ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ದೇಸಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಕೆಲಸವಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ದೇಸಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಕೆಲಸವಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪೂರ ಹೇಳಿದರು.ಪಟ್ಟಣದಲ್ಲಿ ಶನಿವಾರ ಜಯ ಕರ್ನಾಟಕ ಸಂಘಟನೆಯಿಂದ ಐತಿಹಾಸಿಕ ಶ್ರೀ ಮಲ್ಲಯ್ಯ ರಾವುತರಾಯ ಜಾತ್ರಾ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಬಾರ ಎತ್ತುವ ಮತ್ತು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಯುವ ಪ್ರತಿಭೆಗಳಿದ್ದು, ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶಗೌಡ ದಾಶ್ಯಾಳ ಮಾತನಾಡಿ, ಕನ್ನಡ ನಾಡು-ನುಡಿ ಹಾಗೂ ನೆಲ-ಜಲದ ಸಂರಕ್ಷಣೆಗೆ ಯುವಕರು ಸಂಘಟನೆಯೊಂದಿಗೆ ಕೈಜೋಡಿಸಬೇಕು. ಕನ್ನಡ ರಾಜ್ಯೋತ್ಸವದ ಮಹತ್ವ ಮತ್ತು ಸಂಘಟನೆಯ ವಿವಿಧ ಜನಪರ ಕಾರ್ಯಗಳ ಕುರಿತು ಮಾಹಿತಿ ನೀಡಿದರು.ಮುಖಂಡರಾದ ಶಂಕರಗೌಡ ಪಾಟೀಲ ಯರನಾಳ ಹಾಗೂ ಮಲಕಪ್ಪ ಬಾಗೇವಾಡಿ ಮಾತನಾಡಿ, ಪ್ರತಿಭೆ ಹೊಂದಿರುವವರಿಗೆ ಸೂಕ್ತ ವೇದಿಕೆ ಕಲ್ಪಿಸಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಲು ಸಾಧ್ಯ. ಗ್ರಾಮೀಣ ಪ್ರತಿಭೆಗಳು ದೇಶಾದ್ಯಂತ ಗುರುತಿಸಿಕೊಳ್ಳಬೇಕು. ಸಂಘಟನೆಯ ಮೂಲಕ ಇನ್ನಷ್ಟು ಜನಪರ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.ಪರದೇಶಿ ಮಠದ ಶಿವಯೋಗಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಆಧುನಿಕ ಯುಗದಲ್ಲಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಿ ದೇಶೀಯ ಸಂಸ್ಕೃತಿ ಮತ್ತು ಪರಂಪರೆ ಮರೆಯುತ್ತಿರುವುದು ವಿದನೀಯ. ಯುವಕರು ನಾಡಿನ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು ಎಂದರು.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ಮಾತನಾಡಿ, ಯುವಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ದೈಹಿಕ ಸದೃಢತೆ ಹಾಗೂ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.ಡಾ.ಅಂಬೇಡ್ಕರ್ ವೃತ್ತದಿಂದ ಕನ್ನಡಾಂಬೆಯ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ವೇದಿಕೆಗೆ ತರಲಾಯಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಹಸನ್ ನದಾಫರನ್ನು ಸನ್ಮಾನಿಸಲಾಯಿತು. ವೈದ್ಯರಾದ ಡಾ.ಸತೀಶ ನಾಡಗೌಡ, ಪ್ರಮುಖರಾದ ಚನ್ನವೀರ ಕುದರಿ, ಪ್ರಕಾಶ ಗುಡಿಮನಿ, ವಿನೋದಗೌಡ ಪಾಟೀಲ, ಕಾನಿಪ ತಾಲೂಕು ಅಧ್ಯಕ್ಷ ಸಂಗಮೇಶ ಉತ್ನಾಳ, ಶ್ರೀಧರ ನಾಡಗೌಡ, ಹುಸೇನ ಗೌಂಡಿ, ಸೇರಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರುಣ ಕೋರವಾರ, ಸಿದ್ದು ಮೇಲಿನಮನಿ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.