ಚುನಾವಣೆ ರೀತಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ಸುಸೂತ್ರ

KannadaprabhaNewsNetwork |  
Published : Nov 16, 2026, 01:45 AM IST
ಪರೀಕ್ಷೆ | Kannada Prabha

ಸಾರಾಂಶ

ಚುನಾವಣೆ ಮಾದರಿಯಲ್ಲಿ ಭಾರಿ ಬಿಗಿ ಭದ್ರತಾ ಕ್ರಮಗಳೊಂದಿಗೆ ಕೆಪಿಎಸ್‌ಸಿ ನಡೆಸಿದ 2026-27ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ 319 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಚುನಾವಣೆ ಮಾದರಿಯಲ್ಲಿ ಭಾರಿ ಬಿಗಿ ಭದ್ರತಾ ಕ್ರಮಗಳೊಂದಿಗೆ ಕೆಪಿಎಸ್‌ಸಿ ನಡೆಸಿದ 2026-27ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ 319 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆದಿದೆ.

ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಪ್ರವೇಶದ ವೇಳೆ ಅಭ್ಯರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಲಘು ವಾಗ್ವಾದ ಮತ್ತು ವಸ್ತ್ರಸಂಹಿತೆ ವಿಚಾರವಾಗಿ ಸಣ್ಣ ಪುಟ್ಟ ಗೊಂದಲಗಳು ಹೊರತುಪಡಿಸಿ ಯಾವುದೇ ಸಮಸ್ಯೆಗಳು ವರದಿಯಾಗಿಲ್ಲ ಎಂದು ಕೆಪಿಎಸ್ಸಿ ಮೂಲಗಳು ತಿಳಿಸಿವೆ.

ಪ್ರವೇಶ ಪತ್ರಿಕೆ ಡೌನ್‌ಲೋಡ್ ಮಾಡಿಕೊಂಡಿದ್ದ 1,14,406 ಅಭ್ಯರ್ಥಿಗಳ ಪೈಕಿ 87,817 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟಾರೆ ಶೇ.59.71ರಷ್ಟು ಹಾಜರಾತಿ ಇತ್ತು.

ರಾಜ್ಯದ 15 ಜಿಲ್ಲಾ ಕೇಂದ್ರಗಳ 345 ಉಪಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ಕೇಂದ್ರಗಳು ಹಾಗೂ ಕೊಠಡಿಗಳ ಮೇಲೆ ನಿಗಾ ಇರಿಸಲು ಸಿಸಿ ಕ್ಯಾಮೆರಾ ಅಳವಡಿಸಿರುವ ಜೊತೆ ಲೈವ್ ಮೇಲ್ವಿಚಾರಣೆ ಮಾಡಲು ಕಮಾಂಡ್ ಸೆಂಟರ್ ವ್ಯವಸ್ಥೆ ಮಾಡಲಾಗಿತ್ತು. ಕೆಪಿಎಸ್ಸಿ ಹೆಚ್ಚುವರಿ ಪರೀಕ್ಷಾ ನಿಯಂತ್ರಕ ಎಚ್. ಪ್ರಸನ್ನ ಅವರು ಸ್ವತಃ ಕಮಾಂಡ್ ಸೆಂಟರ್‌ನಲ್ಲಿದ್ದು ಮೇಲ್ವಿಚಾರಣೆ ಮಾಡಿದರು.

ವಾಗ್ವಾದ:

ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಪಾಲಿಸಬೇಕಾದ ಕ್ರಮಗಳ ಕುರಿತು ಮುಂಚಿತವಾಗಿಯೇ ತಿಳಿಸಿದ್ದರೂ, ಹಲವೆಡೆ ಅಭ್ಯರ್ಥಿಗಳು ನಿಗದಿತ ಸಮಯ ಮೀರಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಒಳಗೆ ಬಿಡುವಂತೆ ಭದ್ರತಾ ಸಿಬ್ಬಂದಿ ಬಳಿ ಮನವಿ ಮಾಡಿದರು. ಆದರೆ, ಸಮಯ ಪಾಲನೆ ನಿಯಮಗಳಿರುವ ಕಾರಣ ಒಳಗೆ ಬಿಡುವುದಿಲ್ಲ ಎಂದಾಗ ಭದ್ರಕಾ ಸಿಬ್ಬಂದಿ ಜೊತೆ ಲಘು ವಾಗ್ವಾದ ನಡೆದಿದೆ.

