ಹುಬ್ಬಳ್ಳಿ: ಬಿಜೆಪಿಯು ಕೇಂದ್ರ ಚುನಾವಣಾ ಆಯೋಗವನ್ನು ಕೈಗೊಂಬೆಯಾಗಿ ಬಳಸಿಕೊಂಡು ಮತಗಳ್ಳತನ ಮಾಡಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಸಹಿಸಂಗ್ರಹ ಅಭಿಯಾನ ಹಮ್ಮಿಕೊಂಡಿರುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಹೇಳಿದರು.
ಈಗಾಗಲೇ 1 ಕೋಟಿ ಸಹಿ ಸಂಗ್ರಹ ಅಭಿಯಾನ ಯಶಸ್ವಿಯಾಗಿದೆ. ಚುನಾವಣಾ ಆಯೋಗ ಬಿಜೆಪಿ ಅಡಿಯಾಳು ಆಗಿ ಕೆಲಸ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಮತಗಳ್ಳತನ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಚುನಾವಣೆ ಆಯೋಗ ಪ್ರಾಮಾಣಿಕವಾಗಿ ಇತ್ತು. ಬಿಜೆಪಿ ಅವಧಿಯಲ್ಲಿ ಮತಗಳ್ಳತವಾಗಿವೆ. ರಾಹುಲ್ ಗಾಂಧಿ ಇದೆಲ್ಲವನ್ನೂ ಬಯಲಿಗೆಳೆದಿದ್ದಾರೆ. ಕೇವಲ ಒಂದೇ ಕ್ಷೇತ್ರದಲ್ಲಿ ಲಕ್ಷಾಂತರ ಮತಗಳ್ಳತನವಾಗಿವೆ. ಇನ್ನು ದೇಶಾದ್ಯಂತ ಎಷ್ಟು ಆಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಮತಗಳ್ಳತನ ಕುರಿತು ರಾಹುಲ್ ಗಾಂಧಿ ಮಾಡಿದ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಮತದಾರರ ಪಟ್ಟಿ ನೀಡಲು ಮನವಿ ಮಾಡಿದರೆ ಕೊಡುತ್ತಿಲ್ಲ. ಸದ್ಯ ಎಲ್ಲವೂ ಡಿಜಿಟಲ್ ಆಗಿದ್ದು, ಎಲ್ಲಿ ಮತದಾರರ ಪಟ್ಟಿ ನೀಡಿದರೆ ತಪ್ಪಿತಸ್ಥರಾಗುತ್ತವೆಯೋ ಎಂಬ ಭಯದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ನೀಡುತ್ತಿಲ್ಲ. ಮತಗಳ್ಳತನವನ್ನು ಈಗಲೇ ತಡೆಯದಿದ್ದರೆ ಮುಂದೆ ತಡೆಯಲು ಸಾಧ್ಯವಿಲ್ಲ. ಮತ್ತೆ ಹಿಟ್ಲರ್ ಆಡಳಿತ ನೀಡುತ್ತಿರುವ ಮೋದಿ ಮುಂದುವರಿಯಲಿದ್ದಾರೆ. ಮತಗಳ್ಳತನ ಕುರಿತು ಪ್ರತಿ ಮನೆ ಮನೆಗೆ ಜಾಗೃತಿ ಮೂಡಿಸಬೇಕು. ಇದೊಂದು ದೊಡ್ಡ ಅಭಿಯಾನವಾಗಿ ಮಾರ್ಪಡಬೇಕಿದೆ. ನಾವು ಯಾವ ರಾಜ್ಯದ ಚುನಾವಣೆ ಮುಂದಿಟ್ಟುಕೊಂಡು ಈ ಅಭಿಯಾನ ಆರಂಭಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮತಗಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಈ ಬಗ್ಗೆ ಧ್ವನಿ ಎತ್ತಿದಾಗ ಯಾವುದೇ ನ್ಯಾಯ ನಮಗೆ ಸಿಗುತ್ತಿಲ್ಲ. ಚುನಾವಣಾ ಆಯೋಗ, ಸಿಬಿಐ, ಇಡಿ ಎಲ್ಲವೂ ಬಿಜೆಪಿಯ ಅಂಗ ಸಂಸ್ಥೆಗಳಂತೆ ವರ್ತಿಸುತ್ತಿವೆ. ಹೀಗಾಗಿ ಜನತಾ ನ್ಯಾಯಾಲಯದ ಮೂಲಕ ಮತಗಳ್ಳತನವನ್ನು ಬಯಲಿಗೆಳೆಯುತ್ತಿದ್ದೇವೆ. ಈ ಬಗ್ಗೆ ಚುನಾವಣಾ ಆಯೋಗವು ತನಿಖೆ ಮಾಡುವುದನ್ನು ಬಿಟ್ಟು ನೀವೆ ಅಫಿಡವಿಟ್ ನೀಡುವಂತೆ ಹೇಳುತ್ತಿದೆ. ಸಹಿ ಸಂಗ್ರಹ ಅಭಿಯಾನ ಮಾಡುವ ಮೂಲಕ ಹೋರಾಟ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಒಂದು ಕೋಟಿ ನಕಲಿ ಮತದಾರರ ಚೀಟಿ ಬಯಲಿಗೆಳೆಯುವ ಗುರಿ ಹೊಂದಲಾಗಿದೆ. ಮತಗಳ್ಳತನದಿಂದಲೇ ನನ್ನ ಕ್ಷೇತ್ರದಲ್ಲಿ ನಾನು ಕಡಿಮೆ ಮತಗಳ ಅಂತರದಿಂದ ಜಯ ಸಾಧಿಸಿದ್ದೇನೆ ಎಂದರು.ಬಳಿಕ ಬೀರಬಂದ ಓಣಿಯಲ್ಲಿರುವ ಮನೆ ಮನೆತೆ ತೆರಳಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪಾಲಿಕೆ ಪ್ರತಿಪಕ್ಷದ ನಾಯಕ ಇಮ್ರಾನ್ ಯಲಿಗಾರ, ಸದಾನಂದ ಡಂಗನವರ, ದೊರೆರಾಜ ಮಣಿಕುಂಟ್ಲಾ, ಮೋಹನ ಅಸುಂಡಿ ಸೇರಿದಂತೆ ಹಲವರಿದ್ದರು.