ಸೋಮವಾರಪೇಟೆ: ಕೊಡಗಿನ ಜಮ್ಮಾ ಹಿಡುವಳಿದಾರರನ್ನು ದಶಕಗಳಿಂದ ಕಾಡುತ್ತಿದ್ದ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕವನ್ನು ಕಳೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಇತ್ತೀಚೆಗೆ ಶಾಸಕರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೊಡಗಿನ ಜಮ್ಮಾ-ಬಾಣೆ ಭೂಮಿ ವಿವಾದಗಳ ಪರಿಹಾರಕ್ಕಾಗಿ ಕರ್ನಾಟಕ ಭೂಕಂದಾಯ ೨ನೇ ತಿದ್ದುಪಡಿ ವಿಧೇಯಕ-೨೦೨೫ ಅನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ತೋರಿದ ಇಚ್ಛಾಶಕ್ತಿ ಕೊಡಗಿನ ಜನರ ಪರವಾಗಿತ್ತು. ಕೊಡಗಿನ ಬಹುಕಾಲದ ಈ ಸಮಸ್ಯೆಯನ್ನು ಕಾನೂನು ಬದ್ಧವಾಗಿ ಪರಿಹರಿಸಬೇಕೆಂಬ ಮನಸ್ಸು ಸಚಿವರಿಗೆ ಹಿಂದಿನಿಂದಲೂ ಇತ್ತು. ಈ ಕಾರಣಕ್ಕಾಗಿ ಅವರು ಜಮ್ಮಾ ಭೂಮಿ ಸಮಸ್ಯೆಯ ಬಗ್ಗೆ ದೀರ್ಘವಾಗಿ ಅಧ್ಯಯನ ನಡೆಸಿದ್ದರು ಎಂದರಲ್ಲದೆ, ಈ ಕಾನೂನನ್ನು ಕೊಡಗಿನ ಜನತೆ ಸಮರ್ಪಕವಾಗಿ ಮತ್ತು ನ್ಯಾಯೋಚಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭ ಕೊಡವ ಮುಸ್ಲಿಂ ಅಸೋಸಿಯೇಷನ್ ನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಆಲೀರ ಎಂ. ರಶೀದ್, ಕೋಳುಮಂಡ ರಫೀಕ್, ಕೆಂಗೋಟಂಡ ಎಸ್.ಸೂಫಿ ಮತ್ತು ಪರವಂಡ ಎ. ಸಿರಾಜ್ ಉಪಸ್ಥಿತರಿದ್ದರು.