ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಜಿಲ್ಲಾ ಮಟ್ಟದ ಸಭೆಕನ್ನಡಪ್ರಭ ವಾರ್ತೆ ಹಳಿಯಾಳ
ಒಂದು ಕಾಲದಲ್ಲಿ ಸ್ಥಿತಿವಂತರಿಗೆ ಮಾತ್ರ ಎಟಕುಬಹುದಾದ ವಿದ್ಯುತ್ ಸೌಲಭ್ಯಗಳನ್ನು ಇಂದು ಸರ್ಕಾರ ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬ ಬಡವರ ಮನೆಗಳಿಗೂ ದೊರಕಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಭಾನುವಾರ ಹಳಿಯಾಳ ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಆಯೋಜಿಸಿದ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಜಿಲ್ಲಾ ಮಟ್ಟದ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ-2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯುತ್ ಬೇಡಿಕೆ ಅವಲಂಬನೆ ಹೆಚ್ಚಾಗಿದೆ:ರಾಜ್ಯದಲ್ಲಿ ದಿನೇ ದಿನೇ ವಿದ್ಯುತ್ ಗ್ರಾಹಕರ ಸಂಖ್ಯೆ, ವಿದ್ಯುತ್ ಬೇಡಿಕೆಯು ಹೆಚ್ಚುತ್ತಿದೆ, ಒಂದರ್ಥದಲ್ಲಿ ಇಂದು ವಿದ್ಯುತ್ ಅವಲಂಬನೆಯ ಪ್ರಮಾಣ ಹೆಚ್ಚಾಗಿದೆ ಎಂದರು.
ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿಯ ಸದುಪಯೋಗವನ್ನು ರಾಜ್ಯದ ಬಹುಪಾಲು ಜನರು ಪಡೆಯುತ್ತಿದ್ದಾರೆ. ಹಳಿಯಾಳ ಕ್ಷೇತ್ರದಲ್ಲಿನ 76 ವಿದ್ಯುತ್ ಗ್ರಾಹಕರಲ್ಲಿ 460 ಗ್ರಾಹಕರು ಮಾತ್ರ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ ಎಂದರು.ವಿದ್ಯುತ್ ಗುತ್ತಿಗೆದಾರರ ಮತ್ತು ಹೆಸ್ಕಾಂ ಇಲಾಖೆಯ ಸೇವೆಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ಗುತ್ತಿಗೆದಾರರ ಸಂಘದವರು ಸಲ್ಲಿಸಿದ ಬೇಡಿಕೆಯಂತೆ ಪಟ್ಟಣದಲ್ಲಿ ಅವರ ಕಾರ್ಯಾಲಯದ ಕಟ್ಟಡಕ್ಕಾಗಿ ನಿವೇಶನವನ್ನು ಮಂಜೂರು ಮಾಡಲು ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶ್ಯಾಮಸುಂದರ ಕೆ. ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘವು ಸ್ಥಾಪನೆಯಾಗಿ ನೂರು ವರ್ಷಗಳಾಗುತ್ತಿದ್ದು, ಸಂಘವು ರಾಜ್ಯದ್ಯಂತ 18ಸಾವಿರ ಸದಸ್ಯರನ್ನು ಹೊಂದಿದ್ದು, ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದೆ ಎಂದು ತಿಳಿಸಿ, ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವ ರಾಜ್ಯಾಧ್ಯಕ್ಷ ಸಿ. ರಮೇಶ ವಹಿಸಿದ್ದರು. ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ ಗುನಗಿ, ಹೆಸ್ಕಾಂ ಎಇಇ ದೀಪಕ ಗುನಗಿ, ಸಂಘದ ಪ್ರಮುಖರಾದ ಶಿವಾನಂದ ಬಾಳಪ್ಪನವರ, ಸಿದ್ಧಾರ್ಥ ನಾಯ್ಕ್, ನಾಗರಾಜ ಕುನೂರ, ಸುಬ್ರಾಯ್ ನಾಯ್ಕ, ಹಳಿಯಾಳ ತಾಲೂಕು ಅಧ್ಯಕ್ಷ ನವೀನ ಬಿಜಾಪುರ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಬೂದಪ್ಪನವರ, ಸುನಂದ ಜಾಧವ, ಮೌಸಿನಖಾನ್ ಗೋರಿಖಾನ್, ತೌಸಿಫ್ ಖಾನ್ ಎಸ್.ಕೆ., ಸುನೀತಾ ಬೆಳಗಾಂವಕರ ಹಾಗೂ ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ ಹಾಗೂ ಇತರರು ಇದ್ದರು.