ಗ್ರಾಮಾಭಿವೃದ್ಧಿಗೆ ₹80 ಲಕ್ಷ ಅನುದಾನ ಮೀಸಲು: ಶಾಸಕ ಎಚ್.ಡಿ.ತಮ್ಮಯ್ಯ

KannadaprabhaNewsNetwork |  
Published : Aug 26, 2025, 01:02 AM IST
ಚಿಕ್ಕಮಗಳೂರು ತಾಲ್ಲೂಕಿನ ಇಂದಾವರ ಗ್ರಾ.ಪಂ. ವ್ಯಾಪ್ತಿಯ ಹುಕ್ಕುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಕಟ್ಟಡವನ್ನು ಶಾಸಕ ಎಚ್‌.ಡಿ . ತಮ್ಮಯ್ಯ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಇದ್ದರು. | Kannada Prabha

ಸಾರಾಂಶ

ಇಂದಾವರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆ, ಬಡಾವಣೆ ಹಾಗೂ ದೇವಾಲಯ ಅಭಿವೃದ್ಧಿಗೆ 80 ಲಕ್ಷ ರು. ಅನುದಾನವನ್ನು ಮೀಸಲಿಟ್ಟಿದ್ದು, ಮಳೆಗಾಲದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಇಂದಾವರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆ, ಬಡಾವಣೆ ಹಾಗೂ ದೇವಾಲಯ ಅಭಿವೃದ್ಧಿಗೆ 80 ಲಕ್ಷ ರು. ಅನುದಾನವನ್ನು ಮೀಸಲಿಟ್ಟಿದ್ದು, ಮಳೆಗಾಲದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ತಾಲೂಕಿನ ಇಂದಾವರ ಗ್ರಾಪಂ ವ್ಯಾಪ್ತಿಯ ಹುಕ್ಕುಂದ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಕೊರತೆಯಾಗದಂತೆ ಇಂದಾವರದ ಮುಖ್ಯ ರಸ್ತೆಗೆ ಕಾಂಕ್ರೀಟೀಕರಣಕ್ಕೆ 20 ಲಕ್ಷ, ಕ್ರಿಶ್ಚಿಯನ್ ಬಡಾವಣೆಗೆ 50 ಲಕ್ಷ ರು. ಹಾಗೂ ಹುಕ್ಕುಂದ ಗ್ರಾಮದ ದೇವಾಲಯ ಅಭಿವೃದ್ದಿಗೆ 10 ಲಕ್ಷ ರು. ಅನುದಾನ ಮೀಸಲಿಟ್ಟಿದ್ದು ಸಾರ್ವಜನಿಕರ ಸುಭಿಕ್ಷೆ ಹಾಗೂ ನೆಮ್ಮದಿಯಿಂದ ಬದುಕುವುದೇ ಸರ್ಕಾರದ ಮೂಲಧ್ಯೇಯವಾಗಿದೆ ಎಂದು ತಿಳಿಸಿದರು.

ಮಹಿಳಾ ಸ್ವಸಹಾಯ ಸಂಘದವರಿಗೆ ಸಭೆ, ಕಾರ್ಯಕ್ರಮ ನಡೆಸಲು ಶಾಲೆ ಅಥವಾ ಇತರೆಡೆ ತೆರಳುವ ಸ್ಥಿತಿಯಿತ್ತು. ಇದೀಗ ಹುಕ್ಕುಂದದಲ್ಲಿ ಹೊಸದಾಗಿ ನಿರ್ಮಿಸಿರುವ ಸಂಜೀವಿನಿ ಕಟ್ಟಡದಿಂದ ಬಹಳಷ್ಟು ಉಪಯೋಗವಾಗಿದ್ದು ಸ್ವಸಹಾಯ ಮಹಿಳಾ ಬಂಧುಗಳು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಮುನ್ನೆಡೆಯಬೇಕಿದೆ ಎಂದು ತಿಳಿಸಿದರು.

