ಮಾಂಸಾಹಾರಕ್ಕೆ ಜನರ ಒತ್ತಡ ಹಿನ್ನೆಲೆ ಸರ್ಕಾರ ಚಿಂತನೆ । ದುಶ್ಚಟಗಳ ನಿಗ್ರಹಕ್ಕೆ ಮಸೂದೆ ಅಗತ್ಯ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಪೋಷಕಾಂಶಯುಕ್ತ ಮಾಂಸಾಹಾರ, ಮೊಟ್ಟೆ ನೀಡಬೇಕೆಂಬ ಬೇಡಿಕೆ ಇದ್ದು, ಈ ಹಿನ್ನೆಲೆ ಮೊಟ್ಟೆ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಪೌರಾಡಳಿತ ಮತ್ತು ವಕ್ಫ್ ಸಚಿವ ರಹೀಂ ಖಾನ್ ತಿಳಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಡವರಿಗೆ ಊಟದಲ್ಲಿ ಪೋಷಕಾಂಶ ಸಿಗಬೇಕು. ಇದಕ್ಕಾಗಿ ಮಾಂಸಹಾಕ, ಮೊಟ್ಟೆಯನ್ನು ನೀಡುವಂತೆ ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗುತ್ತಿದ್ದು, ಮೊಟ್ಟೆ ನೀಡುವ ಪ್ರಸ್ತಾವವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದರು.ಮೊಟ್ಟೆಯನ್ನು ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುವ ಪ್ರಸ್ತಾವವು ಶೀಘ್ರವೇ ಕಾರ್ಯ ರೂಪಕ್ಕೆ ತರುವ ಉದ್ದೇಶವಿದೆ. ಇದರಿಂದ ರಾಜ್ಯಾದ್ಯಂತ ಲಕ್ಷಾಂತರ ಬಡ ಜನರಿಗೆ ಹೆಚ್ಚು ಪೋಷಕಾಂಶಯುಕ್ತ ಆಹಾರವನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ಅವಕಾಶವೂ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ರಾಜ್ಯದ ಬಡವರು, ಕಾರ್ಮಿಕರು, ಶ್ರಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ನಗರ ಅಶಕ್ತರಿಗೆ ಕಡಿಮೆ ಬೆಲೆಯಲ್ಲಿ ಪೋಷಕಾಂಶ ಆಹಾರವು ಇದರಿಂದ ಸಿಗಲಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ವಿಸ್ತರಿಸುವ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಹೊಸ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೇರೆಯವರು ಎಂತೆಂಹದ್ದೋ ಮಸೂದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಆದರೆ, ಬಡವರಿಗೆ ಅನುಕೂಲಕರವಾದ ಮಸೂಗೆಗಳ ಜಾರಿಗೊಳಿಸುವ ಅಗತ್ಯವಿದೆ. ಜೂಜಾಟ, ಕುಡಿತ ಮತ್ತಿತರೆ ಸಾಮಾಜಿಕ ದುಶ್ಚಟಗಳ ವಿರುದ್ಧದ ಮಸೂದೆಗಳನ್ನು ಜಾರಿಗೆ ತಂದರೆ ಬಡವರು ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ಆಕ್ಷೇಪಿಸಿದರು.