ವೃದ್ಧನ ಹತ್ಯೆ ಪ್ರಕರಣ: ತನಿಖೆಗೆ ಒತ್ತಾಯ

KannadaprabhaNewsNetwork |  
Published : Apr 05, 2024, 01:09 AM IST
4ಕೆಡಿವಿಜಿ1-ದಾವಣಗೆರೆಯಲ್ಲಿ ಗುರುವಾರ ಎನ್‌.ಜ್ಯೋತಿನಾಯ್ಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ತಮ್ಮ ತಂದೆಯನ್ನು ಅಣಬೂರು ಗ್ರಾಮಕ್ಕೆ ಕರೆಸಿಕೊಂಡು ಅಮಾನುಷವಾಗಿ ಹಲ್ಲೆ ಮಾಡಿ, ಶವವನ್ನು ಗುಂಡಿಯಲ್ಲಿ ಹಾಕಿ ಮುಚ್ಚಿದ್ದ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಜಗಳೂರು ತಾಲೂಕು ಗಾಂಧಿ ನಗರ ಗ್ರಾಮಸ್ಥ ಎನ್‌.ಜ್ಯೋತಿನಾಯ್ಕ ಒತ್ತಾಯಿಸಿದ್ದಾರೆ.

ದಾವಣಗೆರೆ: ತಮ್ಮ ತಂದೆಯನ್ನು ಅಣಬೂರು ಗ್ರಾಮಕ್ಕೆ ಕರೆಸಿಕೊಂಡು ಅಮಾನುಷವಾಗಿ ಹಲ್ಲೆ ಮಾಡಿ, ಶವವನ್ನು ಗುಂಡಿಯಲ್ಲಿ ಹಾಕಿ ಮುಚ್ಚಿದ್ದ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಜಗಳೂರು ತಾಲೂಕು ಗಾಂಧಿ ನಗರ ಗ್ರಾಮಸ್ಥ ಎನ್‌.ಜ್ಯೋತಿನಾಯ್ಕ ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗಳೂರು ತಾಲೂಕಿನ ಅಣಬೂರು ಅಂಚೆ ವ್ಯಾಪ್ತಿಯ ಗಾಂಧಿ ನಗರದ ವಾಸಿಯಾದ ಕುಬೇರ ನಾಯ್ಕ ತಂದೆ 60 ವರ್ಷದ ಡಾಕ್ಯಾನಾಯ್ಕರನ್ನು ದುಷ್ಕರ್ಮಿಗಳು ಹೊಡೆದು, ಹತ್ಯೆ ಮಾಡಿದ್ದಾರೆ. ನಂತರ ಮೃತ ಶರೀರ ಗುಂಡಿಯಲ್ಲಿ ಮುಚ್ಚಿ ಹಾಕಿದ್ದ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿ ಎಂದರು.

ಡಾಕ್ಯಾನಾಯ್ಕ ಫೆ.6ರಂದು ಕಾಣೆಯಾಗಿದ್ದರು. ಫೆ.15ರಂದು ಅಣಬೂರು ಅರಣ್ಯ ಪ್ರದೇಶದ ನರ್ಸರಿ ಸಮೀಪದ ಪ್ರದೇಶದಲ್ಲಿ ಮೃತ ದೇಹ ಪತ್ತೆಯಾಗಿದ್ದು, ಪೊಲೀಸರು ಮೃತ ಶರೀರವನ್ನು ಹೊರ ತೆಗೆಸುತ್ತಿದ್ದ ವಿಚಾರ ಗೊತ್ತಾಗಿದ್ದರಿಂದ ಅಲ್ಲಿಗೆ ತಾವು ಹೋಗಿ ನೋಡಿದಾಗ ಅದು ಡಾಕ್ಯನಾಯ್ಕರ ಶವವಾಗಿತ್ತು.

