ಶಿವಾನಂದ ಗೊಂಬಿ
ಹುಬ್ಬಳ್ಳಿ: ಎಪಿಎಂಸಿಗಳ ಅವಧಿ ಪೂರ್ಣಗೊಂಡು 3 ವರ್ಷವಾದರೂ ಚುನಾವಣೆ ನಡೆಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಎಂಟು ವರ್ಷದಿಂದ ಚುನಾವಣೆ ನಡೆಸದ ಜಿಪಂ, ತಾಪಂಗಳ ಸಾಲಿಗೆ ಎಪಿಎಂಸಿಯೂ ಸೇರಿದಂತಾಗಿದೆ.ರೈತರ ಶ್ರೇಯೋಭಿವೃದ್ಧಿಗಾಗಿ, ಎಪಿಎಂಸಿಗಳಲ್ಲಿ ಸರಿಯಾಗಿ ಸೌಲಭ್ಯ ದೊರೆಯುವಂತಾಗಲಿ, ರೈತರಿಗೆ ಮೋಸ ಆಗದಂತಾಗಿರಲಿ ಎಂಬ ಉದ್ದೇಶದಿಂದ ಎಪಿಎಂಸಿಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಮಾಡಲಾಗುತ್ತದೆ. ಆಡಳಿತ ಮಂಡಳಿಗಳು ಸರ್ಕಾರ ಮತ್ತು ರೈತರ ಮಧ್ಯೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತವೆ..
ಪ್ರತಿ ಎಪಿಎಂಸಿಗಳಲ್ಲಿ 11 ರೈತ ಕ್ಷೇತ್ರ, ವರ್ತಕರು, ಸಹಕಾರ ಮಾರಾಟ ಸಂಘ, ಸಹಕಾರ ಸಂಸ್ಕರಣಾ ಸಂಘ ಈ ಮೂರು ಕ್ಷೇತ್ರಗಳಿಂದ ತಲಾ ಒಂದು ಹೀಗೆ 14 ಕ್ಷೇತ್ರಗಳಿಗೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಈ ಚುನಾವಣೆ ಮುಗಿದು ಸದಸ್ಯರು ಆಯ್ಕೆಯಾದ ಬಳಿಕ ಮೂವರನ್ನು ನಾಮನಿರ್ದೇಶಿತ ಹಾಗೂ 1 ಅಧಿಕಾರಿ ವರ್ಗವನ್ನು ಸರ್ಕಾರ ನೇಮಿಸುತ್ತದೆ. ಎಲ್ಲ ಸೇರಿ 18 ಸದಸ್ಯರು ಇರುತ್ತಾರೆ.ಏನಾಗಿದೆ ಈಗ?: ಆಯಾ ತಾಲೂಕು ವ್ಯಾಪ್ತಿಯಲ್ಲಿನ ರೈತರೇ ಎಪಿಎಂಸಿಗಳ ಮತದಾರರಾಗಿರುತ್ತಾರೆ. ಆ ಎಪಿಎಂಸಿಗಳಲ್ಲಿನ ವರ್ತಕರು, ಸಂಸ್ಕರಣಾ ಘಟಕ, ಸಹಕಾರ ಮಾರಾಟ ಮಂಡಳಿಯಲ್ಲಿನ ಸದಸ್ಯರು ಮತದಾರರಾಗಿರುತ್ತಾರೆ. ರಾಜ್ಯದಲ್ಲಿ ಬರೊಬ್ಬರಿ 162 ಎಪಿಎಂಸಿಗಳಿವೆ. ಈ ಎಲ್ಲ ಎಪಿಎಂಸಿಗಳಲ್ಲಿ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡು 2022ಕ್ಕೆ ಮುಕ್ತಾಯಗೊಂಡಿದೆ. ಹೀಗಾಗಿ ಬರೋಬ್ಬರಿ 3 ವರ್ಷವೇ ಆಗಿದೆ. ಆದರೆ, ಈವರೆಗೂ ಸರ್ಕಾರ ಚುನಾವಣೆ ನಡೆಸುವ ಬಗ್ಗೆ ಚಕಾರ ಎತ್ತುತ್ತಲೇ ಇಲ್ಲ.
