-ಮುಂಜಾಗ್ರತೆ ವಹಿಸಬೇಕಾದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಸಾರ್ವಜನಿಕರ ಆಕ್ರೋಶ
------ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ನ್ಯಾಯಾಲಯದ ಎದುರಿಗೆ ಸಾರ್ವಜನಿಕ ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕ ಹೊಂದಿರುವ ಕಂಬ ಬಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಇದೇ ರಸ್ತೆಯಲ್ಲಿ ನಿತ್ಯ ಓಡಾಡುವ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಭೀತಿ ಶುರುವಾಗಿದೆ. ಅಲ್ಲದೇ ನ್ಯಾಯಾಲಯಕ್ಕೆ ಬರುವ ಜನರು ರಸ್ತೆಯಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ.ಬೆಳಿಗ್ಗೆ, ಸಂಜೆ ವಾಯು ವಿಹಾರಕ್ಕೆ ತೆರಳುವ ಬಡಾವಣೆಯ ನಿವಾಸಿಗಳು ಮತ್ತು ಕೋರ್ಟಿಗೆ ಬರುವ ಜನರು ಈ ರಸ್ತೆಯಲ್ಲೇ ಓಡಾಡುತ್ತಾರೆ. ಹೆಚ್ಚು ವಾಹನ ಸಂಚಾರ ಇರುವ ರಸ್ತೆಗೆ ತಾಗಿಸಿ 11 ಕೆ.ವಿ. ವಿದ್ಯುತ್ ಕಂಬ ಮತ್ತು ಪರಿವರ್ತಕವನ್ನು ಅಳವಡಿಸಿದ್ದಾರೆ.
ಅವೈಜ್ಞಾನಿಕವಾಗಿ ಅಳವಡಿಸಿರುವ ಈ ಪರಿವರ್ತಕದ ಪಕ್ಕದಲ್ಲೇ ಶಾಲಾ ಬಸ್, ಲಾರಿ, ಕಾರು, ಆಟೋ, ಸೇರಿದಂತೆ ಅನೇಕ ವಾಹನಗಳ ಸಂಚಾರ ದಟ್ಟವಾಗಿದೆ. ವಿದ್ಯುತ್ ಪರಿವರ್ತಕದ ಬಳಿ ಅಪಾಯದ ಬಗ್ಗೆ ಮುಂಜಾಗ್ರತೆ ವಹಿಸಬೇಕಾದ ಜೆಸ್ಕಾಂ ಅಧಿಕಾರಿಗಳು ಅಪಾಯ ಸ್ಥಿತಿಯಲ್ಲಿರುವುದನ್ನು ಕೂಡಲೇ ದುರಸ್ತಿಗೊಳಿಸದೆ ನಿರ್ಲಕ್ಷ ವಹಿಸಿರುವುದು ನ್ಯಾಯಾಲಯ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.ಅಪಾಯ ಸ್ಥಿತಿಯಲ್ಲಿರುವ ವಿದ್ಯುತ್ ಪರಿವರ್ತಕದ ಕಂಬದ ದುರಸ್ತಿಗೆ ಸಾಕಷ್ಟು ಸಲ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸೌಜನ್ಯಕ್ಕಾದರೂ ಇತ್ತ ತಿರುಗಿ ನೋಡಿಲ್ಲ ಎನ್ನುತ್ತಾರೆ ಬಡಾವಣೆ ನಿವಾಸಿ ಅಮರೇಶ್.
-.......ಕೋಟ್ -1...... ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸ್ಥಿತಿಯಲ್ಲಿರುವ ವಿದ್ಯುತ್ ಪರಿವರ್ತಕ ಅಳವಡಿಸಿರುವ ಕಂಬ ಬಾಗಿ ನಿಂತಿದ್ದು, ತಕ್ಷಣ ದುರಸ್ತಿ ಮಾಡದಿದ್ದರೆ ಕಾನೂನು ಸೇವಾ ಸಮಿತಿಗೆ ದೂರು ಸಲ್ಲಿಸಬೇಕಾಗುತ್ತದೆ.
- ಬಸವರಾಜ್ ಭಜಂತ್ರಿ, ಜಿಲ್ಲಾಧ್ಯಕ್ಷರು, ಅಖಿಲ ಕರ್ನಾಟಕ ಕುಳುವ ಮಹಾಸಂಘ ಶಹಾಪುರ.----
ಫೋಟೋ: ಶಹಾಪುರ ನಗರದ ನ್ಯಾಯಾಲಯದ ಆವರಣದ ಮುಂಭಾಗದಲ್ಲಿರುವ ವಿದ್ಯುತ್ ಪರಿವರ್ತಕ ಅಳವಡಿಸಿರುವ ಕಂಬ ಬಾಗಿ ನಿಂತಿರುವುದು.27ವೈಡಿಆರ್1