯಕರ ಪ್ರಕೃತ್ತಿದತ್ತವಾದ ಕೀಟನಾಶಕಗಳನ್ನು ಬಳಸಲು ಮುಂದಾಗಬೇಕು. ಹುಳುಹುಪ್ಪಟೆ, ಕೀಟಗಳನ್ನು ನಾಶಪಡಿಸಲು ಕೀಟನಾಶಕಗಳನ್ನು ಉಪಯೋಗಿಸುವ ಜೊತೆಯಲ್ಲಿ ಭೂಮಿ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆಯೂ ಕೃಷಿಕರು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು. ನರ್ಸರಿ ಘಟಕಗಳು ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಸ್ಥಳಿಯವಾಗಿ ನಮಗೆ ಬೇಕಾದ ಹಣ್ಣು , ಹಂಪಲು, ತರಕಾರಿ ಸೇರಿದಂತೆ ವಿವಿಧ ಬೆಳೆಗಳ ಗಿಡಗಳು ಸಿಗಲು ಸಾಧ್ಯವಾಗುತ್ತದೆ. ಪ್ರಾರಂಭದಿಂದಲೂ ಘಟಕದ ಮಾಲೀಕರು ಶ್ರಮ ಹಾಕಿದಲ್ಲಿ ಉತ್ತಮ ಸಾಧನೆ ಸಾಧ್ಯವಾಗುತ್ತದೆ. ಇಂದು ಪ್ರಾರಂಭಗೊಂಡು ಉದ್ಘಾಟನೆ ಆಗಿರುವ ನರ್ಸರಿ ಹೆಚ್ಚು ಅಭಿವೃದ್ಧಿಯಾಗಿ ಮತ್ತಷ್ಟು ವಿಸ್ತಾರವಾಗಲಿ. ಸ್ಥಳೀಯರಿಗೆ ಅವಶ್ಯಕತೆ ಇರುವ ಕೃಷಿ ಸಂಬಂಧ ಗಿಡಗಳನ್ನು ಸರಬರಾಜು ಮಾಡಲಿ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಮಳೆ ಆಧಾರಿತ ಕೃಷಿ ಚಟುವಟಿಕೆಗಳ ಪ್ರದೇಶ ನಮ್ಮದಾಗಿದೆ. ಈ ಪ್ರದೇಶಕ್ಕೆ ಭಗೀರಥರಾಗಿರುವ ಶಾಸಕ ಕೆ.ಎಂ ಶಿವಲಿಂಗೇಗೌಡರ ಪ್ರಯತ್ನದಿಂದ ಎತ್ತಿನಹೊಳೆಯಂತಹ ಯೋಜನೆಗಳಿಂದ ಕೆರೆ ಕಟ್ಟೆಗಳು ನೀರಿನಿಂದ ತುಂಬುವ ದಿನಗಳು ದೂರವಿಲ್ಲ. ಆ ದಿನಗಳು ಶೀಘ್ರದಲ್ಲೇ ಬರಲಿದ್ದು, ನೀರಾವರಿ ಪ್ರದೇಶವಾಗಿ ರೂಪುಗೊಳ್ಳುವುದರ ಮೂಲಕ ವರ್ಷಪೂರ್ತಿ ಕೃಷಿ ಚಟುಚಟಿಕೆ ಮತ್ತು ಉತ್ಪನ್ನಗಳಿಗೂ ಶಕ್ತಿ ಸಿಗಲಿದೆ. ನರ್ಸರಿ ಘಟಕ ಪೋಷಣೆ ಮಕ್ಕಳನ್ನು ಪೋಷಿಸುವಂತೆ ಜಾಗ್ರತೆಯಾಗಿ ಪೋಷಿಸಬೇಕು. ಅಂತಹ ಪ್ರಯತ್ನಗಳ ಮೂಲಕ ಸಾಧಕರಾದ ಉಮೇಶ್ ನಾಯಕ್ ಪ್ರಯತ್ನಪಟ್ಟಿದ್ದಾರೆ, ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆ.ಎಂ ಶಿವಲಿಂಗೇಗೌಡರ 17 ವರ್ಷಗಳ ಅಭಿವೃದ್ಧಿ ಕೆಲಸಗಳನ್ನು ಅಂಕಿ ಅಂಶಗಳಲ್ಲಿ ನಮೂದಾಗಿರುವ ವಿಶೇಷ ಸ್ಮರಣಾ ಫಲಕವನ್ನು ನೀಡಲಾಯಿತು. ಮುದ್ದನಹಳ್ಳಿ ಗ್ರಾಪಂ ಮಾಜಿ ಸದಸ್ಯ ರವಿ ನಾಯ್ಕ್, ಸಂಪತ್ ನಾಯ್ಕ್, ಮೋಹನ್ ನಾಯ್ಕ್, ಗ್ರಾಮ ಪಂಚಾಯಿತಿ ಸದಸ್ಯರು ಸುರೇಶ್ ನಾಯ್ಕ್, ಚಂದ್ರ ನಾಯ್ಕ್, ಸಲ್ಮಾನ್,ನಾಗೇನಹಳ್ಳಿ ಗ್ರಾ. ಪಂ ಸದಸ್ಯ ಪ್ರಭ ನಾಯ್ಕ್, ರೈತ ಸಂಘದ ಮುಖಂಡರಾದ ಮಹಾಲಿಂಗಪ್ಪ,ಶಿವಲಿಂಗಪ್ಪ, ಮುದುಡಿ ಗ್ರಾ.ಪಂ ಸದಸ್ಯ ಮೋಹನ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Share this article