ಕನ್ನಡಪ್ರಭ ವಾರ್ತೆ ಮಂಡ್ಯ
ಚುನಾವಣೆ ಎಂಬುದು ಮನೋರಂಜನೆಯಲ್ಲ. ಅದು ಬದುಕು ಕಟ್ಟುವ ಪ್ರಕ್ರಿಯೆ. ಜವಾಬ್ದಾರಿಯುತವಾಗಿ ತಪ್ಪದೇ ನೈತಿಕ ಮತದಾನದ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ಕಟ್ಟಿ, ಸಮಾಜದಲ್ಲಿ ಬದುಕನ್ನು ರೂಪಿಸಿಕೊಳ್ಳಿ ಎಂದು ಹಿರಿಯ ರಂಗಕರ್ಮಿ, ನಿರ್ದೇಶಕ, ನಟ ಹಾಗೂ ಮಂಡ್ಯ ಜಿಲ್ಲಾ ಸ್ವೀಪ್ ಐಕಾನ್ ಮಂಡ್ಯ ರಮೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಶನಿವಾರ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯಿಂದ ಡಾ. ಅಂಬೇಡ್ಕರ್ ಭವನದಲ್ಲಿ ಮತದಾನದ ಮಹತ್ವ ಹಾಗೂ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನೋರಂಜನೆಗಾಗಿ ನಾವು ಬಹಳಷ್ಟು ಸಮಯವನ್ನು ಜಂಗಮವಾಣಿಯೊಂದಿಗೆ ಕಳೆಯುತ್ತೇವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಲು ಮತದಾನಕ್ಕಾಗಿ ಸಮಯ ಮೀಸಲಿಟ್ಟು, ತಪ್ಪದೇ ಮತದಾನ ಮಾಡೋಣ ಎಂದು ಹೇಳಿದರು.
ಒಂದು ಮತದಾನದಿಂದ ಯಾವ ಬದಲಾವಣೆಯಾಗುತ್ತದೆ ಎಂಬ ಆಲೋಚನೆಯನ್ನು ದೂರಮಾಡಿಕೊಳ್ಳಬೇಕು. ಬೇರೆ ಊರು, ದೇಶಗಳಿಂದ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಜನರಿದ್ದಾರೆ. ಅವರು ನಮಗೆ ನಿದರ್ಶನವಾಗಬೇಕು. ಮತದಾನ ಪವಿತ್ರವಾದ, ಜವಾಬ್ದಾರಿಯುತ ಹಾಗೂ ಆತ್ಮತೃಪ್ತಿ ನೀಡುವ ಕೆಲಸ. ಎಲ್ಲರೂ ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಸುತ್ತ ಮುತ್ತಲು ಇರುವ ಸಾರ್ವಜನಿಕರು ಹಾಗೂ ಯುವಜನರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೆರೇಪಿಸಿ ಎಂದರು.ಎಲ್ಲರೂ ತಪ್ಪದೇ ಮತದಾನ ಮಾಡಿ: ಡಾ: ಕುಮಾರ್
ದಿನನಿತ್ಯ ಸಾರ್ವಜನಿಕರಿಗೆ ಕೆಲಸವಿರುವುದು ಸಾಮಾನ್ಯ. ಏಪ್ರಿಲ್ 26 ರಂದು ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು.ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಮತದಾನ ಮಾಡುವುದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರ ಕರ್ತವ್ಯವಾಗಿದೆ. ಎಲ್ಲಾ ಮತದಾರರು ಕೂಡ ಪ್ರಜ್ಞಾವಂತ ಹಾಗೂ ಬುದ್ದಿವಂತ ಮತದಾರರಾಗಿ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು. ನಮ್ಮ ಮತ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುವ ರೀತಿಯಲ್ಲಿ ಇದ್ದು, ಪಾರದರ್ಶಕತೆ ಮತ್ತು ನೈತಿಕತೆಯಿಂದ ಮತದಾನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ನಗರಸಭೆ ಆಯುಕ್ತ ಮಂಜುನಾಥ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.