ಗದಗ: ಕಿರಿಯರ ಭವಿಷ್ಯದ ಏಳ್ಗೆಗಾಗಿಯೇ ತಮ್ಮನ್ನೇ ಸಮರ್ಪಿಸಿಕೊಂಡ ತಂದೆ-ತಾಯಿಗಳು ಮತ್ತು ಹಿರಿಯರನ್ನು ಗೌರವ ಭಾವನೆಯಿಂದ ಕಾಣಬೇಕು. ಅವರ ಅನುಭವ, ಮಾರ್ಗದರ್ಶನ ಸಮಾಜಕ್ಕೆ ದಾರಿದೀಪ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರಿಯರು ಸಮಾಜದ ಕಣ್ಣುಗಳಿದ್ದಂತೆ. ಅವರು ನೀಡಿದ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳು ಬದುಕಿಗೆ ಮೂಲಾಧಾರವಾಗಿವೆ. ಹಿರಿಯರು, ಸಾಧಕರು, ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡಿದ ಪಂಚಮಸಾಲಿ ಸಮಾಜದ ಕಾರ್ಯ ಶ್ಲಾಘನೀಯ. ಕೃಷಿಯನ್ನೇ ಮೂಲಾಧಾರವಾಗಿಸಿಕೊಂಡ ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ಸ್ವಾಭಿಮಾನ, ಸಂಘಟನೆ, ಸ್ವಾವಲಂಬನೆ, ಸಹಕಾರ, ಸಹಬಾಳ್ವೆಗಳೆಂಬ ಉದಾತ್ತ ತತ್ವಗಳನ್ನು ಹೊಂದಿ ಇತರೇ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಇತರೇ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಲಕ್ಷ್ಮೇಶ್ವರ, ಶಿರಹಟ್ಟಿ ಭಾಗದ ಜನತೆಗೆ ನನ್ನ ಕೋಟಿ ನಮನ. ಅವರ ಋಣ ತೀರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಮುಖ್ಯವಾಗಿ ಈ ಭಾಗದ ಜನರ ಮುಖ್ಯ ಬೇಡಿಕೆ ಗದಗ-ಯಲವಿಗಿ ರೇಲ್ವೆ ಮಾರ್ಗ ನಿರ್ಮಾಣಕ್ಕೆ ಮೊದಲ ಹಂತದ ₹150 ಕೋಟಿ ಮೀಸಲಿರಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕ್ಯಗೊಳ್ಳಲು ಮನವಿ ಮಾಡಿದ್ದೇನೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟೀಯ ಹೆದ್ದಾರಿಯಾಗಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ ಎಂದರು.ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆ ಎಲ್ಲರ ಮಂತ್ರವಾಗಬೇಕು. ಹಿರಿಯರನ್ನು ಗೌರವಿಸುವುದು ನಮ್ಮ ನಾಡಿನ ಸಂಪ್ರದಾಯ, ಸಂಸ್ಕಾರವಾಗಿದೆ. ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬ ಆತ್ಮ ವಿಮರ್ಶೆ ನಮ್ಮೆಲ್ಲರ ಆಧ್ಯತೆಯಾಗಬೇಕು. ಯಾವ ಸಮಾಜ ತನ್ನ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿರುತ್ತದೆಯೂ ಅದರ ಋಣ ತೀರಿಸುವ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜ ಇನ್ನಷ್ಟು ವಿಶಾಲವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಅವರು ಸಮಾಜ ಸಂಘಟನೆಯ ಜತೆಗೆ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ವೈದ್ಯರತ್ನ ಪುರಸ್ಕೃತ ಡಾ. ಶ್ರೀಕಾಂತ ಕಾಟೇವಾಲೆ, ಕಾಯಕರತ್ನ ಡಾ. ಪೂರ್ಣಾಜಿ ಖರಾಟೆ ಸೇರಿ ಹಿರಿಯರು, ರೈತರು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಪತ್ರಕರ್ತರನ್ನು ಸನ್ಮಾನಿಸಲಾಯಿತು.ಹೂವಿನಶಿಗ್ಲಿಯ ಚನ್ನವೀರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ, ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಡಿ.ಬಿ. ಬಳಿಗಾರ, ಸಣ್ಣವೀರಪ್ಪ ಹಳೆಪ್ಪನವರ, ಗುರುನಾಥ ದಾನಪ್ಪನವರ, ಎಂ.ಐ. ಮುಳಗುಂದ, ಸಿ.ಆರ್. ಲಕ್ಕುಂಡಿಮಠ, ಸಿ.ಜಿ. ಹಿರೇಮಠ, ಜಿ.ವಿ. ಪಾಟೀಲ, ಅಶೋಕ ಪಲ್ಲೇದ, ಸರೋಜಕ್ಕ ಬನ್ನೂರ, ಎನ್.ವಿ. ಹೇಮಗಿರಿಮಠ, ನಿಂಗಪ್ಪ ಬನ್ನಿ. ಸಿ.ವಿ. ಕೋಲಕಾರ, ಶಕುಂತಲಾ ಅಳಗವಾಡಿ, ಡಿ.ವೈ. ಹುನಗುಂದ, ಈರಣ್ಣ ಕಟಗಿ, ಎಸ್.ಎನ್. ಅಂಬಿಗೇರ ಸೇರಿ ಅನೇಕರು ಹಾಜರಿದ್ದರು.