ಕನ್ನಡಪ್ರಭ ವಾರ್ತೆ ಕಡೂರು
ಸೋಮವಾರ ನಡೆದ ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯು ಕಡೂರು ತಾಲೂಕಿನಲ್ಲಿ ಬಿರುಸಿನಿಂದ ಮತದಾನ ನಡೆದು ಶಿಕ್ಷಕರ ಕ್ಷೇತ್ರಕ್ಕೆ ಶೇ.88.50 ರಷ್ಟುಮತ್ತು ಪದವೀಧರ ಕ್ಷೇತ್ರಕ್ಕೆ ಶೆ.80.86 ರಷ್ಟು ಮತದಾನ ನಡೆಯಿತು.ಕಡೂರು ಪಟ್ಟಣದ ತಾಪಂ ಕಟ್ಟಡದಲ್ಲಿ ಪದವೀಧರರಿಗೆ ಎರಡು ಮತಗಟ್ಟೆ ಹಾಗೂ ತಾಲೂಕು ಕಚೇರಿಯಲ್ಲಿ ಶಿಕ್ಷಕರ ಕ್ಷೇತ್ರದ ಮತದಾರರಿಗೂ ಎರಡು ಮತಗಟ್ಟೆ ನಿರ್ಮಾಣ ಮಾಡಲಾಗಿತ್ತು. ಪದವೀಧರ ಕ್ಷೇತ್ರದಲ್ಲಿ ಒಟ್ಟು 2,262 ಮತಗಳಿದ್ದು, ಇದರಲ್ಲಿ 1,829 ಮತಗಳು ಚಲಾವಣೆ ನಡೆದು ಶೇ 80.86 ರಷ್ಟು ಮತದಾನ ನಡೆಯಿತು. ಶಿಕ್ಷಕ ಕ್ಷೇತ್ರದಲ್ಲಿ ಒಟ್ಟು 1,122 ಮತದಾರರು ಇದ್ದು 993 ಮತಗಳು ಚಲಾವಣೆ ಆಗುವ ಮೂಲಕ ಶೇ 88.50 ರಷ್ಟು ಮತದಾನ ನಡೆಯಿತು. ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆ ನಾಲ್ಕು ಗಂಟೆವರೆಗೂ ಬಿರುಸಿನಿಂದ ನಡೆಯಿತು. ಶಿಕ್ಷಕ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಶಿಕ್ಷಕರು ಪದವೀಧರ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದರು. ಹಿಂದಿಗಿಂತಲೂ ಈ ಭಾರಿಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆಗಳಿಗೆ ರಾಜಕೀಯದ ಮೆರುಗು ಹೆಚ್ಚಾಗಿ ಪ್ರತಿಷ್ಠೆಯ ಚುನಾವಣೆ ನಡೆಯಿತು. ಮೈತ್ರಿ ಅಭ್ಯರ್ಥಿಗಳಾದ ಬಿಜೆಪಿಯ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಪರವಾಗಿ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಮತ್ತು ವೈ.ಎಸ್.ವಿ ದತ್ತ ಅವರು ತಮ್ಮ ಬೆಂಬಲಿಗರೊಂದಿಗೆ ತಾಪಂ ಮುಂಭಾಗದಲ್ಲಿ ಪದವೀಧರರು ಮತ್ತು ಶಿಕ್ಷಕರಿಗೆ ತಮ್ಮ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೋರಿದರು.ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಮತ್ತು ಶಿಕ್ಷಕರ ಕ್ಷೇತ್ರದ ಮಂಜುನಾಥ್ ಪರವಾಗಿ ಕಾಂಗ್ರೆಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಕಲ್ಲೇಶ್, ಚಂದ್ರಮೌಳಿ, ಕಂಸಾಗರ ಸೋಮಶೇಖರ್ ಮತ್ತು ಶಿಕ್ಷಕ ಮುಖಂಡರು ತಮ್ಮ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು. ಪೊಲೀಸರ ಬಿಗಿ ಬಂದೋಬಸ್ತಿನಿಂದ ಯಾವುದೇ ರೀತಿಯ ಅಹಿತಕರ ಘಟನೆಗಳಿವೆ ಅವಕಾಶ ನೀಡದಂತೆ ಶಾಂತಿಯುತ ಮತದಾನ ನಡೆದು ಚುನಾವಣೆ ತೆರೆಕಂಡಿತು.
ಮತದಾನ ಮಾಡುವಂತೆ ಶಾಸಕರಿಂದ ಮನವಿ: ಚುನಾವಣೆಗೆ ಸಂಭಂಧಿಸಿದಂತೆ ಮಾಜಿ ಶಾಸಕರಾದ ವೈ.ಎಸ್.ವಿ. ದತ್ತ ಮತ್ತು ಬೆಳ್ಳಿ ಪ್ರಕಾಶ್ ಸುದ್ದಿಗಾರರೊಂದಿಗೆ ಮಾತನಾಡಿ, ಶಾಂತಿಯುತ ಮತದಾನ ನಡೆಯುತ್ತಿದ್ದು ಕಡೂರು ತಾಲೂಕಿನಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ ಮತ್ತು ಎಸ್.ಎಲ್.ಭೋಜೇಗೌಡರ ಪರವಾದ ಅಲೆ ಹೆಚ್ಚಾಗುವ ಮೂಲಕ ಮತದಾರರು ಮತ ಚಲಾಯಿಸುತ್ತಿದ್ದು ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.