ಕನ್ನಡಪ್ರಭ ವಾರ್ತೆ ಶನಿವಾರಸಂತೆ
ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದು ಭಾರತಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಹರೀಶ್ ಅಭಿಪ್ರಾಯಪಟ್ಟರು.ಅವರು ಶುಕ್ರವಾರ ಭಾರತೀಯ ವಿದ್ಯಾಸಂಸ್ಥೆ ಮತ್ತು ಲಯನ್ಸ್ ಸಂಸ್ಥೆ ಆಶ್ರಯದಲ್ಲಿ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಕನ್ನಡ ಭಾಷೆಯ ನೆಲದಲ್ಲಿ ಹುಟ್ಟಿ ಬೆಳೆದು ಪ್ರಪಂಚದಲ್ಲಿ ಅತ್ಯಂತ ಸಾಧನೆ ಮಾಡಿರುವವರ ಪೈಕಿಯಲ್ಲಿ ಕನ್ನಡಿಗರೇ ಹೆಚ್ಚು. ಕನ್ನಡವನ್ನು ನಾವು ಬೆಳೆಸುವ ದೃಷ್ಟಿಯಿಂದ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬಾರದು. ಕರ್ನಾಟಕ ರಾಜ್ಯದಲ್ಲಿ ಸಮೃದ್ಧಿ ಜೀವನವನ್ನು ನಡೆಸಲು ಇಲ್ಲಿನ ನೆಲ ಜಲ, ಪರಿಸರ, ಭಾಷೆ, ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರವನ್ನು ನಾವು ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದೆ. ಇವುಗಳನ್ನು ನಾವು ಅಭಿವೃದ್ಧಿಪಡಿಸಿದರೆ ಮಾತ್ರ ಕರ್ನಾಟಕ ರಾಜ್ಯೋತ್ಸವ ಎಂಬ ಉತ್ಸಾಹವನ್ನು ಮತ್ತಷ್ಟು ವಿಜೃಂಬಣೆಯಿಂದ ಆಚರಣೆ ಮಾಡಬಹುದು. ಹಿಂದಿನ ಕಾಲದ ಸಾಹಿತಿಗಳು ಕನ್ನಡಕ್ಕೆ ನೀಡಿದ ಕೊಡುಗೆಗಳನ್ನು ಇಂದು ನಾವು ನೋಡಿ ಆನಂದಿಸುತ್ತೇವೆ. ಮುಂದಿನ ಪೀಳಿಗೆಗೆ ಆನಂದಿಸಲು ನಾವು ಇನ್ನಷ್ಟು ಕನ್ನಡದ ಸಾಹಿತ್ಯವನ್ನು ಬೆಳೆಸಿ ಎಂದರು.ಶನಿವಾರಸಂತೆ ಲಯನ್ಸ್ ಕಾವೇರಿ ಸಂಭ್ರಮ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಎನ್ ಬಿ ನಾಗಪ್ಪ ಮಾತನಾಡಿ, ಕನ್ನಡ ರಾಜ್ಯೋತ್ಸವದ ಈ ಕರ್ನಾಟಕ ಏಕೀಕರಣದ ಸಂಭ್ರಮದ ಆಚರಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಆಟೋ ಚಾಲಕರ ಪಾತ್ರ ಅಪಾರವಾಗಿದೆ. ಕರ್ನಾಟಕದ ಈ ಹುಟ್ಟುಹಬ್ಬ ಆಚರಣೆ ಮಾಡುವುದು ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರ ಕರ್ತವ್ಯ ಎಂದರು.
ಲಯನ್ಸ್ ಸಂಸ್ಥೆ ನಿರ್ದೇಶಕ ಕೇಶವ ಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಭಾರತೀ ಪ್ರೌಢಶಾಲೆಯ ಶಿಕ್ಷಕಿ ಭವಾನಿ ಮತ್ತು ವಿದ್ಯಾರ್ಥಿ ಉದಯ್ ಶಾಸ್ತ್ರಿ ದಿನದ ಮಹತ್ವದ ಬಗ್ಗೆ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ ಎಂ ಜಗನ್ ಪಾಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಬಿ ಜಿ ಪರಮೇಶ್, ಕಾರ್ಯದರ್ಶಿ ನಾರಾಯಣ ಸ್ವಾಮಿ, ಖಜಾಂಜಿ ಬಿ ಕೆ ಚಿಣ್ಣಪ್ಪ, ಪ್ರಮುಖರಾದ, ಕೆ ಎನ್ ಕಾರ್ಯಪ್ಪ, ಮಲ್ಲೇಶ ಆರ್ ಇ ಧರ್ಮಪ್ಪ, ಪ್ರಾಂಶುಪಾಲರಾದ ಅಶೋಕ್, ದಯಾನಂದ್, ಮುಖ್ಯ ಶಿಕ್ಷಕ ನರಸಿಂಹ ಮೂರ್ತಿ ಭಾಗವಹಿಸಿದ್ದರು.