ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಕುಂಡಿ ರಾಜ್ಯ ಮಾತ್ರವಲ್ಲದೆ ದೇಶ ಕಂಡ ಗ್ರಾಮಗಳಲ್ಲಿ ಒಂದು. ಈಗ ನಡೆದಿರುವ ಉತ್ಖನನ ಸಮಾಧಾನ ತಂದಿದೆ. ಇದು ನಮ್ಮತನವನ್ನು ಕಂಡುಕೊಳ್ಳುವುದಾಗಿದೆ. ಅಲ್ಲಿನ 7 ದೇವಾಲಯಗಳನ್ನು ಈಗಾಗಲೇ ಪಾರಂಪರಿಕ ತಾಣ ಎಂದು ಘೋಷಿಸಿ ನಿರ್ವಹಣೆ ಮಾಡಲಾಗುತ್ತಿದೆ. 16 ದೇವಾಲಯ (3 ಬಾವಿ)ಗಳನ್ನು ರಕ್ಷಿತ ಸ್ಮಾರಕಗಳು ಎಂದು ಘೋಷಣೆ ಮಾಡಲು ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳಿಸಿದ್ದಾರೆ. ಈ ಬಗ್ಗೆ ನಾನೂ ಇತ್ತೀಚೆಗೆ ಸಭೆ ಮಾಡಿ, ಅಲ್ಲಿನ 20 ಸ್ಮಾರಕಗಳನ್ನು ರಕ್ಷಿತ ಸ್ಮಾರಕ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ತಿಂಗಳಲ್ಲಿ 44 ದೇವಾಲಯ, ಬಾವಿ ಇತರೆ ಸ್ಮಾರಕಗಳು ರಕ್ಷಿತ ಸ್ಮಾರಕಗಳು ಎಂದು ಘೋಷಣೆ ಆಗಲಿವೆ. ದೇಶದಲ್ಲಿ ಒಂದು ಗ್ರಾಮದಲ್ಲಿ ಇಷ್ಟೊಂದು ರಕ್ಷಿತ ಸ್ಮಾರಕಗಳು ಇರುವುದು ಐತಿಹಾಸಿಕ ಲಕ್ಕುಂಡಿಯ ಹೆಮ್ಮೆ ಎಂದು ಹೇಳಿದರು.ಸಿಎಂ ಸ್ಥಾನ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಹೇಳಿದೆ:
ಡಿಕೆಶಿ ಅವರ ದೆಹಲಿ ಪ್ರವಾಸ ಪ್ರಸ್ತಾಪಿಸಿ ಸಿಎಂ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ, ಸಚಿವ ಎಚ್.ಕೆ.ಪಾಟೀಲ್ ಉತ್ತರಿಸಿ ನಾನು ಇಷ್ಟೇ ಹೇಳ್ತಿನಿ. ಏನಾದರೂ ಹೇಳಿದರೆ ಬೇರೆ ರೆಕ್ಕೆ ಪುಕ್ಕ ಕೂಡಸ್ತೀರಿ, ಸಿಎಂ ಸ್ಥಾನದ ಬಗ್ಗೆ ಮಾತನಾಡಬೇಡಿ ಎಂದು ಹೈಕಮಾಂಡ್ ಹೇಳಿದ್ದು, ಈ ಕುರಿತು ಮಾತಾಡಲ್ಲ. ಡಿಸಿಎಂ ದೆಹಲಿಗೆ ನಾಯಕರನ್ನು ಭೇಟಿ ಆಗಲು ಹೋಗಿದ್ದಾರೆ. ಸಹಜವಾಗಿ ಪಕ್ಷ ಸಂಘಟನೆ ಬಗ್ಗೆ ಮಾತನಾಡುತ್ತಾರೆ. ಏನೂ ಬೆಳವಣಿಗೆ ಆಗುತ್ತಿರುವ ಯಾವ ಮಾಹಿತಿಯೂ ನಮಗಿಲ್ಲ. ಮಾಧ್ಯಮಗಳಿಗೆ ಮಾತಾಡದಂತೆ ನಮ್ಮ ಹೈಕಮಾಂಡ್ ಸೂಚನೆ ನೀಡಿದೆ. ಆ ಸೂಚನೆ ಎಲ್ಲರಿಗೂ ಅನ್ವಯಿಸುತ್ತೆ ಎಂದರು.ಜಿಬಿಎ ಚುನಾವಣೆಯಲ್ಲಿ ಸರ್ಕಾರ ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧರಿಸಿರುವ ವಿಚಾರಕ್ಕೆ ಪ್ರಸ್ತಾಪಿಸಿ, ಬಹಳಷ್ಟು ಜನರು ಇವಿಎಂ ಬಗ್ಗೆ ಅನುಮಾನ ವ್ಯಕ್ತ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈಗಾಗಲೇ ಚುನಾವಣೆ ಆಯೋಗಕ್ಕೆ ತಿಳಿಸಿದ್ದೇವೆ. ಚುನಾವಣೆ ಆಯೋಗವೂ ಘೋಷಣೆ ಮಾಡಿದೆ. ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತದೆ. ಉಪ ಚುನಾವಣೆಯಲ್ಲೂ ಬ್ಯಾಲೆಟ್ ಪೇಪರ್ ಬಳಕೆ ಆಗುತ್ತಾ ಎಂಬ ಪ್ರಶ್ನೆಗೆ, ಆ ಬಗ್ಗೆ ಮುಂದೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಡಿಜಿಪಿ ರಾಮಚಂದ್ರನ್ ರಾಸಲೀಲೆ ಪ್ರಕರಣ ಕುರಿತು ಪತ್ರಿಕೆಗಳಲ್ಲಿ ನೋಡಿದ್ದೀನಿ. ಪೊಲೀಸ್ ಅಧಿಕಾರಿ ಕೃತ್ಯ ಪುರಾವೆ ಸಮೇತವೇ ಇದೆ. ಮುಖ್ಯಮಂತ್ರಿಗಳು, ನಾವು ಹೇಳಿದ್ದೇವೆ. ತಕ್ಷಣ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.