ಹರಪನಹಳ್ಳಿಯಲ್ಲಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಅಧ್ಯಯನ ಟಿಪ್ಸ್‌ಬಿ. ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಎಸ್ಎಸ್ಎಲ್ಸಿ ಪರೀಕ್ಷೆಗಳು ಫೆ. 21ರಿಂದ ಆರಂಭಗೊಳ್ಳಲಿದೆ. ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯವರು ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಕಸರತ್ತು ನಡೆಸಿದ್ದಾರೆ.
ಕಳೆದ ಬಾರಿ ತಾಲೂಕಿಗೆ ಶೇ. 64.57ರಷ್ಟು ಫಲಿತಾಂಶ ಬಂದು ವಿಜಯನಗರ ಜಿಲ್ಲೆಗೆ ಹರಪನಹಳ್ಳಿ ತಾಲೂಕು ಮೂರನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಹೆಚ್ಚು ಫಲಿತಾಂಶ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಂತೆ ಕಾಣುವ ಇಲ್ಲಿಯ ಶಿಕ್ಷಣ ಇಲಾಖೆ ಅಧಿಕಾರಿಗಳು, ಹಲವು ತಿಂಗಳ ಹಿಂದೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಅವರು ತಮ್ಮ ಶಿಕ್ಷಕರ ಹಾಗೂ ಅಧಿಕಾರಿಗಳ ತಂಡದೊಂದಿಗೆ ಕಾರ್ಯೋನ್ಮುಖವಾಗಿದ್ದಾರೆ. ಆ ಪ್ರಕಾರ ಪ್ರತಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಅಧ್ಯಯನ ಟಿಪ್ಸ್ ನೀಡುವ ಜತೆಗೆ ಮುಖ್ಯ ಶಿಕ್ಷಕರಿಗೆ, ಶಿಕ್ಷಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.ಬೆಳಗ್ಗೆ ಬೇಗ ಎದ್ದು ಅಧ್ಯಯನದಲ್ಲಿ ತೊಡಗುವುದು, ಸಮಯ ವ್ಯರ್ಥ ಮಾಡಬಾರದು, ಎಲ್ಲ ವಿಷಯಗಳಿಗೂ ಆದ್ಯತೆ ನೀಡಬೇಕು, ಕ್ಲಿಷ್ಟ ಪರಿಕಲ್ಪನೆಗಳನ್ನು ಶಿಕ್ಷಕರ ಮಾರ್ಗದರ್ಶನದ ಮೂಲಕ ಸರಳ ಮಾಡಿಕೊಳ್ಳಬೇಕು, ಕಲಿಕಾ ಪರಿಕಲ್ಪನೆಗಳನ್ನು ಪುನರ್ ಮನನ ಮಾಡಿಕೊಳ್ಳುವುದು. 5 ನಿಮಿಷ ಓದು, 10 ನಿಮಿಷ ಬರಹ, 5 ನಿಮಿಷ ಪುನರ್ ಮನನ ಪದ್ಧತಿ ಅನುಸರಿಸಿ ಅಭ್ಯಾಸ ಮಾಡಲು, ಎಲ್ಲ ವರ್ಷಗಳ ಪ್ರಶ್ನೆ ಪತ್ರಿಕೆ ಬಿಡಿಸಿ, ಅಧ್ಯಯನ ನಿರಂತರವಾಗಿರಲಿ, ಯಾವುದೇ ಆತಂಕ, ಭಯ ಇಟ್ಟುಕೊಳ್ಳದೆ ಪರೀಕ್ಷೆ ಹಬ್ಬದಂತೆ ಆಚರಿಸಿ ಎಂಬ ಸಲಹೆಗಳನ್ನು ಪ್ರತಿ ಶಾಲೆಗೂ ತೆರಳಿ ತಿಳಿಸುವ ಕಾರ್ಯ ಭರದಿಂದ ಸಾಗಿದೆ.
ವಿಷಯವಾರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಬೇಕೆಂದು ಜೂಮ್ ಲಿಂಕ್ ಮೂಲಕ ಲೈವ್ ಆಗಿ ರಸಪ್ರಶ್ನೆ ಕಾರ್ಯಕ್ರಮದ ವಿನೂತನ ಪ್ರಯೋಗಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಆಶಾಕಿರಣ:
ಮಾ. 10ರಿಂದ 15ರ ವರೆಗೆ ಆಶಾಕಿರಣ ಹೆಸರಿನಲ್ಲಿ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳನ್ನು ವಿಷಯವಾರು ನೇಮಕ ಮಾಡಿ 13 ಪರೀಕ್ಷಾ ಕೇಂದ್ರಗಳಲ್ಲೂ ತರಗತಿ ನಡೆಸಿ ಕಲಿಕಾಂಶಗಳನ್ನು ಮನದಟ್ಟು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಹಿಂದೆ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಪಟ್ಟಿ ಮಾಡಿ ಅಲ್ಲಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಚನಾತ್ಮಕ ಮಾರ್ಗದರ್ಶನ ಮಾಡಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗಿದೆ.
ಕಳೆದ ವರ್ಷ ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಪ್ರಗತಿ ಪರಿಶೀಲನೆಗೆ ಬಂದ ಸಂದರ್ಭ ಡಿಡಿಪಿಐ ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಒಟ್ಟಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಬಿಇಒ ತಮ್ಮ ತಂಡದೊಂದಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಹಾಗಾಗಿ ಈ ಬಾರಿ ಫಲಿತಾಂಶ ಹೆಚ್ಚಾಗಬಹುದು ಎನ್ನುವ ಆಶಯ ತಾಲೂಕಿನ ಪ್ರಜ್ಞಾವಂತರದ್ದು.