ಕುವೆಂಪು ಕ್ರೀಡಾಂಗಣದಲ್ಲಿ ಎಂಕೆಸಿಪಿಎಂ ಪದವಿಪೂರ್ವ ಕಾಲೇಜು ನೇತೃತ್ವದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ
ಕುವೆಂಪು ಕ್ರೀಡಾಂಗಣವನ್ನು ಇನ್ನಷ್ಟು ಸುಸಜ್ಜಿತವಾಗಿ ಮಾಡಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಯತ್ನ ನಡೆಸುತ್ತೇನೆ ಎಂದು ಶಿವಮೊಗ್ಗದ ಭದ್ರಾ ಕಾಡಾ ಪ್ರಾಧೀಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಭರವಸೆ
ಸೋಮವಾರ ಪಟ್ಟಣದ ಕುವೆಂಪು ಕ್ರೀಡಾಂಗಣದಲ್ಲಿ ತಾಲೂಕು ಒಕ್ಕಲಿಗರ ಸಂಘದ ಎಂಕೆಸಿಪಿಎಂ ಪದವಿಪೂರ್ವ ಕಾಲೇಜು ಹಾಗೂ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ 2024-25 ನೇ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಜ್ಯೋತಿ ಬೆಳಗಿಸಿ, ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹಂತ, ಹಂತವಾಗಿ ಕ್ರೀಡಾಕೂಟಗಳು ನಡೆಯುತ್ತದೆ. ಕ್ರೀಡಾಕೂಟದಲ್ಲಿ ಸೋಲು, ಗೆಲುವಿಗಿಂತ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ಪರಿಶ್ರಮ ಪಟ್ಟರೆ ವಿದ್ಯಾರ್ಥಿಗಳು ಗುರಿ ಮುಟ್ಟಬಹುದು. ಪ್ರತಿಯೊಬ್ಬರಲ್ಲೂ ಒಂದೊಂದು ಸುಪ್ತ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು, ಪೋಷಕರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದರು.
ತಾಲೂಕು ಒಕ್ಕಲಿಗರ ಸಂಘದ ನಿಕಟಪೂರ್ವ ಅಧ್ಯಕ್ಷ ಡಿ.ಸಿ.ದಿವಾಕರ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಕ್ರೀಡೆಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಪೋಷಕರು,ಶಿಕ್ಷಕರು ಮಕ್ಕಳ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಭಾರತ ದೇಶದಲ್ಲಿ ನಿರೀಕ್ಷೆಯಷ್ಟು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಒಲಂಪಿಕ್ ನಲ್ಲಿ ಭಾರತ ದೇಶಕ್ಕೆ ಕೇವಲ 6 ಪದಕ ಬಂದಿದೆ ಎಂದರು.
ಅತಿಥಿಗಳಾಗಿ ತಾಲೂಕು ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಪಿ.ಕೆ.ಬಸವರಾಜ್, ಖಜಾಂಚಿ ಕಟಗಳಲೆ ಲೋಕೇಶ್, ನಿರ್ದೇಶಕರಾದ ಸದಾಶಿವ, ಎನ್.ಪಿ.ರವಿ, ಎಚ್.ಜಿ.ಶಿವಪ್ಪ, ಬಿ.ಟಿ.ರವಿ, ತೃಪ್ತಿ, ಬಿಳಾಲು ಮನೆ ಉಪೇಂದ್ರ, ಎಚ್.ಡಿ.ವಿನಯ, ಹಾತೂರು ಪ್ರಸನ್ನ, ಎಂಕೆಸಿಪಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮರಮೇಶ್, ಕೆಪಿಎಸ್ ನ ಪ್ರಾಂಶುಪಾಲರಾದ ಪ್ರಮೀಳ, ವಿವಿಧ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕ್ರೀಡಾ ಪಟು ಕು.ಸ್ಪೂರ್ತಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಟಗಳಲೆ ಲೋಕೇಶ್ ಕ್ರೀಡಾ ಜ್ಯೋತಿ ಸ್ವೀಕಾರ ಮಾಡಿದರು. ನಂತರ 7 ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಬಡ್ಡಿ, ವಾಲೀಬಾಲ್, ಖೋಖೋ, ಥ್ರೋಬಾಲ್ ಹಾಗೂ ಅಥ್ಲೆಟಿಕ್ಸ್ ನಲ್ಲಿ ಪಾಲ್ಗೊಂಡಿದ್ದರು. ಮಂಗಳವಾರವೂ ಕ್ರೀಡಾ ಕೂಟ ಮುಂದುವರಿಯಲಿದೆ.