ದಾಬಸ್‍ಪೇಟೆ: ಸೋಂಪುರ ಹೋಬಳಿಯ ಬರಗೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ನಾರಾಯಣಸ್ವಾಮಿ ಹಾಗೂ ಉಪಾಧ್ಯಕ್ಷೆಯಾಗಿ ಶಿವಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನನ್ನ ಮೇಲೆ ನಂಬಿಕೆಯಿಟ್ಟು ಅವಿರೋಧ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರು, ಸದಸ್ಯರು ಹಾಗೂ ಮುಖಂಡರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಈಗಾಗಲೇ ನನಗೆ ಸಹಕಾರ ಸಂಘ ಹಾಗೂ ಗ್ರಾಪಂನಲ್ಲಿ ಸೇವೆ ಸಲ್ಲಿಸಿರುವ ಅನುಭವವಿದ್ದು, ಯಾವುದೇ ಲೋಪವಾಗದಂತೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ರೈತರಿಗೆ ಸಕಾಲದಲ್ಲಿ ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಶೂನ್ಯ ಬಡ್ಡಿದರದ ಸಾಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ಟಾಭಿರಾಮಯ್ಯ ಮಾತನಾಡಿ, ಸಹಕಾರ ಸಂಘಗಳು ರೈತರ ಜೀವನಾಡಿ. ನೂತನ ಅಧ್ಯಕ್ಷರು-ಉಪಾಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿ ಸಂಘವಾಗಿ ಬೆಳೆಸಬೇಕು. ಚುನಾವಣಾ ವೆಚ್ಚ ಕಡಿಮೆ ಮಾಡುವುದಕ್ಕಾಗಿ ಅವಿರೋಧ ಆಯ್ಕೆ ಮಾಡಿದ್ದೇವೆ. ರೈತರ ಆರ್ಥಿಕ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಸಾಲ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ನಿರ್ದೇಶಕರಾದ ಪಟ್ಟಾಭಿರಾಮಯ್ಯ, ಪುಟ್ಟಗಂಗಯ್ಯ, ಶಿವರಾಮಯ್ಯ, ಗಂಗರಾಜಯ್ಯ, ತಿಮ್ಮಪ್ಪ, ಭದ್ರಮ್ಮ, ರವಿಕುಮಾರ್, ಶಿವಣ್ಣ, ಸಿಇಒ ರೂಪ, ಲೆಕ್ಕಿಗ ಶ್ರೀನಿವಾಸಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಜಗದೀಶ್ ಚೌಧರಿ, ಸಂತೋಷ್, ತಮ್ಮಯ್ಯ, ಯುವಮುಖಂಡ ಹರೀಶ್, ನಾಗರಾಜು, ಸುರೇಶ್, ರುದ್ರಣ್ಣ, ಕುಮಾರ್, ಸಿಬ್ಬಂದಿ ವರ್ಗ ಅಭಿನಂದಿಸಿ ಶುಭಕೋರಿದರು.
ಸೋಂಪುರ ಹೋಬಳಿ ಬರಗೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ಉಪಾಧ್ಯಕ್ಷೆ ಶಿವಮ್ಮ ಅವರನ್ನು ನಿರ್ದೇಶಕರು ಅಭಿನಂದಿಸಿ ಶುಭಕೋರಿದರು.