ಸಂಘದ ನೂತನ ಕಟ್ಟಡವನ್ನು ತಮ್ಮ ಸ್ವಗೃಹ ಪ್ರವೇಶದಂತೆ ಶೃಂಗರಿಸಿರುವ ಮಹಿಳೆಯರ ಕಾರ್ಯ ಶ್ಲಾಘನೀಯ. ವಿಶೇಷವಾಗಿ ಭಾರತೀಯ ಮಹಿಳೆಯರಲ್ಲಿ ಆತ್ಮಶಕ್ತಿ ಹೆಚ್ಚಿದ್ದು, ಯಾವುದೇ ಸಮಾರಂಭವನ್ನು ಶ್ರದ್ಧೆ, ವಿನಯದಿಂದ ನಿರ್ವಹಿಸುವ ತಾಳ್ಮೆ ಅಡಗಿರುವುದರಿಂದ ಕಟ್ಟಡವು ಸುಂದರತೆಯಿಂದ ಅಲಂಕಾರಗೊಂಡಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೊಜೇಗೌಡ ಮಾತನಾಡಿ, ಪ್ರತಿ ಕುಟುಂಬದಲ್ಲಿ ಹೆಣ್ಣೊಂದು ಬಹುಮುಖ್ಯ ಪಾತ್ರವಹಿಸುತ್ತಾಳೆ. ಕುಟುಂಬದ ಆರೋಗ್ಯ, ಮಕ್ಕಳ ಪಾಲನೆ ಜವಾಬ್ದಾರಿ ಹೊತ್ತಿರುವ ಕಾರಣ ಮುಂಚೂಣಿಯಲ್ಲಿದ್ದಾರೆ. ಅಲ್ಲದೇ ಲೋಕಸೇವಾ ಕಾರ್ಯದಲ್ಲಿ ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯವಿದೆ. ಜತೆಗೆ ಸ್ವಸಹಾಯ ಸಂಘದಲ್ಲಿ ಮಹಿಳೆಯರು ಒಗ್ಗಟ್ಟಾಗಿ ಕೈಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬದ ಅಣ್ಣ ತಮ್ಮಂದಿರು, ಅಕ್ಕತಂಗಿಯರ ನಡುವೆ ಆಸ್ತಿ ವಿವಾದದಲ್ಲಿ ಹಲವಾರು ಕಲಹಗಳು ಉಂಟಾಗುತ್ತಿವೆ. ಆದರೆ, ಪೂರ್ವಿಕರು ಆಸ್ತಿ, ಅಂತಸ್ತಿನ ವ್ಯಾಮೋಹವಿಲ್ಲದೇ ಕೃಷಿ ಬದುಕಿನಲ್ಲಿ ಹೆಚ್ಚು ಸಂತೋಷವನ್ನು ಕಾಣುತ್ತಿದ್ದರು. ಇದೀಗ ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸ ಮರೆಯಾಗಿ ಅರ್ಥಿಕ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ದುರ್ದೈವ ಎಂದು ವಿಷಾದಿಸಿದರು.

ಇಂದಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಐ.ಬಿ.ಸುಭಾಷ್‌ ಮಾತನಾಡಿ, ಸ್ವಸಹಾಯ ಸಂಘದ ಮಹಿಳೆಯರಿಗೆ ಅನುಕೂಲವಾಗಲು ನರೇಗಾ ಯೋಜನೆಯಡಿ ಸುಮಾರು 17.50 ಲಕ್ಷ ರೂ.ವೆಚ್ಚದಲ್ಲಿ ಸಂಜೀವಿನಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸೂಕ್ತ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ವಿಜಯ್‌ಕುಮಾರ್, ಜನತಾ ಬಜಾರ್ ಅದ್ಯಕ್ಷ ಜಯರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಇಂದಾವರ ಗ್ರಾ.ಪಂ. ಸದಸ್ಯರಾದ ಕೆಂಚಯ್ಯ, ಎಂ.ಆರ್.ಜ್ಯೋತಿ, ದಾಕ್ಷಾಯಣಿ, ನೇತ್ರಾವತಿ, ಆಶಾ, ಐ.ಡಿ.ಚಂದ್ರಶೇಖರ್, ಪಿಡಿಒ ಸುರಯಾ ಭಾನು, ಕಾರ್ಯದರ್ಶಿ ವಿ.ಶೇಖರ್ ಇತರರು ಹಾಜರಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