ಹೊಸಪೇಟೆ, ಕೊಪಳದಲ್ಲೂ ವೃದ್ಧರು ಆಸ್ಪತ್ರೆ ಪಾಲು : ರಾಜ್ಯಾದ್ಯಂತ 100ಕ್ಕೂ ಹೆಚ್ಚು ಪ್ರಕರಣ

KannadaprabhaNewsNetwork | Updated : Mar 17 2025, 10:18 AM IST

ಸಾರಾಂಶ

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್)ಯೊಂದರಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ಬಿಟ್ಟು ಹೋಗಿರುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿಯೂ ಇಂತಹ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ 

 ಕಲಬುರಗಿ  : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್)ಯೊಂದರಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ಬಿಟ್ಟು ಹೋಗಿರುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿಯೂ ಇಂತಹ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಸ್ವತ: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವರ ಹೇಳಿಕೆ ಬೆನ್ನಲ್ಲೇ ರಾಜ್ಯದ ಇತರ ಆಸ್ಪತ್ರೆಗಳಲ್ಲಿ ಬೆಳಕಿಗೆ ಬಂದ ಪ್ರಕರಣಗಳು ಇಲ್ಲಿವೆ.

ವಿಜಯನಗರ ಜಿಲ್ಲೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆ ಕೂಡ ವೃದ್ಧರಿಗೆ ಆಶ್ರಯತಾಣವಾಗಿ ಮಾರ್ಪಾಡಾಗುತ್ತಿದೆ. ವಯಸ್ಸಾದ ತಂದೆ, ತಾಯಿಯರನ್ನು ಮಕ್ಕಳೇ ಇಲ್ಲಿನ ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಆರು ಪ್ರಕರಣಗಳು ಕಂಡು ಬಂದಿವೆ. ಈ ಬಗ್ಗೆ ಮಾಹಿತಿ ನೀಡಿರುವ ವಿಜಯನಗರ ಡಿಎಚ್ಒ ಡಾ.ಎಲ್.ಆರ್. ಶಂಕರ ನಾಯ್ಕ, ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆರು ವೃದ್ಧರನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದರು.‌ ಅವರ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಿ ಅವರನ್ನು ಕಳುಹಿಸಿಕೊಡಲಾಗಿದೆ. ಈ ತರಹದ ಪ್ರಕರಣಗಳು ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ. ಇವರೆಲ್ಲಾ ಬೆಂಗಳೂರು, ಕಂಪ್ಲಿ, ಹೊಸಪೇಟೆ ಸುತ್ತಮುತ್ತ ಸೇರಿದವರು.

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಂತಹ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ, ವಿಜಯನಗರ ನಿವಾಸಿಯಾಗಿರುವ ರಾಮಾಂಜನೇಯ (72 ವರ್ಷ) ಎಂಬುವರು ಕಳೆದ 6 ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇವರಿಗೆ ಯಾರೂ ದಿಕ್ಕಿಲ್ಲ. ಪತ್ನಿ ತೀರಿಕೊಂಡಿದ್ದಾಳೆ, ಮಕ್ಕಳು ಸಹ ಇಲ್ಲ. ಇವರ ಸಹೋದರ ಇವರನ್ನು ನೋಡಿಕೊಳ್ಳುತ್ತಿಲ್ಲ. ಹೀಗಾಗಿ, ಅನಾರೋಗ್ಯಕ್ಕೆ ತುತ್ತಾಗಿ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ. ಆದರೆ, ಮನೆಗೆ ಕರೆದುಕೊಂಡು ಹೋಗುವವರೇ ಇಲ್ಲ.

‘ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ನನ್ನ ಸಹೋದರ ನನ್ನ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದರಿಂದ ಯಾರು ಇಲ್ಲದಂತಾಗಿದ್ದು, ಇಲ್ಲಿಯೇ ಇದ್ದೇನೆ’ ಎಂದು ರಾಮಾಂಜನೇಯ ಕಂಬನಿಗರೆಯುತ್ತಾರೆ.

ಕಲಬುರಗಿ ಜಿಲ್ಲಾಸ್ಪತ್ರೆ ಈ ಬಗ್ಗೆ ದಾಖಲೆ ಇಟ್ಟಿಲ್ಲವಾದರೂ, ಮೂಲಗಳ ಪ್ರಕಾರ ತಿಂಗಳಿಗೆ, ಎರಡು ತಿಂಗಳಿಗೆ ಇಂತಹ ಒಂದೋ, ಎರಡೋ ಪ್ರಕರಣಗಳು ಗಮನಕ್ಕೆ ಬರುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಿದ್ದ ಓರ್ವ ವ್ಯಕ್ತಿ ಕಳೆದ ಮೂರು ವರ್ಷದಿಂದ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಎಲ್ಲರ ಜೊತೆ ಬೆರೆತು, ನರ್ಸಿಂಗ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾನೆ. ಈ ಕಾರಣದಿಂದಾಗಿ ಆತನ ಇಲ್ಲಿಯ ನಿವಾಸಿಯಾಗಿ ಬಿಟ್ಟಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲಬುರಗಿಯ ಜಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಶಿವಕುಮಾರ್, ಆಸ್ಪತ್ರೆ ಜೊತೆ ವೃದ್ಧಾಶ್ರಮಗಳು ಸಹಕಾರ ನೀಡುತ್ತಿವೆ. ಹೀಗಾಗಿ, ಇಂತಹ ಪ್ರಕರಣಗಳು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಅಷ್ಟೊಂದು ಸಮಸ್ಯೆ ಆಗಿಲ್ಲ. ಇಂತಹ ಪ್ರಕರಣ ಕಂಡು ಬಂದಾಗ ಆಸ್ಪತ್ರೆಯ ಆಡಳಿತ ಸ್ಥಳೀಯ ವೃದ್ಧಾಶ್ರಮಗಳನ್ನು ಸಂಪರ್ಕಿಸಿ ಅಲ್ಲಿಗೆ ಅವರನ್ನು ಕಳುಹಿಸುತ್ತದೆ ಎಂದಿದ್ದಾರೆ.

Share this article