ಮೆಡಿಕಲ್‌ ಕಾಲೇಜಿನ ಕುಂದುಕೊರತೆ ಬಗೆಹರಿಸಲು ಪ್ರಯತ್ನ: ಸಿ.ಟಿ. ರವಿ

KannadaprabhaNewsNetwork |  
Published : Oct 26, 2025, 02:00 AM IST
ಚಿಕ್ಕಮಗಳೂರಿನ ಮೆಡಿಕಲ್‌ ಕಾಲೇಜಿಗೆ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಬಿಜೆಪಿ ಮುಖಂಡರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಚಿಕ್ಕಮಗಳೂರು ಮೆಡಿಕಲ್‌ ಕಾಲೇಜು ಮತ್ತು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದು ಕೊರತೆಗಳಿದ್ದು, ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

- ಚಿಕ್ಕಮಗಳೂರಿನ ಮೆಡಿಕಲ್‌ ಕಾಲೇಜು ಹಾಗೂ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರು ಮೆಡಿಕಲ್‌ ಕಾಲೇಜು ಮತ್ತು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದು ಕೊರತೆಗಳಿದ್ದು, ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಶನಿವಾರ ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಮೊನ್ನೆ ದೇವೀರಮ್ಮನವರ ಬೆಟ್ಟ ಹತ್ತುವಾಗ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ಕೆಲವು ಪೋಷಕರು ನಮ್ಮನ್ನು ಭೇಟಿಯಾಗಿದ್ದರು. ಆ ವೇಳೆ ಕಾಲೇಜು ಹಾಸ್ಟೆಲ್‌ನಲ್ಲಿ ಸಮಸ್ಯೆ ಇದೆ ಎಂದು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ಹಾಸ್ಟೆಲ್‌ಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು.

ಕಾಲೇಜಿನಲ್ಲಿ ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯಿಲ್ಲ. ಬಕೆಟ್‌ನಲ್ಲಿ ನೀರು ಹಿಡಿದು ಹೋಗಬೇಕಾದ ಸ್ಥಿತಿ ಇದೆ. ಯಾವುದೇ ಸಿಂಕ್‌ಗಳಲ್ಲೂ ನೀರು ಬರುತ್ತಿಲ್ಲ. ಕೆಟ್ಟ ವಾಸನೆ ಬರುತ್ತಿದೆ. ಇದೆಲ್ಲವೂ ಮೆಡಿಕಲ್‌ ಕಾಲೇಜಿಗೆ ಗೌರವ ತರುವಂತಹದ್ದಲ್ಲ. ಅಲ್ಲದೆ ಎಲ್ಲ ವಿಷಯಗಳಿಗೂ ಉಪನ್ಯಾಸಕರಿಲ್ಲ, ಸರಿಯಾದ ಸಿಬ್ಬಂದಿ ಇಲ್ಲ ಎನ್ನುವ ದೂರುಗಳನ್ನು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದರು.ಹಾಸ್ಟೆಲ್‌ನಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ಇದೆ. ಆಗಾಗ ವಿದ್ಯುತ್‌ ಕಡಿತ ಆಗುತ್ತಿರುತ್ತದೆ. ವೋಲ್ಟೇಜ್ ಸಮಸ್ಯೆ ಇದೆ. ಜನರೇಟರ್‌ ಆಟೋಮ್ಯಾಟಿಕ್ ಚಾಲನೆ ಆಗುವುದಿಲ್ಲ. ಕೆಲವೊಮ್ಮೆ ಇಡೀ ದಿನ ವಿದ್ಯುತ್‌ ಇರುವುದಿಲ್ಲ ಇದೆಲ್ಲವೂ ಅಮಾನವೀಯ ಎಂದರಲ್ಲದೆ, ಹೈಸ್ಪೀಡ್ ಇಂಟರ್‌ನೆಟ್ ಸಮಸ್ಯೆ ಇದೆ ಎನ್ನುವ ದೂರುಗಳಿವೆ ಎಂದರು.ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಾಸ್ಟೆಲ್ ಊಟ ತಿಂಡಿ ಗುಣಮಟ್ಟ ಮತ್ತು ಅಗತ್ಯದಷ್ಟು ಪೂರೈಕೆಯಲ್ಲಿ ಕೊರತೆ ಇದೆ. ಶುಚಿತ್ವದ ಕೊರತೆ ಇದೆ. ಕರ್ಟನ್‌ರಾಡ್ ಒದಗಿಸಿಲ್ಲ. ಏರ್‌ ಕಂಡೀಷನ್ ವಿದ್ಯುತ್ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ದೂರುಗಳಿವೆ ಎಂದು ತಿಳಿಸಿದರು.ಕುಡಿಯುವ ನೀರಿನ ಸಮಸ್ಯೆ ಇದೆ ಹಿಂದೆ ಅಮೃತ್‌ ಯೋಜನೆಯಲ್ಲಿ ಮೆಡಿಕಲ್‌ ಕಾಲೇಜಿಗೂ ನೀರು ಒದಗಿಸಬೇಕೆಂದು ಯೋಜನೆಯಲ್ಲಿ ಸೇರಿಸಲಾಗಿತ್ತು. ಅದು ಕಾರ್ಯಗತಕ್ಕೆ ಬಂದಿಲ್ಲ ಎಂದರು.ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದೆ ತೊಂದರೆ ಆಗಿದೆ. ತಕ್ಷಣಕ್ಕೆ ಊಟ, ಉಪಹಾರ ಬೇಕೆಂದರೆ ಅಗತ್ಯ ಕಾಂಡಿಮೆಂಟ್ಸ್ ವ್ಯವಸ್ಥೆ ಇಲ್ಲ. ಇದೆಲ್ಲವನ್ನೂ ದಾಖಲಿಸಿಕೊಂಡಿದ್ದೇವೆ ಎಂದರು.ನಿಯಮಗಳ ಪ್ರಕಾರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇಷ್ಟರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದಕ್ಕೆ ಸಮಸ್ಯೆ ಏನು ಎನ್ನುವುದನ್ನು ಪರಿಶೀಲಿಸಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.₹638 ಕೋಟಿ ಖರ್ಚು

