ರಾಮನಗರ: ಚುನಾವಣೆಗೆ ನಿಯೋಜಿಸಲಾದ ವೀಕ್ಷಕರು ಕೇಂದ್ರ ಚುನಾವಣಾ ಆಯೋಗದ ಕಣ್ಣು ಹಾಗೂ ಕಿವಿಗಳಂತೆ ಕೆಲಸ ಮಾಡುತ್ತಾರೆ. ಚುನಾವಣಾ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಾಲಕಾಲಕ್ಕೆ ಚುನಾವಣಾ ಆಯೋಗ ಹೊರಡಿಸುವ ಮಾರ್ಗಸೂಚಿಗಳಂತೆ ಕರ್ತವ್ಯ ನಿರ್ವಹಿಸಿ ವರದಿ ಮಾಡುವ ಕೆಲಸ ಮಾಡುತ್ತಾರೆ ಎಂದು ಚನ್ನಪಟ್ಟಣ ಉಪ ಚುನಾವಣೆಗೆ ಖರ್ಚು ವೆಚ್ಚಗಳ ವೀಕ್ಷಕರಾಗಿ ನಿಯೋಜಿಸಲಾಗಿರುವ ಐಆರ್‌ಎಸ್ ಅಧಿಕಾರಿ ಪ್ರಶಾಂತ್ ಗಡೇಕರ್ ತಿಳಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆಗಾಗಿ ಮಾಡುವ ಖರ್ಚುವೆಚ್ಚಗಳಿಗೆ ಸಂಬಂಧಿಸಿದಂತೆ ಪ್ರತಿದಿನ ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸುವಂತೆ ಸಹಾಯಕ ವೆಚ್ಚ ವೀಕ್ಷಕರು ಹಾಗೂ ಅವರ ತಂಡಕ್ಕೆ ಸೂಚಿಸಿದರು.
ಈ ಉಪ ಚುನಾವಣೆಗೆ ನಿಯೋಜಿಸಲಾದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಮುಕ್ತ ಹಾಗೂ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಚನ್ನಪಟ್ಟಣ ಉಪ ಚುನಾವಣೆಗೆ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿನೋಯ್ ಅವರು ಇದೂವರೆಗೂ ನಡೆದಿರುವ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
20ಕೆಆರ್ ಎಂಎನ್ 16.ಜೆಪಿಜಿ