ಕಟ್ಟು ನಿಟ್ಟಿನ ತಪಾಸಣೆ:

ಪರೀಕ್ಷಾ ಅಕ್ರಮ ತಡೆಯಲು ಮೆಟಲ್ ಡಿಟೆಕ್ಟರ್‌ಗಳಿಂದ ವಿವರವಾಗಿ ತಪಾಸಣೆಗೆ ಒಳಪಡಿಸಲಾಯಿತು. ಅಲ್ಲದೇ ಕನ್ನಡಕ ತಪಾಸಣೆ, ಕಿವಿಯ ಒಳಭಾಗದಲ್ಲಿ ಟಾರ್ಚ್ ಹಾಕಿ ನೋಡಿ ಅಭ್ಯರ್ಥಿಗಳನ್ನು ಒಳಗೆ ಬಿಡಲಾಯಿತು. ಕೆ.ಆರ್.ಪುರದ ಖಾಸಗಿ ಕಾಲೇಜಿನಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಮಧ್ಯಾಹ್ನದ ಪತ್ರಿಕೆಯನ್ನು 10 ನಿಮಿಷ ವಿಳಂಬವಾಗಿ ನೀಡಲಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಯುಪಿಎಸ್‌ಸಿಯಂತೆ ಪತ್ರಿಕೆ ಎಂದ ಅಭ್ಯರ್ಥಿಗಳು

ಈ ಬಾರಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಶಿಸ್ತುಬದ್ಧವಾಗಿ, ಚೆನ್ನಾಗಿ ರೂಪಿಸಲಾಗಿದೆ. ಪತ್ರಿಕೆಯು ಯುಪಿಎಸ್‌ಸಿ ಮಾದರಿಯಲ್ಲಿತ್ತು. ಯಾವುದೇ ತೊಂದರೆ ಆಗಿಲ್ಲ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ಅನುಭವ ಹಂಚಿಕೊಂಡರು. ಈ ಹಿಂದೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಅನೇಕ ಲೋಪ ದೋಷಗಳು ಇದ್ದ ಕಾರಣ ಅಭ್ಯರ್ಥಿಗಳ ಆಗ್ರಹದ ಮೇರೆಗೆ ಮರುಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಹೆಚ್ಚು ಎಚ್ಚರ ವಹಿಸಿದ ಕಾರಣ ಲೋಪ ದೋಷಗಳಾಗಿಲ್ಲ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.ಪ್ಲಾಸ್ಟಿಕ್‌ ಕವರ್‌ನಲ್ಲಿ ಪ್ಯಾಕಿಂಗ್

ಅಭ್ಯರ್ಥಿಗಳಿಗೆ ನೀಡುವ ಪ್ರಶ್ನೆ ಪತ್ರಿಕೆಯ ಪ್ರತಿ ಬಂಡಲ್ ಅನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ವ್ಯವಸ್ಥಿತವಾಗಿ ಪ್ಯಾಕಿಂಗ್ ಮಾಡಲಾಗಿತ್ತು. ಅಭ್ಯರ್ಥಿಗಳು ಕವರ್ ಮತ್ತು ಸೀಲ್ ತೆಗೆದು ಓಪನ್ ಮಾಡಬೇಕಾಗಿತ್ತು. ಪತ್ರಿಕೆ 1ರ ಪ್ರಶ್ನೆಪತ್ರಿಯಲ್ಲಿ ಒಟ್ಟು 87 ಪುಟಗಳಿದ್ದವು. ಓದಿಕೊಳ್ಳುವುದರಲ್ಲೇ ಸುಸ್ತಾಗುವಂತಿತ್ತು ಎಂದು ಅಭ್ಯರ್ಥಿಗಳು ಹೇಳಿದ್ದಾರೆ. ಬನಿಯನ್‌ನಲ್ಲೇ ಪರೀಕ್ಷೆ ಬರೆದ ಅಭ್ಯರ್ಥಿ:

ಇನ್ನು ತುಂಬು ತೋಳಿನ ಅಂಗಿ ಧರಿಸಿ ಬಂದಿದ್ದ ಅಭ್ಯರ್ಥಿಗಳ ಅಂಗಿಯ ತೋಳುಗಳನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯೇ ಕತ್ತರಿಯಿಂದ ಕತ್ತರಿಸಿ ಒಳಗೆ ಬಿಟ್ಟಿರುವ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ. ಮಲ್ಲೇಶ್ವರ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರು ಅಂಗಿಯ ತೋಳು ಕತ್ತರಿಸುವುದು ಬೇಡವೆಂದು, ಅಂಗಿ ಬಿಚ್ಚಿಟ್ಟು ಬನಿಯನ್ ಮೇಲೆ ಪರೀಕ್ಷಾ ಕೊಠಡಿಗೆ ತೆರಳಿ ಪರೀಕ್ಷೆ ಬರೆದಿದ್ದಾರೆ.

ಜೀನ್ಸ್‌ ಧರಿಸಿ ಬಂದವರಿಗೆ ಪರೀಕ್ಷೆಗೆ ನೋ ಎಂಟ್ರಿ!

ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್‌ ಪ್ರೊಬೇಷನರ್ಸ್‌ ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಗಾಗಿ ಭಾನುವಾರ ರಾಜ್ಯಾದ್ಯಂತ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಸುಸೂತ್ರವಾಗಿ ನಡೆಯಿತು.ಈ ಮಧ್ಯೆ, ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಕೆಲವರು ಜೀನ್ಸ್‌ ಪ್ಯಾಂಟ್‌ ಧರಿಸಿ ಬಂದಿದ್ದರು. ಇವರಿಗೆ ಪರೀಕ್ಷಾ ಕೇಂದ್ರದೊಳಕ್ಕೆ ಹೋಗಲು ಪೊಲೀಸರು ಅವಕಾಶ ನೀಡಲಿಲ್ಲ. ಕೆಲವರು ಮಾರ್ಕೆಟ್‌ ಸುತ್ತಾಡಿ ಬೇರೆ ಪ್ಯಾಂಟ್‌ ಖರೀದಿಗೆ ಯತ್ನಿಸಿದರಾದರೂ ಬಟ್ಟೆ ಮಳಿಗೆಗಳು ತೆರೆದಿರಲಿಲ್ಲ. ಹೀಗಾಗಿ, ಇವರೆಲ್ಲಾ ಬೆಳಗ್ಗೆ 8 ಗಂಟೆಗೇ ಬಂದಿದ್ದರಾದರೂ, 9.30ರವರೆಗೂ ಕೇಂದ್ರದೊಳಕ್ಕೆ ಬಿಡಲಿಲ್ಲ. ಬಳಿಕ, ಅವರನ್ನೆಲ್ಲಾ 2-3 ಬಾರಿ ತಪಾಸಣೆಗೊಳಪಡಿಸಿ, ಒಳಗೆ ಬಿಡಲಾಯಿತು. ಈ ಮಧ್ಯೆ, ಮಹಿಳಾ ಅಭ್ಯರ್ಥಿಯೊಬ್ಬರು ಬಂಧುಗಳ ಮನೆಗೆ ಹೋಗಿ, ಬೇರೆ ಪ್ಯಾಂಟ್‌ ಧರಿಸಿ ಬಂದ ಘಟನೆಯೂ ನಡೆಯಿತು. ಕಲಬುರಗಿಯ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಕೆಎಎಸ್‌ ಪರೀಕ್ಷಾ ಹಾಲ್‌ ಟಿಕೆಟ್‌ ಬದಲು ವಿಲೇಜ್‌ ಅಕೌಂಟೆಂಟ್‌ ಪರೀಕ್ಷಾ ಹಾಲ್‌ ಟಿಕೆಟ್‌ ತಂದಿದ್ದರು. ಬಳಿಕ, ಮತ್ತೆ ಮನೆಗೆ ತೆರಳಿ, ಕೆಎಎಸ್‌ ಪರೀಕ್ಷಾ ಹಾಲ್‌ ಟಿಕೆಟ್‌ ತಂದು ಪರೀಕ್ಷೆ ಬರೆದರು. ಧಾರವಾಡದಲ್ಲಿ ಅಭ್ಯರ್ಥಿಯೊಬ್ಬರು ಫುಲ್‌ ಶರ್ಟ್‌ ಧರಿಸಿ ಬಂದಿದ್ದಕ್ಕೆ ಪ್ರವೇಶ ನಿರಾಕರಿಸಲಾಯಿತು. ಬಳಿಕ, ಅವರು ಹಾಫ್‌ ಶರ್ಟ್‌ ಧರಿಸಿ ಬಂದು ಪರೀಕ್ಷೆ ಬರೆದರು. ರಾಯಚೂರಲ್ಲಿ ಸ್ಥಳೀಯ ಕೆಇಬಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆಯಿತು. ಕೂಡಲೇ ವೈದ್ಯರನ್ನು ಪರೀಕ್ಷಾ ಕೇಂದ್ರಕ್ಕೆ ಕರೆಸಿ, ಚಿಕಿತ್ಸೆ ನೀಡಲಾಯಿತು. ಚೇತರಿಸಿಕೊಂಡ ಬಳಿಕ, ಅವರು ಪರೀಕ್ಷೆ ಬರೆದರು. ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಮೈದಾನದ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಅಂಧ ಅಣ್ಣ-ತಂಗಿ ಬಂದಿದ್ದು ವಿಶೇಷವಾಗಿತ್ತು. ದಾವಣಗೆರೆಯ ಪಿ.ಸುನಿಲ್‌, ಪಿ.ಅಶ್ವಿನಿ ಅಣ್ಣ-ತಂಗಿ ಆಗಮಿಸಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