₹638 ಕೋಟಿ ಖರ್ಚು ಮಾಡಿ ಕೇಂದ್ರ ಮತ್ತು ರಾಜ್ಯದ ಸಹಯೋಗದಲ್ಲಿ ಮೆಡಿಕಲ್‌ ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿದೆ. 2012 ರಲ್ಲಿ ನಾವು ಮಂತ್ರಿಯಾಗಿದ್ದಾಗಲೇ ಇದಕ್ಕೆ ಮಂಜೂರಾತಿ ಕೊಡಿಸಿದ್ದೆ. ಸರ್ಕಾರ ಬದಲಾದ ನಂತರ ಅದನ್ನು ರದ್ದು ಪಡಿಸಲಾಗಿತ್ತು. ನಂತರ ಮತ್ತೆ ನಮ್ಮ ಸರ್ಕಾರ ಬಂದಾಗ ಕೇಂದ್ರ ಹಾಗೂ ರಾಜ್ಯದ ಸಹಯೋಗದೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್‌ ಕಾಲೇಜು ಮಂಜೂರು ಮಾಡಿಸಿದ್ದೇವೆ. ವರ್ಷಕ್ಕೆ 150 ಮಂದಿ ಪ್ರವೇಶ ಪಡೆಯುತ್ತಿ ದ್ದಾರೆ. ಅವರು ಕನಸು ಕಟ್ಟಿಕೊಂಡು ಬಂದಿರುತ್ತಾರೆ. ಅವರಿಗೆ ಐಶಾರಾಮಿ ಸೌಲಭ್ಯ ಇಲ್ಲವಾದರೂ ಅವರ ವಿದ್ಯಾಭ್ಯಾಸಕ್ಕೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಕ್ರೀಡಾ ವ್ಯವಸ್ಥೆ ಇಲ್ಲ ಎನ್ನುವ ದೂರು ಸಹ ವಿದ್ಯಾರ್ಥಿಗಳಿಂದ ಬಂದಿದೆ. ಜಾಗ ಮೀಸಲಿಡಲಾಗಿದೆ. ಹಾಸ್ಟೆಲ್ ನಿರ್ಮಾಣದ ವೇಳೆಯೇ ಅದರ ಕಡೆಗೂ ಗಮನ ಕೊಡಬೇಕಿತ್ತು. ಉಳಿದಂತೆ ಎಂಯುಎಸ್‌ಎಸ್‌ಆರ್ ಸ್ಟೇಷನ್‌ಗೆ ಜಾಗ ಮಂಜೂರಾಗಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೆ ಇಂಧನ ಸಚಿವರಿದ್ದಾರೆ. ಅವರು ತಕ್ಷಣ ಇಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿದರೆ ಕಾಲೇಜಿಗೂ ಅನುಕೂಲ. ಜೊತೆಗೆ ಪಕ್ಕದಲ್ಲಿರುವ ಕೈಗಾರಿಕಾ ಕೇಂದ್ರ ಮತ್ತು ಗ್ರಾಮಗಳಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಸಚಿವರಲ್ಲಿ ಆಗ್ರಹ ಮಾಡುತ್ತೇನೆ ಎಂದರು.ಇದಲ್ಲದೆ ಯೂರಾಲಜಿ, ಕಾರ್ಡಿಯಾಲಜಿ ಬೋಧನೆಗೆ ಎಂಎಸ್‌ ಆಗಿರುವ ಸಿಬ್ಬಂದಿ ಬೇಕು. ಅದನ್ನು ಒದಗಿಸಬೇಕು. ಹಾಸ್ಟೆಲ್ ಬ್ಲಾಕ್‌ನಲ್ಲಿ ಮಿನಿ ಗ್ರಂಥಾಲಯ ತೆರೆಯಬೇಕು. ಸ್ವಚ್ಛತೆಗೆ ಇನ್ನಷ್ಟು ಗಮನ ಕೊಡಬೇಕು ಎನ್ನುವ ಆಗ್ರಹ ವಿದ್ಯಾರ್ಥಿಗಳದ್ದಾಗಿದೆ ಎಂದರು.ಎರಡು ಬಾರಿ ವೈದ್ಯಕೀಯ ಶಿಕ್ಷಣ ಸಚಿವರು ಇಲ್ಲಿಗೆ ಭೇಟಿ ನೀಡಿದರೂ ಸಮಸ್ಯೆಗಳು ಹಾಗೇ ಉಳಿದಿವೆ, ಇದರ ಬಗ್ಗೆ ಗಮನಹರಿಸಬೇಕು ಎಂದು ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಹೇಳಿದರು.

