ಕನ್ನಡಪ್ರಭ ವಾರ್ತೆ ವಿಜಯಪುರ
ಮೊದಲಿಗೆ ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಂಕೇತಿಕವಾಗಿ ಮೆರವಣಿಗೆ ನಡೆಸಿ ತಾಜ್ ಬಾವಡಿ ಬಳಿಯ ಕೃತಕ ಹೊಂಡದಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು.
ವಿಸರ್ಜನೆ ಮುನ್ನ ಪೂಜೆ ನೆರವೇರಿಸಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಗಣೇಶ ಹಬ್ಬದ ಸಂದರ್ಭದಲ್ಲಿ ವಿದ್ಯುತ್ ಅವಘಢ ಸಂಭವಿಸಿರುವುದು ನೋವು ತರಿಸಿದೆ. ಭಗವಂತ ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಗಣೇಶನಲ್ಲಿ ಪ್ರಾರ್ಥಿಸುವೆ ಎಂದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮೊನ್ನೆ ನಡೆದ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಘಟನೆಗಳು ಯಾವತ್ತೂ ನಡೆಯಬಾರದು. ಎಲ್ಲರಿಗೂ ಒಳಿತಾಗಲಿ ಎಂದು ವಿಘ್ನನಿವಾರಕನಲ್ಲಿ ಪ್ರಾರ್ಥಿಸುವೆ ಎಂದರು.
ಸರ್ಕಾರ ಕೂಡಲೇ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಘಟನೆಯಲ್ಲಿ ಗಾಯಗೊಂಡವರಿಗೂ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದರು. ಗಜಾನನ ಮಹಾ ಮಂಡಳದಿಂದ ಮೃತ ಕುಟುಂಬಕ್ಕೆ ನೆರವಾಗುವುದಾಗಿ ತಿಳಿಸಿದ ಅವರು, ಅಸುನೀಗಿದ ಶುಭಂ ಗಾಯಕವಾಡ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಣೆ ಮಾಡಲಾಯಿತು.ಗಜಾನನ ಮಹಾಮಂಡಳ ಅಧ್ಯಕ್ಷ ರಾಜು ಹುನ್ನೂರ, ಪ್ರಮುಖರಾದ ಸಂಜೀವ ಐಹೊಳಿ, ಗೋಪಾಲ ಘಟಕಾಂಬಳೆ, ಸಂದೀಪ ಪಾಟೀಲ, ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ಸಿದ್ಧು ಮಲ್ಲಿಕಾರ್ಜುನಮಠ, ಅಪ್ಪು ಸಜ್ಜನ, ರಾಜು ಬಿರಾದಾರ, ಬಸವರಾಜ ಹಳ್ಳಿ, ರಾಜೇಂದ್ರ ವಾಲಿ, ಮಳುಗೌಡ ಪಾಟೀಲ, ವಿಜಯ ಜೋಶಿ ಪಾಲ್ಗೊಂಡಿದ್ದರು.