ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದು ಚುನಾವಣೆಯಲ್ಲಿ ಸಾಬೀತು: ಕಿಶೋರ್ ಕುಮಾರ್

KannadaprabhaNewsNetwork | Published : Jun 8, 2024 12:34 AM

ಸಾರಾಂಶ

ಡಾ. ಧನಂಜಯ ಸರ್ಜಿ ಮತ್ತು ಎಸ್.ಎಲ್.ಭೋಜೇಗೌಡ ಅವರ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ವಿಜಯೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಂದೇಶವನ್ನು ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಸಾಬೀತು ಪಡಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ. ಅವರು ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಡಾ. ಧನಂಜಯ ಸರ್ಜಿ ಮತ್ತು ಎಸ್.ಎಲ್.ಭೋಜೇಗೌಡ ಅವರ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಪಕ್ಷದ ತತ್ವಕ್ಕೆ ವಿರುದ್ಧ ನಿಂತವರಿಗೆ ಏನಾಗುತ್ತದೆ ಎಂಬುದು ಈ ಬಾರಿಯ ಚುನಾವಣೆ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ವಿರುದ್ಧ ಕೆಲಸ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆ ಎಂದರು.

ಉಡುಪಿಯ ಮಾಜಿ ಸಚಿವ ರಘುಪತಿ ಭಟ್ ಅವರು ಬಂಡಾಯವಾಗಿ ಸ್ಪರ್ಧಿಸಿದ್ದರು. ಅಭ್ಯರ್ಥಿಯಾಗುವುದಕ್ಕೆ ಆಸೆ, ಆಕಾಂಕ್ಷೆಗಳು ಸಹಜ‌. ಆದರೆ ಪಕ್ಷವು ಒಬ್ಬ ಅಭ್ಯರ್ಥಿ ಆಯ್ಕೆ ಮಾಡಿದ ಬಳಿಕ ಅವರನ್ನು ಬೆಂಬಲಿಸುವುದು ಪಕ್ಷ ನಿಷ್ಠೆ ಮತ್ತು ಧರ್ಮ ಎಂದೆನಿಸುತ್ತದೆ. ಈ ನಿಟ್ಟಿನಲ್ಲಿ ರಘುಪತಿ ಭಟ್ಟರ ಅಭಿಮಾನಿ ಕಾರ್ಯಕರ್ತರೂ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸಿ ಗೆಲುವು ತಂದುಕೊಟ್ಟಿದ್ದಾರೆ ಎಂದವರು ಹೇಳಿದರು.

ಸಾಲುಸಾಲು ಚುನಾವಣೆಗಳಿರುವುದರಿಂದ ಬಿಜೆಪಿಗೆ ಇದು ಸವಾಲಿನ ವರ್ಷವಾಗಿದೆ. ಆದರೆ ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಈ ಸವಾಲಿನ ವರ್ಷವನ್ನು ಗೆಲುವಿನ ಪರ್ವವನ್ನಾಗಿ ಮಾಡಿದೆ ಎಂದವರು ಹೇಳಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಎಷ್ಟೇ ಪ್ರಭಾವಿಗಳಾದರೂ ಗೆಲ್ಲುವುದಕ್ಕೆ ಪಕ್ಷದ ಆಸರೆ ಅತ್ಯಗತ್ಯ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

ಸಂಭ್ರಮಾಚರಣೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ್‌ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ದಿನೇಶ್ ಅಮೀನ್, ಶ್ರೀಕಾಂತ್ ನಾಯಕ್, ಶಿವಕುಮಾರ್ ಅಂಬಲಪಾಡಿ, ವಿಜಯ ಕುಮಾರ್ ಉದ್ಯಾವರ, ಸಂಧ್ಯಾ ರಮೇಶ್, ವೀಣಾ ಎಸ್. ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

Share this article