ಡಾಕ್ಯನಾಯ್ಕ ವಾಸವಿದ್ದ ನೆರೆಯ ಮಹಿಳೆ ಅಣಬೂರು ಗೊಲ್ಲರಹಟ್ಟಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಪರಿಚಯ ಮಾಡಿಸಿಕೊಟ್ಟಿದ್ದರು. ಆ ವ್ಯಕ್ತಿ ಮತ್ತು ಆತನ ಸ್ನೇಹಿತರು ಡಾಕ್ಯನಾಯ್ಕ, ಮಹಿಳೆ ಹಾಗೂ ಇನ್ನೋರ್ವ ಕುರಿ ಖರೀದಿಗೆ ಸಾಲ ಮಂಜೂರು ಮಾಡಿಸಿಕೊಟ್ಟಿದ್ದರು. ಈ ವಿಚಾರವನ್ನು ನೆರೆಯ ಮನೆ ಮಹಿಳೆಯಿಂದ ಕೇಳಿ ತಿಳಿದ ಡಾಕ್ಯಾನಾಯ್ಕ ಮನೆ ಸೋರುತ್ತಿದ್ದು, ಕುರಿ ಲೋನ್‌ ಮಾಡಿಸಿಕೊಂಡರೆ ಮನೆ ದುರಸ್ತಿ ಮಾಡಿಸಿಕೊಳ್ಳಬಹುದೆಂದು ಮಹಿಳೆ ಪರಿಚಯ ಮಾಡಿಸಿದ್ದ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ ಎಂದು ಮಕ್ಕಳು ಮಾಹಿತಿ ನೀಡಿದ್ದಾರೆ. ಮೃತ ಡಾಕ್ಯನಾಯ್ಕರ ದಾಖಲೆಗಳನ್ನು ಪಡೆದಿದ್ದ ವ್ಯಕ್ತಿ ನಿರಂತರ ಸಂಪರ್ಕದಲ್ಲಿದ್ದನು. ಸಾಲ ಮಂಜೂರು ಮಾಡಿಸುವುದಾಗಿ ಹೇಳಿ 1 ಲಕ್ಷ ರು. ಸಹ ಪಡೆದಿದ್ದ. ಹೀಗೆ ನಾಲ್ಕೈದು ಜನ ಸೇರಿಕೊಂಡು, ಡಾಕ್ಯನಾಯ್ಕರಿಂದ ಕಮೀಷನ್ ಹಣ ಪಡೆದರೂ, ಲೋನ್ ಮಾಡಿಸದೇ ಸತಾಯಿಸುತ್ತಿದ್ದರು. ಬಳಿಕ ಡಾಕ್ಯಾನಾಯ್ಕಗೆ ಫೋನ್ ಮಾಡಿ, ಅಣಬೂರು ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಇದೇ ವೇಳೆ ಡಾಕ್ಯಾನಾಯ್ಕರನ್ನು ಹೊಡೆದು, ಕೊಲೆ ಮಾಡಿ, ಗುಂಡಿಯಲ್ಲಿ ಮುಚ್ಚಿದ್ದರು ಎಂದು ಅವರು ಮಾಹಿತಿ ನೀಡಿದರು.

ಮನೆಯಿಂದ ಹೋಗುವ ಮುನ್ನ ಡಾಕ್ಯಾನಾಯ್ಕ ಬೈಕ್‌ನಲ್ಲಿ ಕೆಲವರ ಜೊತೆಗೆ ಹೋಗಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಡಾಕ್ಯಾನಾಯ್ಕ ಶವ ಸಿಕ್ಕ ದಿನವೇ ‍ಆರೋಪಿಗಳ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಳಿದವರು ಇದೇ ರೀತಿ ಸಾಲ ಕೊಡಿಸುವುದಾಗಿ ಹೇಳಿ ಅಮಾಯಕರಿಗೆ ಮೋಸ ಮಾಡುತ್ತಾ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ, ಯಾವುದೇ ಕ್ರಮಕೈಗೊಂಡಿಲ್ಲ. ನಿಷ್ಪಕ್ಷಪಾತ ತನಿಖೆ ಕೈಗೊಂಡು, ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಿ, ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಶ್ರಮಿಸಲಿ ಎಂದು ಅವರು ಒತ್ತಾಯಿಸಿದರು. ಮೃತ ಡಾಕ್ಯನಾಯ್ಕ ಪುತ್ರ ಕುಬೇರ ನಾಯ್ಕ, ಎಸ್.ಶಿವಕುಮಾರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!