ಹಲವು ಬಾರಿ ಮನವಿ:ರೈತರಿಗೆ ಏನಾದರೂ ಸಮಸ್ಯೆಯಾದರೆ, ದರ ನಿಗದಿಯಲ್ಲಿ ಹೆಚ್ಚು ಕಡಿಮೆಯಾದರೆ, ದಲ್ಲಾಳಿಗಳಿಂದ ಮೋಸವಾದರೆ ಈ ಚುನಾಯಿತ ಆಡಳಿತ ಮಂಡಳಿ ಬಗೆಹರಿಸುತ್ತದೆ. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಿ ಎಪಿಎಂಸಿಗಳಲ್ಲಿ ಕೈಗೊಳ್ಳಬೇಕಿರುವ ಸೌಲಭ್ಯಗಳ ಬಗ್ಗೆ ನಿರ್ಧರಿಸುತ್ತದೆ. ಆದರೆ, 3 ವರ್ಷವಾದರೂ ಚುನಾವಣೆ ನಡೆಸದ ಕಾರಣ ರೈತರು ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ. ರೈತರು ಮತ್ತು ಸರ್ಕಾರದ ಮಧ್ಯೆ ಸಂಪರ್ಕ ಕೊಂಡಿಯಂತಿರುವ ಚುನಾಯಿತ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ಎಂದು ಸರ್ಕಾರಕ್ಕೆ ರೈತರು, ವರ್ತಕರು ಹಲವು ಬಾರಿ ಮನವಿ ಸಲ್ಲಿಸಿರುವುದುಂಟು. ಆದರೆ, ಸರ್ಕಾರ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ರೈತ ವರ್ಗದ್ದು. ಇದೀಗ ಎಪಿಎಂಸಿಗಳಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಅಧಿಕಾರಿ ವರ್ಗದ್ದೇ ದರಬಾರು ಎಂಬಂತಾಗಿದೆ.
ಜಿಪಂ, ತಾಪಂ, ಸ್ಥಳೀಯ ಸಂಸ್ಥೆಗಳಲ್ಲಿನ ಪಟ್ಟಣ ಮಾರಾಟ ಪ್ರತಿನಿಧಿಗಳ ಚುನಾವಣೆಗಳಂತೆ ಎಪಿಎಂಸಿ ಚುನಾವಣೆಯನ್ನೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಅಧಿಕಾರ ವಿಕೇಂದ್ರೀಕರಣ ಇರಬೇಕೆನ್ನುವ ಸರ್ಕಾರಗಳೇ ಈ ರೀತಿ ಸಂಸ್ಥೆಗಳ ಚುನಾವಣೆ ನಡೆಸದೇ ಹಾಳು ಮಾಡುತ್ತಿವೆ. ಈ ರೀತಿ ಮಾಡುವುದರಿಂದ ಅಧಿಕಾರ ವಿಕೇಂದ್ರೀಕರಣವಾಗುತ್ತದೆಯೇ? ಎಂಬ ಪ್ರಶ್ನೆ ರೈತರದ್ದು.ಇನ್ನಾದರೂ ಸರ್ಕಾರ ಎಪಿಎಂಸಿಗಳಲ್ಲಿನ ಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕೋರ್ಟ್ ಮೊರೆ ಹೋಗಬೇಕಾದೀತು ಎಂಬ ಎಚ್ಚರಿಕೆಯನ್ನು ರೈತರು ನೀಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೇ ಚುನಾವಣೆ ನಡೆಸಲು ಮುಂದಾಗಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.
ಜಿಪಂ, ತಾಪಂ ಚುನಾವಣೆಯನ್ನು ಜನರೇ ಮರೆತಂತಾಗಿದೆ. ಇದೀಗ ಎಪಿಎಂಸಿಗಳ ಕಥೆಯನ್ನೂ ಅದೇ ರೀತಿ ಮಾಡಲು ಸರ್ಕಾರ ಮುಂದಾಗಿದೆ ಎಂದೆನಿಸುತ್ತಿದೆ. ಅವಧಿ ಮುಗಿದು 3 ವರ್ಷ ಆಗಿದೆ. ಈವರೆಗೂ ಚುನಾವಣೆ ನಡೆಸುವ ಗೋಜಿಗೆ ಸರ್ಕಾರ ಹೋಗುತ್ತಿಲ್ಲ. ಮಾತೆತ್ತಿದರೆ ಅಧಿಕಾರ ವಿಕೇಂದ್ರೀಕರಣ ಎಂದು ಹೇಳುತ್ತಾರೆ. ಇದೇನಾ ಅಧಿಕಾರ ವಿಕೇಂದ್ರೀಕರಣ ಎಂದರೆ? ಎಂದು ಸುಳ್ಳ ರೈತ ಕಲ್ಮೇಶ ಹುಲ್ಜತ್ತಿ ಪ್ರಶ್ನಿಸಿದರು.