ಎಚ್.ಜಿ.ರವಿಕುಮಾರ್
ಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದ ಪುರಸಭೆ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸೆ.9 ರಂದು ಚುನಾವಣೆ ನಡೆಯಲಿದೆ. ಅಧಿಕಾರದ ಗದ್ದುಗೆ ಹಿಡಿಯಲು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಹುಮತ ಹೊಂದಿದ್ದ ಜೆಡಿಎಸ್ ಪಕ್ಷದ 10ನೇ ವಾರ್ಡ್ ಸದಸ್ಯ ಸುರೇಶ್ ಕುಮಾರ್ ಅಧ್ಯಕ್ಷರಾಗಿ, 12ನೇ ವಾರ್ಡ್‌ನ ಸುಮಿತ್ರ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.ಪುರಸಭೆ 23 ಸದಸ್ಯರ ಪೈಕಿ ಜೆಡಿಎಸ್ 12, ಕಾಂಗ್ರೆಸ್ 4, ಬಿಜೆಪಿ 1 ಹಾಗೂ 6 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ 9 ನೇ ವಾರ್ಡ್‌ನ ಶೋಭಾರಾಣಿ, ಉಪಾಧ್ಯಕ್ಷ ಸ್ಥಾನಕ್ಕೆ 16 ನೇ ವಾರ್ಡ್ ವನಿತಾ, ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ 5 ನೇ ವಾರ್ಡ್ ನ ಕೋಕಿಲ ಅರುಣ್, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ 13 ನೇ ವಾರ್ಡ್‌ನ ಸಿದ್ದರಾಜು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.ಜೆಡಿಎಸ್ ಹಾಗೂ ಕಾಂಗ್ರೆಸ್ 2 ಪಕ್ಷಗಳು ಪುರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪೈಪೋಟಿ ನಡೆಸುತ್ತಿವೆ. ಈಗಾಗಲೇ ಜೆಡಿಎಸ್ ಇಬ್ಬರು ಸದಸ್ಯರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್‌ನ ಓರ್ವ ಸದಸ್ಯ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಚುನಾವಣೆ ವೇಳೆಗೆ ಯಾರು ಯಾವ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಪುರಸಭೆ ಅಧಿಕಾರವನ್ನು ಕೈ ವಶಕ್ಕೆ ತೆಗೆದುಕೊಳ್ಳಲು ಶಾಸಕ ಕೆ.ಎಂ.ಉದಯ್ ತೀವ್ರ ಆಸಕ್ತಿ ವಹಿಸಿದ್ದಾರೆ. ಕೇವಲ 4 ಸ್ಥಾನವಿರುವ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಬಹುಮತ ಹೊಂದಿದ್ದರೂ 6 ಪಕ್ಷೇತರ ಸದಸ್ಯರ ತೀರ್ಮಾನವೇ ಅಂತಿಮವಾಗಿದೆ.ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ 14 ತಿಂಗಳು ಮಾತ್ರ. ಜೆಡಿಎಸ್ ನಿಂದ ಗೆದ್ದಿರುವ ಕೆಲ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇದ್ದು ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂಬುದು ಸಾರ್ವಜನಿಕರ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್‌ಗೆ ಮೂವರು ಜೆಡಿಎಸ್ ಸದಸ್ಯರ ಬೆಂಬಲ?
ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಇಬ್ಬರು ಸದಸ್ಯರು ಈಗಾಗಲೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತೊರ್ವ ಸದಸ್ಯೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ಸಾಧ್ಯತೆ ಇದ್ದು ಇದರಿಂದ ಪುರಸಭೆಯಲ್ಲಿ ಕಾಂಗ್ರೆಸ್ ಬಲ 7 ಕ್ಕೆ ಏರಿದೆ. ಜೆಡಿಎಸ್ ವರಿಷ್ಠರು ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯೆ ಪ್ರಿಯಾಂಕರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದರು. ಇದಕ್ಕೆ ಜೆಡಿಎಸ್‌ನಲ್ಲೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಶೋಭಾರಾಣಿ ಅವರನ್ನು ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಶಾಸಕ ಕೆ.ಎಂ.ಉದಯ್ ಅಸಮಧಾನಗೊಂಡಿರುವ ಕೆಲ ಜೆಡಿಎಸ್ ಮತ್ತು ಪಕ್ಷೇತರರ ಸದಸ್ಯರನ್ನು ಸೆಳೆದು ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿಸಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಪಟ್ಟಣದ ಅಭಿವೃದ್ಧಿಗಾಗಿ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಬೆಂಬಲಿಸುವಂತೆ ಬಹಿರಂಗವಾಗಿಯೇ ಶಾಸಕರು ಹೇಳಿಕೆ ನೀಡಿರುವುದರಿಂದ ಕಾಂಗ್ರೆಸ್ ನ ಕೋಕಿಲ ಅರುಣ್ ಅವರನ್ನು ಅಧ್ಯಕ್ಷ ಸ್ಥಾನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಇತರ ಸದಸ್ಯರು ಬೆಂಬಲ ನೀಡುವಂತೆ ಕೋರಿದ್ದಾರೆ.
ಸಂಜೆ ಮತದಾನ ಪ್ರಕ್ರಿಯೆಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಕೆ, 2 ರಿಂದ ಸಂಜೆ 4 ಗಂಟೆವರೆಗೆ ನಾಮಪತ್ರಗಳ ಪರಿಶೀಲನೆ, 4 ಗಂಟೆಯಿಂದ ಚುನಾವಣಾ ಪ್ರಕಿಯೆ ನಡೆಯಲಿದೆ. ಸಂಜೆ 4.10 ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಸಂಜೆ 4.11 ರಿಂದ ಮತದಾನ ಪ್ರಕ್ರಿಯೆ ನಡೆಯಲಿದೆ. ಉಪ ವಿಭಾಗಧಿಕಾರಿ ಶಿವಮೂರ್ತಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.