ಈ ವೇಳೆ ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಮುಖಂಡರಾದ ಜಸಂತಾ ಅನಿಲ್ ಕುಮಾರ್, ಚೈತ್ರಗೌಡ, ಈಶ್ವರಳ್ಳಿ ಮಹೇಶ್, ಪುಷ್ಪರಾಜ್, ಜೀವನ್‌ ರಂಗನಾಥ್, ಕುಮಾರ್‌ ಇದ್ದರು.-- ಬಾಕ್ಸ್‌ ---ಚಿಲ್ಲರೆ ಜನರಿಂದ ಚಿಲ್ಲರೆ ಕೆಲಸಚಿಕ್ಕಮಗಳೂರು: ಡೀನ್ ಅವರಿಗೆ ಪತ್ರ ಕೊಟ್ಟು ಇಲ್ಲಿರಬೇಕು ಎಂದು ಕೋರಿದ್ದೆ. ಆದರೆ ಕೆಲವರು ಸಣ್ಣ ರಾಜಕಾರಣ ಮಾಡಿದ್ದಾರೆ. ಚಿಲ್ಲರೆ ಜನ ಯಾವತ್ತೂ ಚಿಲ್ಲರೆ ಕೆಲಸ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದರು.

ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಯಮದ ಪ್ರಕಾರ ಕಾಲೇಜಿನ ಡೀನ್ ಉಪಸ್ಥಿತರಿರಬೇಕಿತ್ತು. ಆದರೆ, ಕೆಲವರ ಸಣ್ಣ ರಾಜಕಾರಣ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದಾರೆ ಎಂದರು.ನಾನು ಇಲ್ಲಿಗೆ ಬಂದಿದ್ದು ರಾಜಕಾರಣ ಮಾಡಲಿಕ್ಕಲ್ಲ. ಇಲ್ಲಿರುವ ಶೇ. 99 ವಿದ್ಯಾರ್ಥಿಗಳು ಬೇರೆ ಜಿಲ್ಲೆ, ಬೇರೆ ರಾಜ್ಯದವರು ಅವರ ಸಮಸ್ಯೆಗಳನ್ನು ಕೇಳುವುದು ಒಬ್ಬ ಜನಪ್ರತಿನಿಧಿಯಾಗಿ ನಮ್ಮ ಕರ್ತವ್ಯ. ಅಲ್ಲದೆ ಮೆಡಿಕಲ್‌ ಕಾಲೇಜು ನನ್ನ ಕನಸಿನ ಕೂಸಾಗಿತ್ತು. ಈ ಕಾರಣಕ್ಕೆ ಕಾಳಜಿ ಇಟ್ಟು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. 21 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಚಿಲ್ಲರೆ ರಾಜಕಾರಣ ಮಾಡಿಲ್ಲ. ಚಿಲ್ಲರೆ ಜನ ಹೆಚ್ಚು ಕಾಲ ಜನರ ಮನಸಿನಲ್ಲಿ ಉಳಿಯಲು ಆಗುವುದಿಲ್ಲ. ಜೀವನದಲ್ಲಿ ಆದ್ಯತೆಗಳಿರಬೇಕು. ನನಗೆ ಅಭಿವೃದ್ಧಿ ಆಧ್ಯತೆ. ಕೆಲವು ಜನರು ಏಕ್‌ ದಿನ್‌ ಕಾ ಸುಲ್ತಾನ್‌ ಎಂದು ಮೆರೆದು ಹೋಗಲು ನೋಡುತ್ತಾರೆ. ಆದರೆ, ಅವರು ಯಾರೂ ಹೆಜ್ಜೆ ಗುರುತು ಬಿಟ್ಟು ಹೋಗಲು ಆಗುವುದಿಲ್ಲ. ಸುಳ್ಳುಗಳ ಮೂಲಕ ಹೆಚ್ಚು ಕಾಲ ಉಳಿಯಲು ಆಗಲ್ಲ. ಎಲ್ಲಾ ಕಾಲಕ್ಕೂ ಜನರನ್ನು ಯಾಮಾರಿಸಲು ಆಗುವುದಿಲ್ಲ ಎಂದು ಕಿಡಿಕಾರಿದರು.

--25 ಕೆಸಿಕೆಎಂ 2ಚಿಕ್ಕಮಗಳೂರಿನ ಮೆಡಿಕಲ್‌ ಕಾಲೇಜಿಗೆ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಬಿಜೆಪಿ ಮುಖಂಡರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡ ವಿಜಯ ಭಂಡಾರಿ
ಗದಗ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್, ಸಹಬಾಳ್ವೆ ಮೆರಗು!